ನಿರ್ದೇಶಕ: ಅಭಿಷೇಕ್ ಬಸಂತ್
ನಿರ್ಮಾಪಕ: ಡಿಕೆ ದೇವೇಂದ್ರ
ತಾರಾಬಳಗ: ಸಂಯುಕ್ತ ಹೆಗ್ಡೆ, ಅಗ್ನಿ ಶ್ರೀಧರ್, ಅಚ್ಚುತ್ ಕುಮಾರ್, ಅರುಣ್ ಸಾಗರ್ ಇತರರು
ರೇಟಿಂಗ್: 3.5/5
ಕ್ಷುದ್ರ ಜಗತ್ತಿನ ಕರಾಳ ಬದುಕನ್ನು ತೆಗೆದಿಡುವ ಚಿತ್ರವಾಗಿ ಕ್ರೀಮ್ ಈ ವಾರ ತೆರೆಯ ಮೇಲೆ ಬಂದಿದೆ.
ಈ ಹಿಂದೆ ಹಲವು ಭೂಗತ ಲೋಕದ ಚಿತ್ರಗಳಿಗೆ ಕಥೆ ಬರೆದಿದ್ದ ಅಗ್ನಿ ಶ್ರೀಧರ್ ಈ ಚಿತ್ರದ ಮೂಲಕ ಕ್ಷುದ್ರ ಲೋಕದ ಇನ್ನೊಂದು ಭೂಗತ ಲೋಕವನ್ನು ಪರಿಚಯಿಸಿದ್ದಾರೆ. ಇಲ್ಲಿ ಅಧಿಕಾರಕ್ಕಾಗಿ ನಡೆಯುವ ಸದ್ದಿಲ್ಲದ ತಂತ್ರಗಳು ಗಮನ ಸೆಳೆಯುತ್ತವೆ. ಮಾಟ, ಮಂತ್ರ, ವಾಮಾಚಾರದ ಮೂಲಕ ಕ್ಷುದ್ರ ಲೋಕವನ್ನು ಚಿತ್ರದಲ್ಲಿ ಪರಿಚಯಿಸಲಾಗಿದೆ.
ಕ್ಷುದ್ರ ಆರಾಧಕ ವ್ಯಾಪಾರಿಯ ಜಗತ್ತಿನಲ್ಲಿ ಹುಡುಗಿಯೊಬ್ಬಳು ಎಂಟ್ರಿ ಕೊಟ್ಟ ಕೂಡಲೇ ತಲ್ಲಣ ಆರಂಭವಾಗುತ್ತದೆ. ವ್ಯಾಪಾರಿಯ ಗುಂಪಿನಲ್ಲಿ ನಿಗೂಢ ಸಾವುಗಳು ಶುರುವಾಗುತ್ತವೆ. ಆ ಯುವತಿ ಯಾರು? ಅವಳು ಅಲ್ಲಿಗೆ ಯಾಕೆ ಬರುತ್ತಾಳೆ ಎನ್ನುವ ಪ್ರಶ್ನೆಗಳಿಗೆ ಕ್ರೀಮ್ ಚಿತ್ರದಲ್ಲಿ ಉತ್ತರ ಇದೆ.
ಚಿತ್ರದಲ್ಲಿ ಕ್ಷುದ್ರ ದೇವತೆಗಳ ಆರಾಧನೆ, ಕ್ರೌರ್ಯ ಇದೆ. ಇದನ್ನು ದುರ್ಬಲ ಹೃದಯದವರು ಅರಗಿಸಿಕೊಳ್ಳುವುದು ಬಹಳ ಕಷ್ಟ. ಕ್ಷುದ್ರ ಆರಾಧನೆಯನ್ನು ಮೆಟ್ಟಿ ನಿಲ್ಲುವ ಹೋರಾಟದ ದೃಶ್ಯವನ್ನು ಹಾಡಿನ ಮೂಲಕ ಚಿತ್ರದಲ್ಲಿ ಹೇಳಲಾಗಿದೆ.
ಚಿತ್ರ ಕೆಲವೇ ಪಾತ್ರಗಳ ಸುತ್ತ ಸುತ್ತುತ್ತದೆ. ಚಿತ್ರದ ಮೇಕಿಂಗ್ ಉತ್ತಮವಾಗಿದ್ದು ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಲೈಟಿಂಗ್ ಎಲ್ಲವೂ ಖುಷಿ ನೀಡುತ್ತವೆ. ಹೊಸ ಬಗೆಯಲ್ಲಿ ಚಿತ್ರವನ್ನು ಕಟ್ಟಿಕೊಡುವ ಮೂಲಕ ನಿರ್ದೇಶಕರು ಗೆದ್ದಿದ್ದಾರೆ.
ಇಲ್ಲಿವರೆಗೆ ಅಭಿನಯಿಸದೇ ಇರುವ ಪಾತ್ರದಲ್ಲಿ ಸಂಯುಕ್ತ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಅಗ್ನಿ ಶ್ರೀಧರ್ ತಮ್ಮ ಗತ್ತು, ಗಾಂಭೀರ್ಯದ ಮೂಲಕ ಗಮನ ಸೆಳೆಯುತ್ತಾರೆ. ಅಚ್ಚುತ್ ಕುಮಾರ್, ಅರುಣ್ ಸಾಗರ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಚಿತ್ರಕ್ಕೆ ಎಷ್ಟು ಬೇಕೋ ಅಷ್ಟು ಚಿತ್ರಕಥೆಯನ್ನು ಅಗ್ನಿ ಶ್ರೀಧರ್ ಬರೆದಿದ್ದಾರೆ. ಎರಡು ಗಂಟೆಯ ಅವಧಿಯೊಳಗೆ ಚಿತ್ರ ಮುಗಿದು ಹೋಗುತ್ತದೆ. ಮಾತಿಗಿಂತ ಮೌನಕ್ಕೆ ಚಿತ್ರದಲ್ಲಿ ಪ್ರಾಶಸ್ಯ ನೀಡಲಾಗಿದೆ.
ಅಲೌಕಿಕ ಲೋಕದ ಕಥೆಯನ್ನು ಹೊಂದಿರುವ ಸಿನಿಮಾ ಇಷ್ಟಪಡುವವರಿಗೆ ಈ ಚಿತ್ರ ಒಳ್ಳೆಯ ಟ್ರೀಟ್ ನೀಡಬಹುದು.
__
Be the first to comment