ಫ್ಯಾಮಿಲಿ ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ ‘ಮಿಸ್‌ಮ್ಯಾಚ್’ ಚಿತ್ರದ ಟೀಸರ್ ಬಿಡುಗಡೆಯಾಗಿ ಕುತೂಹಲ ಮೂಡಿಸಿದೆ.
ಮಲೆನಾಡಿನ ಸೊಗಡಿನಲ್ಲಿ ಮೂಡಿ ಬಂದಿರುವ ಟೀಸರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆ ಆಗುತ್ತಿದೆ. ಚಿತ್ರತಂಡ ಹೊಸ ರೀತಿಯಲ್ಲಿ ಟೀಸರ್ ಬಿಡುಗಡೆ ಮಾಡಿದ್ದು ವೆಬ್ ಸೈಟ್ ಮೂಲಕ ಟೀಸರ್ ವೀಕ್ಷಣೆಗೆ ಜನರನ್ನು ಆಹ್ವಾನಿಸುತ್ತಿದ್ದಾರೆ.ಚಿತ್ರತಂಡ https://www.missmatchthefilm.in/ ವೆಬ್ ಸೈಟ್ ಮೂಲಕ ವಿಭಿನ್ನವಾಗಿ ಟೀಸರ್ ಬಿಡುಗಡೆ ಮಾಡಿದೆ.
ಸಾಯಿ ಶ್ರೀನಿಧಿ ಅವರು ‘ಮಿಸ್ ಮ್ಯಾಚ್’ ಚಿತ್ರವನ್ನು ನಿರ್ದೇಶಿಸುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸಾಯಿ ಶ್ರೀನಿಧಿ ಕಥೆ, ಚಿತ್ರಕಥೆ, ಬರೆದ ಚಿತ್ರಕ್ಕೆ ಜುಡಾ ಸ್ಯಾಂಡಿ ಸಂಗೀತ ಸಂಯೋಜನೆ ಮಾಡಿದ್ದಾರೆ. 4 ಹಾಡುಗಳಿದ್ದು 3 ಹಾಡುಗಳನ್ನು ಜೂಡಾ ಸ್ಯಾಂಡಿ ಹಾಡಿದ್ದಾರೆ. ಒಂದು ಹಾಡಿಗೆ ಲಕ್ಷ್ಮೀ ಬೆಳ್ಮಣ್ಣು ಧ್ವನಿಯಾಗಿದ್ದಾರೆ.
ಮೇಘನಾ (ಅಶ್ವಿತಾ ಹೆಗ್ಡೆ) ಸಣ್ಣ ಊರಿನ ಸಂಕುಚಿತ ಮನೋಭಾವದ ಬದುಕಿನಿಂದ ಹೊರಬಂದು ನಗರದಲ್ಲಿ ಸ್ವತಂತ್ರವಾಗಿ ಬದುಕಬೇಕು ಎಂಬ ಕನಸು ಕಾಣುತ್ತಿರುವ ಹುಡುಗಿ. ಆಕಾಶ್ (ಕೌಶಿಕ್ ಗೌಡ) ನಗರವನ್ನು ತೊರೆದು ತನ್ನ ಊರಿನಲ್ಲೇ ಏನಾದರೂ ಅರ್ಥಪೂರ್ಣವಾದುದನ್ನು ಮಾಡಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ತನ್ನದೇ ದಾರಿಯನ್ನು ಕಟ್ಟಿಕೊಳ್ಳುತ್ತಿರುವ ಯುವಕ. ಪ್ರೀತಿ ವಹಿವಾಟಿನಂತೆ ಆಗಿರುವ ಇಂದಿನ ಸಮಯದಲ್ಲಿ, ಈ ಇಬ್ಬರ ವಿಭಿನ್ನ ಜಗತ್ತುಗಳು ಒಂದಾದಾಗ ಅಲ್ಲಿ ಪ್ರೀತಿ-ಪ್ರೇಮ-ಸ್ನೇಹ ಮತ್ತು ಬಾಂಧವ್ಯಗಳ ನಡುವೆ ನಡೆಯುವ ಹಾಸ್ಯ ಮತ್ತು ಭಾವನಾತ್ಮಕ ನಂಟೇ ‘ಮಿಸ್ ಮ್ಯಾಚ್’ ಸಿನಿಮಾದ ಕಥೆ ಎನ್ನುತ್ತಾರೆ ನಿರ್ದೇಶಕ ಸಾಯಿ ಶ್ರೀನಿಧಿ.
ಗಣೇಶ್ ಮಹಾಬಲ ಛಾಯಾಗ್ರಹಣ ಹಾಗೂ ದೀಪಕ್ ಕುಲಾಲ್ ಸಂಕಲನ ಮಾಡಿದ್ದಾರೆ. ತೇಜಸ್ ವೆಂಕಟೇಶ್ ಅವರು ತೇಜಸ್ ಪಬ್ಲಿಕೇಶನ್ ಮತ್ತು ಸಟಾಯರ್ ಸಂಸ್ಥೆ ಮುಖೇನ “ಮಿಸ್ ಮ್ಯಾಚ್” ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
—-





Be the first to comment