KGF Chapter 2 Review : ದೃಶ್ಯ ವೈಭವದ ಬಿರುಗಾಳಿಯ ಕೆಜಿಎಫ್‌ 2

ಸಿನಿಮಾ: ಕೆಜಿಎಫ್‌ 2 (ಕನ್ನಡ)

ನಿರ್ದೇಶನ: ಪ್ರಶಾಂತ್‌ ನೀಲ್‌

ನಿರ್ಮಾಣ: ವಿಜಯ್‌ ಕಿರಗಂದೂರು

ತಾರಾಗಣ: ಯಶ್‌, ಶ್ರೀನಿಧಿ ಶೆಟ್ಟಿ, ಸಂಜಯ್‌ ದತ್‌, ರವೀನಾ ಟಂಡನ್‌, ರಾವ್‌ ರಮೇಶ್‌, ಪ್ರಕಾಶ್‌ ರಾಜ್‌, ಮಾಳವಿಕ ಅವಿನಾಶ್‌, ಇತರರು.

ರೇಟಿಂಗ್: 4.5

ಪ್ಯಾನ್‌ ಇಂಡಿಯಾ ಸಿನಿಮಾ ಆಗಿ ಅದ್ಭುತ ಮೇಕಿಂಗ್ ಹೊಂದಿರುವ ಕೆಜಿಎಫ್ 2 ಚಿತ್ರ ಪ್ರೇಕ್ಷಕರನ್ನು ಹಿಡಿದಿಡುವ ಜೊತೆಗೆ ಹೊಸ ಅನುಭವ ನೀಡುತ್ತದೆ. ಒಟ್ಟಾರೆ ಹೈಪ್ ನೋಡಿ ಚಿತ್ರ ಮಂದಿರದ ಒಳಗೆ ಹೋದ ಪ್ರೇಕ್ಷಕನಿಗೆ ಚಿತ್ರ ನಿರಾಸೆ ಮಾಡದೆ ಹೊಸ ಅನುಭವ ನೀಡುತ್ತದೆ.

ಮೊದಲ ಭಾಗದಲ್ಲಿ ‘ಆನಂದ್‌ ಇಂಗಳಗಿ’ಯಾಗಿ ‘ರಾಕಿ ಭಾಯ್‌’ ಕಥೆಯನ್ನು ನಿರೂಪಣೆ ಮಾಡಿದ್ದ ನಟ ಅನಂತನಾಗ್‌ ಇಲ್ಲಿ ಇಲ್ಲ. ಆದರೆ ಆನಂದ್‌ ಇಂಗಳಗಿ ಮಗನಾಗಿ ವಿಜಯೇಂದ್ರ ಇಂಗಳಗಿ ಪಾತ್ರದ ಮೂಲಕ ಪ್ರಕಾಶ್‌ ರಾಜ್‌ ಎರಡನೇ ಅಧ್ಯಾಯದ ಕಥೆ ಮುನ್ನಡೆಸುತ್ತಾರೆ.

ಚಿನ್ನದ ಸಾಮ್ರಾಜ್ಯ ನಾರಾಚಿಗೆ ಹೊಸ ಅಧಿಪತಿಯಾಗಿ ರಾಕಿ ಬಾಯ್ ಬೆಳೆಯುತ್ತಾನೆ. ಬೇಡಿಯೊಳಗಿಟ್ಟು ಗರುಡನನ್ನು ಹೊಡೆದುರುಳಿಸಿದ ರಾಕಿ ಬಾಯ್ ಜನರಿಗೆ ದೇವರಾಗುತ್ತಾನೆ. ರಾಕಿ ಕಾಲು ಚಾಚಲು ಹಾಸಿಗೆಯನ್ನೇ ದೊಡ್ಡದು ಮಾಡುತ್ತಾನೆ.

ಈ ನಡುವೆ ಗರುಡ ಬದುಕಿರುವವರೆಗೂ ಕಾಲಿಡುವುದಿಲ್ಲ ಎಂದು ಮಾತು ಕೊಟ್ಟಿದ್ದ ಅಧೀರ ರಾಕಿಗೆ ಎದುರಾಗುತ್ತಾನೆ. ಅಧೀರನಾಗಿ ಸಂಜಯ್‌ ದತ್‌ ಪ್ರವೇಶ ಭರ್ಜರಿಯಾಗಿ ಮೂಡಿ ಬಂದಿದೆ. ಚಿತ್ರದ ಮೊದಲಾರ್ಧ ‘ರಾಕಿ’ ‘ಅಧೀರ’ರೇ ತುಂಬಿಕೊಳ್ಳುತ್ತಾರೆ. ಇವರಿಬ್ಬರ ಡೈಲಾಗ್‌, ದೃಶ್ಯವೈಭವ ಮೊದಲಾರ್ಧವನ್ನು ಬಿರುಗಾಳಿಯಂತೆ ಕೊಂಡೊಯ್ಯುತ್ತದೆ.

ರಾಕಿಗೆ ‘ಅಧೀರ’ನ ಜೊತೆಗೆ ಪ್ರಧಾನಿಯಾಗಿ ಆಯ್ಕೆಯಾಗುವ ‘ರಮಿಕಾ ಸೇನ್‌’(ರವೀನಾ ಟಂಡನ್‌) ಸವಾಲು ಎದುರಾಗುತ್ತದೆ. ಆದರೆ ದ್ವಿತೀಯಾರ್ಧದಲ್ಲಿ ಕಥೆ ವೇಗವಾಗಿ ಸಾಗಲು ವಿಫಲ ಆಗುತ್ತದೆ. ಆದರೆ ದ್ವಿತೀಯಾರ್ಧದ ಕೊನೆಯಲ್ಲಿ ನೀಡಿರುವ ತಿರುವು ಚಿತ್ರದ ಹೈಲೈಟ್ ಆಗಿ ಮೂಡಿ ಬಂದಿದೆ.

ರವಿ ಬಸ್ರೂರು ಸಂಗೀತ, ಕಲಾ ನಿರ್ದೇಶಕ ಶಿವಕುಮಾರ್‌ ಅವರ ಕೈಚಳಕ ಚಿತ್ರಕ್ಕೆ ಮೆರುಗು ತಂದಿದೆ. ಅಮ್ಮ–ಮಗನ ಭಾವನಾತ್ಮಕ ದೃಶ್ಯಗಳಿಗೆ ನೀಡಿದ ಸಂಗೀತ ತಂಗಾಳಿಯಂತೆ ಭಾಸವಾಗುತ್ತದೆ.

ಚಿನ್ನದ ಸಾಮ್ರಾಜ್ಯ ನಾರಾಚಿಯ ಕಥೆ ಹೇಳುವ ಚಿತ್ರ ಹಾಲಿವುಡ್ ಮಟ್ಟದಲ್ಲಿ ಇಲ್ಲ ಅಂದುಕೊಂಡರೂ, ದಿ ಬೆಸ್ಟ್ ಪ್ಯಾನ್‌ ಇಂಡಿಯಾ ಸಿನಿಮಾ ಎನಿಸಿಕೊಳ್ಳುತ್ತದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!