ಇಂದು ಹೊಸಬರ ಸಿನಿಮಾ ತೆರೆಗೆ

ಇಂದು ಬಹುತೇಕ ಹೊಸಬರ ಸಿನಿಮಾಗಳೇ ತೆರೆ ಕಾಣುತ್ತಿದೆ. ಬೇಸಿಗೆ ರಜೆ, ಐಪಿಎಲ್‌, ಚುನಾವಣೆ ಹಿನ್ನೆಲೆಯಲ್ಲಿ ಸ್ಟಾರ್‌ ನಟರ ಸಿನಿಮಾ ಇಳಿಕೆಯಾಗಿದ್ದು, ಈ ಅವಕಾಶ ಬಳಸಿಕೊಂಡು ಹೊಸಬರು ತಮ್ಮ ಸಿನಿಮಾಗಳನ್ನು ತೆರೆಗೆ ತರುತ್ತಿದ್ದಾರೆ.

‘O2’: 

ಆಶಿಕಾ ರಂಗನಾಥ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘O2’ ತೆರೆ ಕಾಣುತ್ತಿದೆ. ರಾಘವ್ ನಾಯಕ್ ಹಾಗೂ ಪ್ರಶಾಂತ್ ರಾಜ್ ರಚಿಸಿ, ನಿರ್ದೇಶಿಸಿರುವ ಈ ಸಿನಿಮಾ ಮೆಡಿಕಲ್ ಥ್ರಿಲ್ಲರ್‌ ಜಾನರ್‌ನಲ್ಲಿದೆ. ಪಿಆರ್‌ಕೆ ಬ್ಯಾನರ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ನಿರ್ಮಾಣದ ಹತ್ತನೇ ಚಿತ್ರ ಇದಾಗಿದೆ. ಪ್ರವೀಣ್ ತೇಜ್, ರಾಘವ್ ನಾಯಕ್, ಸಿರಿ ರವಿಕುಮಾರ್, ಪ್ರಕಾಶ್ ಬೆಳವಾಡಿ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.

ಸಾಯುತ್ತಿರುವವರನ್ನು ಬದುಕಿಸುವುದೇ ವೈದ್ಯರ ಕರ್ತವ್ಯ ಎಂದು ನಂಬುವ ‘ಶ್ರದ್ಧಾ’ (ಆಶಿಕಾ ರಂಗನಾಥ್), ಸಂಶೋಧನೆ ನಡೆಸಿ ‘O2’ ಎಂಬ ಔಷಧದ ಮೂಲಕ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವವರನ್ನು ಬದುಕಿಸುವ ಪ್ರಯತ್ನಕ್ಕೆ ಮುಂದಾಗುತ್ತಾಳೆ. ಎಲ್ಲಾ ಅಡೆತಡೆಗಳನ್ನು ಮೀರಿ ಗುರಿ ತಲುಪಲು ಶ್ರದ್ಧಾಳಿಗೆ ಸಾಧ್ಯವೇ ಎನ್ನುವುದು ಚಿತ್ರದ ಕಥೆಯಾಗಿದೆ.

ಸಾಮ್ರಾಟ್ ಮಾಂಧಾತ:

ಹೇಮಂತ್ ಪ್ರೊಡಕ್ಷನ್ಸ್ ಮೂಲಕ ಹೇಮಂತ್ ಕುಮಾರ್ ನಿರ್ಮಾಣ‌ ಹಾಗೂ ನಿರ್ದೇಶನ ಮಾಡಿರುವ ಸಿನಿಮಾ ಸಾಮ್ರಾಟ್ ಮಾಂಧಾತ. ಯುವನಾಶ್ವ ಮಹಾರಾಜನ ಮಗನಾದ ಮಾಂಧಾತನ ಕಥೆಯನ್ನು ಚಿತ್ರದ ಮೂಲಕ ಹೇಮಂತ್ ಹೇಳಿದ್ದಾರೆ.ಚಿತ್ರದಲ್ಲಿ ಅಭಿನಯಿಸಿರುವ ಎಲ್ಲರೂ ರಂಗಭೂಮಿ ಕಲಾವಿದರಾಗಿದ್ದಾರೆ.  ‘ಮಾಂಧಾತ’ನಾಗಿ ರಂಗಭೂಮಿ ಕಲಾವಿದ ಬಸವರಾಜು ನಟಿಸಿದ್ದಾರೆ. ಸುಂದರಬಾಬು, ಭಾರತಿ, ನಂಜುಂಡಪ್ಪ, ನರಸಿಂಹಮೂರ್ತಿ, ಮಂಜುನಾಥ ತಾರಾಬಳಗದಲ್ಲಿದ್ದಾರೆ.

