ಚಿತ್ರ: 100
ನಿರ್ದೇಶನ: ರಮೇಶ್ ಅರವಿಂದ್
ನಿರ್ಮಾಣ: ಎಂ ರಮೇಶ್ ರೆಡ್ಡಿ
ತಾರಾಗಣ: ರಮೇಶ್ ಅರವಿಂದ್, ರಚಿತಾ ರಾಮ್, ಪೂರ್ಣ
ರೇಟಿಂಗ್ : 4/5
ಇನ್ಸ್ಪೆಕ್ಟರ್ ವಿಷ್ಣು ಸೈಬರ್ ಕ್ರೈಮ್ ವಿಭಾಗದಲ್ಲಿ ಕೆಲಸ ಮಾಡುವ ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿ. ನಗರದಲ್ಲಿ ಸೈಬರ್ ಗೆ ಸಂಬಂಧಿಸಿದ ಅಪರಾಧಗಳು ಹೆಚ್ಚಿದ ಹಿನ್ನೆಲೆಯಲ್ಲಿ ಕುತಂತ್ರಿ ಪೊಲೀಸರ ಮತ್ತು ರಾಜಕಾರಣಿಗಳ ಫೋನ್ ಕಾಲ್ ಕದ್ದಾಲಿಕೆಗೆ ಅನುಮತಿ ನೀಡಲಾಗುತ್ತದೆ. ಆದರೆ ವಿಷ್ಣು ತನ್ನ ಪರಿಧಿಯನ್ನು ಮೀರಿದಾಗ ಏನಾಗುತ್ತದೆ ಎನ್ನುವುದೇ ಚಿತ್ರದ ಪ್ರಮುಖ ಅಂಶ.
ವಿಷ್ಣು ವೈಯಕ್ತಿಕವಾಗಿ ಸಾಮಾಜಿಕ ಜಾಲತಾಣಗಳ ಬಗ್ಗೆ ಅಷ್ಟೊಂದು ಅಪ್ಡೇಟ್ ಆಗಿರುವ ವ್ಯಕ್ತಿ ಅಲ್ಲ. ಪತ್ನಿಯೂ ಅಷ್ಟೇ. ತಾನಾಯಿತು ತನ್ನ ಮನೆಯಾಯಿತು ಎನ್ನುವುದು ಆಕೆಯ ಸ್ವಭಾವ. ಆದರೆ ಆತನ ತಂಗಿ ಹಾಗಲ್ಲ. ಸದಾ ಸಾಮಾಜಿಕ ಜಾಲತಾಣದಲ್ಲೇ ಸಕ್ರಿಯಳಾಗಿರುವವಳು. ಆದರೆ ಈ ನಡುವೆ ಆತನ ಪತ್ನಿಗೆ ಒಂದು ಫೋನ್ ಬರುತ್ತದೆ. ಅದು ಅದನ್ನು ಕದ್ದಾಲಿಸಿದಾಗ ಯಾರೋ ಅನಾಮಧೇಯ ಪ್ರಿಯಕರನ ಕರೆಯಂತೆ ಗೋಚರಿಸುತ್ತದೆ. ಅದು ತನಕ ವೃತ್ತಿಯಲ್ಲಿ ಮಾತ್ರ ಗುರಿ ಇರಿಸಿಕೊಂಡಿದ್ದ ನಾಯಕ ಇಂಥದೊಂದು ಘಟನೆಯ ಬಳಿಕ ತಲೆಕೆಡಿಸಿಕೊಳ್ಳುತ್ತಾನೆ. ಆತನ ಮುಂದಿನ ನಡೆ ಏನು? ನಿಜಕ್ಕೂ ಆತನ ಪತ್ನಿಗೊಬ್ಬ ಪ್ರಿಯಕರ ಇರುವುದು ನಿಜವೇ? ತಂಗಿಗೆ ಸಾಮಾಜಿಕ ಜಾಲತಾಣದಿಂದ ಎದುರಾಗುವ ಅಪಾಯವೇನು? ಅದರ ಹಿಂದಿನ ಸೂತ್ರಧಾರಿ ಯಾರು ಎನ್ನುವುದನ್ನು ಆಸಕ್ತಿಕರವಾಗಿ ಹೊರಗೆಡಹುವ ಚಿತ್ರವೇ ‘100’.
