ನಿರ್ದೇಶನ: ಎ ಹರ್ಷ
ನಿರ್ಮಾಪಕರು: ಜಯಣ್ಣ ಮತ್ತು ಭೋಗೇಂದ್ರ
ತಾರಾ ಬಳಗ: ಶಿವರಾಜ್ ಕುಮಾರ್, ಭಾವನಾ, ಶ್ರುತಿ, ಸೌರವ್ ಲೋಕಿ.
ರೇಟಿಂಗ್: ****
ಈ ಹಿಂದೆ ಬಂದ ಭಜರಂಗಿ ಸಿನಿಮಾದ ಜೊತೆ ಯಾವುದೇ ಸಂಬಂಧ ಹೊಂದದೆ ಇರುವ ಭಜರಂಗಿ 2 ಸಿನಿಮಾ ಫ್ಯಾಂಟಸಿ ಚಿತ್ರ. ಆಯುರ್ವೇದ ಔಷಧ ಪದ್ಧತಿಯ ಧನ್ವಂತರಿ ಮೂಲ ಜನಾಂಗವನ್ನು ಆಧರಿಸಿ ಕಥೆ ಮಾಡಿರುವ ನಿರ್ದೇಶಕರು ಇಲ್ಲಿ ದುಷ್ಟರಿಗೆ ಶಿಕ್ಷೆ ತಪ್ಪಿದ್ದಲ್ಲ ಎನ್ನುವ ಸಂದೇಶ ನೀಡುವ ಯತ್ನ ಮಾಡಿದ್ದಾರೆ. ವಿದ್ಯೆ ಇದ್ದರೂ ಬುದ್ಧಿ ಇಲ್ಲದ ಧನ್ವಂತರಿ ಮೂಲ ಜನಾಂಗದ ಮುಗ್ಧ ಜನರನ್ನು ಕೆಲವರು ಬಳಸಿಕೊಂಡು ಮಾದಕ ದ್ರವ್ಯ ತಯಾರಿಸುವ ಕಥಾ ಹಂದರ ಇಲ್ಲಿದೆ. ಮಾದಕದ್ರವ್ಯ ಹಿಂದೆಯೂ ಇತ್ತು ಎನ್ನುವುದನ್ನು ನಿರ್ದೇಶಕರು ಚಿತ್ರದ ಮೂಲಕ ನಿರೂಪಿಸುವ ಯತ್ನ ಮಾಡಿದ್ದಾರೆ.
ಎರಡು ಭಿನ್ನ ಶೇಡ್ ಗಳಲ್ಲಿ ಗೆ ದುಷ್ಟರನ್ನು ಎದುರುಗೊಳ್ಳುವ ನಾಯಕ ಅಂತಿಮವಾಗಿ ದುಷ್ಟರ ಅಟ್ಟಹಾಸವನ್ನು ಕೊನೆಗಾಣಿಸುತ್ತಾನೆ. ಇಲ್ಲಿ ನಿರ್ದೇಶಕ ಹರ್ಷ ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು ಎನ್ನುವ ಫಿಲಾಸಫಿ ಆಧಾರದಮೇಲೆ ಸಿನಿಮಾ ಕಟ್ಟುವ ಯತ್ನ ಮಾಡಿದ್ದಾರೆ.
ಫ್ಯಾಂಟಸಿ ಚಿತ್ರಗಳನ್ನು ತೆರೆಯ ಮೇಲೆ ತರುವುದು ಬಹುದೊಡ್ಡ ಸವಾಲು. ಸೃಜನಶೀಲತೆ, ದುಬಾರಿ ನಿರ್ಮಾಣ ವೆಚ್ಚ ಈ ಎಲ್ಲದರ ನಡುವೆಯೂ ನಿರ್ದೇಶಕರು ಈ ರೀತಿಯ ಸಾಹಸದಲ್ಲಿ ಯಶಸ್ವಿಯಾದಂತೆ ಕಾಣುತ್ತಾರೆ.