ಪುಕ್ಸಟ್ಟೆ ಪೈಸ:

‘ಇಂಚರ ಪಿಕ್ಚರ್ಸ್’ ಬ್ಯಾನರಿನಲ್ಲಿ ಮಧುಸೂಧನ ಎ. ಎಸ್ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ಮಾಣ, ಆಕ್ಷನ್‌ ಕಟ್‌ ಹೇಳಿದ್ದಾರೆ. ಇದೊಂದು ಕಾಮಿಡಿ, ಥ್ರಿಲ್ಲರ್ ಶೈಲಿಯ ಸಿನಿಮಾವಾಗಿದ್ದು, ಪುಕ್ಸಟ್ಟೆ ಹಣದ ಮೇಲಿನ ಆಸೆಯಿಂದ ಅದರ ಹಿಂದೆ ಬಿದ್ದವರ ಒದ್ದಾಟ, ಪರದಾಟ ಚಿತ್ರದ ಕಥೆಯಾಗಿದೆ.

ಭರತ್ ಶೆಟ್ಟಿ, ಅಕ್ಷತಾ ಕುಕಿ, ಮಹೇಶ್ ಬಾಬು, ಸಯ್ಯದ್, ರಕ್ಷಿತಾ ಮಲ್ಲಿಕಾರ್ಜುನ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ನಾಲ್ಕನೇ ಆಯಾಮ:

‘ಪ್ರೇಮಗೀಮ ಜಾನೆದೋ’ ಚಿತ್ರದ ಮೂಲಕ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಗೌತಮ್ ನಿರ್ದೇಶನದ ಸಿನಿಮಾ ಇದಾಗಿದೆ. ಗೌತಮ್ ನಾಯಕನಾಗಿ ನಟಿಸಿದ್ದಾರೆ. ‘ಲವ್‌ 360’ ಖ್ಯಾತಿಯ ರಚನಾ ಇಂದರ್ ಚಿತ್ರದ ನಾಯಕಿ. ನಟ ಮಾಸ್ಟರ್ ಆನಂದ್ ಮಗಳು ಅಂಜನಿ ವಂಶಿಕಾ ಕಶ್ಯಪ್, ಅಮಿತ್ ಗೌಡ, ಯಶಸ್ವಿನಿ ಎಂ., ವಿನ್ಸೆಂಟ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ, ಅರುಣ್ ಛಾಯಾಗ್ರಹಣ, ಉಗ್ರಂ ಶ್ರೀಕಾಂತ್ ಸಂಕಲನ ಇದೆ.

ಚಿರತೆ ಬಂತು ಚಿರತೆ:

ಜೆ.ಆರ್.ಕೆ. ವಿಷನ್ಸ್ ಸಂಸ್ಥೆಯ ಜಗದೀಶ್ ಮಲ್ನಾಡ್ ನಿರ್ಮಾಣ, ಸಿ.ಆರ್.ಕೃಷ್ಣಮೂರ್ತಿ (ಬೆನಕ ಕಿಟ್ಟಿ) ನಿರ್ದೇಶನದ ಚಿತ್ರ ಚಿರತೆ ಬಂತು ಚಿರತೆ. ಈಗಾಗಲೇ ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಸಿನಿಮಾ ಪ್ರದರ್ಶನ ಕಂಡು ಪ್ರಶಸ್ತಿ ಪಡೆದಿದೆ. ಮಾನವ -ಪ್ರಾಣಿ ಸಂಘರ್ಷ, ಸಹಬಾಳ್ವೆ, ವನ್ಯಜೀವಿ ಸಂರಕ್ಷಣೆ ಮುಂತಾದ ವಿಷಯಗಳು ಸಿನಿಮಾದಲ್ಲಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!