ಪೊಲೀಸ್ ಅಧಿಕಾರಿ ವಿಷ್ಣುವಾಗಿ ರಮೇಶ್ ಅರವಿಂದ್ ನಟನೆ ಎಂದಿನಂತೆ ಆಕರ್ಷಕ. ಫ್ಯಾಮಿಲಿ ಹೀರೋವಾಗಿ ಖ್ಯಾತಿ ಪಡೆದಿರುವ ಅವರು ಇದರಲ್ಲಿ ಫ್ಯಾಮಿಲಿ ಜೊತೆಗೆ ಕ್ರಿಮಿನಲ್ ಗಳೊಡನೆ ಡೀಲ್ ಮಾಡುವ ಎರಡು ಮುಖಗಳುಳ್ಳ ನಾಯಕನಾಗಿದ್ದಾರೆ. ಪತ್ನಿಯಾಗಿ ನಟಿ ಪೂರ್ಣ ಒಂದು ಆಕರ್ಷಕ ಪಾತ್ರದ ಮೂಲಕ ಮರಳಿದ್ದಾರೆ. ರಚಿತಾ ರಾಮ್ ತಂಗಿಯಾಗಿ ಅಭಿನಯಿಸಿದ್ದರೂ ಚಿತ್ರದ ಪ್ರಮುಖ ಘಟನೆಗೆ ಸಾಕ್ಷಿಯಾಗುವ ಸಂದರ್ಭವಿದೆ.
ರಮೇಶ್ ಅವರ ನಟನೆಯದು ಒಂದು ತೂಕವಾದರೆ ನಿರ್ದೇಶನದಲ್ಲಿ ಮತ್ತೊಂದು ತೂಕ. ಪಾತ್ರಗಳ ಆಯ್ಕೆಯಲ್ಲಿ ಕೂಡ ರಮೇಶ್ ಮಾಡಿರುವ ಆಯ್ಕೆ ಉತ್ತಮವಾಗಿದೆ. ಅದರಲ್ಲಿಯೂ ಖಳನಾಯಕನಾಗಿ ನಟಿಸಿರುವ ವಿಶ್ವಕರ್ಣ ಅವರು ಅದ್ಭುತವಾಗಿ ಕಾಣಿಸುತ್ತಾರೆ. ಮೈಕಟ್ಟು ಮತ್ತು ನಟನೆಯಿಂದ ಮನಸೂರೆಗೊಳ್ಳುವ ಅವರು ಮುಂದಿನ ದಿನಗಳಲ್ಲಿ ನಾಯಕರಾಗಿ ಗುರುತಿಸಿಕೊಂಡರೆ ಅಚ್ಚರಿ ಇಲ್ಲ.
ಸಿನಿಮಾ ಕತೆಯ ಮೂಲಕ ಸಂದೇಶವನ್ನು ಮತ್ತು ದೃಶ್ಯಗಳ ಮೂಲಕ ಮನರಂಜನೆಯನ್ನು ಮೂಡಿಸುವಂಥ ಚಿತ್ರ ಇದು. ಜೊತೆಯಲ್ಲಿ ಎಲ್ಲರ ಮನೆಗಳಲ್ಲಿ ಒಂದು ಸಭ್ಯ ಎಚ್ಚರಿಕೆಯನ್ನು ಸೃಷ್ಟಿಸುವ 100ಖಂಡಿತವಾಗಿ ಎಲ್ಲರೂ ನೋಡಬೇಕಾದ ಸಿನಿಮಾ.
@ಭೀಮರಾಯ
Be the first to comment