ಆರಂಭದಲ್ಲಿ ಒಂದೊಂದೇ ಪಾತ್ರಗಳನ್ನು ಪರಿಚಯಿಸುವ ನಿರ್ದೇಶಕರು, ದ್ವಿತಿಯಾರ್ಧದಲ್ಲಿ ಪಾತ್ರಗಳಿಗೆ ಸಿಗಬೇಕಾದ ಮನ್ನಣೆ ಕೊಡುವಲ್ಲಿ ತುಸು ಎಡವಿದ್ದಾರೆ. ಆರಂಭದಲ್ಲಿ ಗಮನಸೆಳೆಯುವ ಶ್ರುತಿ, ಭಾವನಾ ಅವರ ಪಾತ್ರಗಳು ಎಲ್ಲಿ ಎನ್ನುವ ಪ್ರಶ್ನೆ ಪ್ರೇಕ್ಷಕರನ್ನು ಕಾಡುತ್ತದೆ. ಕಥೆಯ ವಿಸ್ತಾರತೆ ಸಾಕಷ್ಟು ದೊಡ್ಡದಾಗಿ ಇರುವುದೇ ಇದಕ್ಕೆ ಕಾರಣ ಎನ್ನಬಹುದೇನೋ.
ಚಿತ್ರಕಥೆಯನ್ನು ಇನ್ನಷ್ಟು ಬಿಗಿಗೊಳಿಸಿದ್ದರೆ ಚಿತ್ರ ತೆರೆಯ ಮೇಲೆ ಇನ್ನೂ ವಿಜೃಂಭಿಸುತ್ತಿತ್ತು ಎಂದು ಹೇಳಬಹುದು. ಶಿವರಾಜಕುಮಾರ್ ಎರಡು ಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದು ಸನ್ನಿವೇಶವನ್ನು ಅರಿತು ಉತ್ತಮವಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಶ್ರುತಿ ಹಾಗೂ ಭಾವನಾ ಅವರಿಗೆ ವೃತ್ತಿ ಜೀವನದ ವಿಶಿಷ್ಟ ಪಾತ್ರಗಳು ಲಭಿಸಿವೆ. ಚಿತ್ರದ ಪ್ರಮುಖ ನಾಲ್ಕು ಪಾತ್ರಗಳಾದ ಅಜಾನುಬಾಹು ಪ್ರಸನ್ನ, ಲೋಕಿ, ಗಿರೀಶ್, ಚೆಲುವರಾಜು ಇವರ ಪಾತ್ರಗಳು ವೀಕ್ಷಕರ ಮನಸ್ಸಿನಲ್ಲಿ ಉಳಿಯುವಂತೆ ನಿರ್ದೇಶಕರು ಪಾತ್ರಗಳನ್ನು ದುಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ನಿರ್ದೇಶಕರ ಶ್ರಮಕ್ಕೆ ಪೂರಕವಾಗಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಛಾಯಾಗ್ರಾಹಕ ಸ್ವಾಮಿ, ಕಲಾ ನಿರ್ದೇಶಕ ರವಿ ಸಂತೆಹಕ್ಲು ಕೆಲಸ ಮಾಡಿದ್ದು ಚಿತ್ರ ಉತ್ತಮವಾಗಿ ಬರಲು ಕೈಜೋಡಿಸಿದ್ದಾರೆ.
ಮುಗ್ಧರಿಗೆ ಮಿಡಿಯುವ ವ್ಯಕ್ತಿಯಾಗಿ, ಅಮಾಯಕ ಪ್ರೇಮಿ, ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿರುವ ಶಿವರಾಜ್ ಕುಮಾರ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗುತ್ತಾರೆ. ಭಜರಂಗಿ2 ಅಭಿಮಾನಿಗಳ ಸಿನಿಮಾ ಎಂದರೂ ತಪ್ಪಾಗಲಾರದು.
Be the first to comment