ಕೀರ್ತಿ ಐ ಲವ್ ಯು

ಹೊಸ ತಂಡದ ಹೊಸ ಪ್ರಯತ್ನ ‘ಕೀರ್ತಿ ಐ ಲವ್ ಯು’

ಕನ್ನಡದಲ್ಲಿ ಪ್ರೀತಿಯ ಕುರಿತಾದ ಅನೇಕ ಚಿತ್ರಗಳು ಬಂದಿದೆ. ಆದರೆ ಒಂದರ ಹಾಗೆ ಒಂದು ಇಲ್ಲ. ಅದೇ ರೀತಿ ಹೊಸತಂಡವೊಂದು “ಕೀರ್ತಿ ಐ ಲವ್ ಯು” ಎಂಬ ಲವ್ ಜಾನರ್ ನ ಚಿತ್ರವನ್ನು ತೆರೆಯ ಮೇಲೆ ತರುತ್ತಿದೆ. ಪೂಜಿತ ಎಸ್ ರಾವ್ ನಿರ್ಮಾಣದಲ್ಲಿ, ನಿರಂಜನ್ ಆರಾಧ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ನಾಯಕನಾಗಿ ಪ್ರಜ್ಯೋತ್ ಎಸ್ ರಾವ್ ನಟಿಸಿದ್ದಾರೆ. ನಿಧಿ ಗೌಡ ಈ ಚಿತ್ರದ ನಾಯಕಿ. ಇತ್ತೀಚೆಗೆ ಈ ಚಿತ್ರದ ಮೊದಲ ಹಾಡು “ಮುದ್ದಾದ ಮೂಗುತಿ” ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರಚಾರಕ್ಕೆ ಚಾಲನೆ ನೀಡಿದೆ. ಸಿರಿಮ್ಯೂಸಿಕ್ ನಲ್ಲಿ ಈ ಹಾಡು ಲಭ್ಯವಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನೃತ್ಯ ಕಲಾವಿದನಾಗಿರುವ ನನಗೆ ಮೊದಲಿನಿಂದಲೂ ನಿರ್ದೇಶನದ ಬಗ್ಗೆ ಆಸಕ್ತಿ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಪ್ರೀತಿಯ ಕುರಿತು ಹಲವು ಚಿತ್ರಗಳು ಬಂದಿದೆಯಾದರೂ ನಾವು ಈ ಚಿತ್ರದಲ್ಲಿ ಪ್ರೀತಿಯ ಬಗ್ಗೆ ಹೇಳಿರುವ ವ್ಯಾಖ್ಯಾನವೇ ಬೇರೆ. ಅದರಲ್ಲೂ ಈಗಂತೂ ಚಿಕ್ಕವಯಸ್ಸಿನಲ್ಲೇ ಲವ್, ಡೇಟಿಂಗ್‌ ಎನ್ನುತ್ತಾರೆ. ಅದೆಲ್ಲಾ ತಪ್ಪು ಎಂದು ಯುವಜನತೆಗೆ ಜಾಗೃತಿ ಮೂಡಿಸುವ ಚಿತ್ರವೂ ಹೌದು. ಪ್ರಜ್ಯೋತ್ ಎಸ್ ರಾವ್ ನಾಯಕನಾಗಿ, ನಿಧಿ ಗೌಡ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಭಿರಾಮ್ ಸಂಗೀತ ನೀಡಿರುವ ಮೂರು ಹಾಡುಗಳು ಚಿತ್ರದಲ್ಲಿದೆ. ಆ ಪೈಕಿ ಅರುಣ್ ಕುಮಾರ್ ಬರೆದು, ಆರ್ಫಾಜ್ ಉಲ್ಲಾಳ್ ಹಾಡಿರುವ ಮೊದಲ ಹಾಡು ಬಿಡುಗಡೆಯಾಗಿದೆ. ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಚಿತ್ರ ಜುಲೈ 31 ರಂದು ತೆರೆಗೆ ಬರುತ್ತಿದೆ ಎಂದು ನಿರ್ದೇಶಕ ನಿರಂಜನ್ ಆರಾಧ್ಯ ತಿಳಿಸಿದರು.

ಕೀರ್ತಿ ಐ ಲವ್ ಯು

ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ನಟನೆ ಕಲಿತಿದ್ದೇನೆ. ನಾಯಕನಟನಾಗಲು ಕಿಚ್ಚ ಸುದೀಪ್ ಅವರು ಸ್ಪೂರ್ತಿ. ಅವರು ನನ್ನ ಆರಾಧ್ಯ ದೈವ. ನನ್ನ ಅಕ್ಕ ಪೂಜಿತಾ ಎಸ್ ರಾವ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದರು ನಾಯಕ ಪ್ರಜ್ಯೋತ್ ಎಸ್ ರಾವ್.

ನನ್ನ ತಮ್ಮ ಪ್ರಜ್ಯೋತ್ ಎಸ್ ರಾವ್ ಗೆ ಮೊದಲಿನಿಂದಲೂ ನಾಯಕನಾಗಬೇಕೆಂಬ ಆಸೆ. ಅವನ‌ ಆಸೆಯನ್ನು ಈ ಚಿತ್ರ ನಿರ್ಮಾಣ ಮಾಡುವ ಮೂಲಕ ಪೂರ್ಣ ಮಾಡಿದ್ದೇನೆ. ಈಗಿನ ಯುವಜನತೆ ನೋಡಲೇ ಬೇಕಾದ ಚಿತ್ರವಿದು ಎಂದು ನಿರ್ಮಾಪಕಿ ಪೂಜಿತಾ ಎಸ್ ರಾವ್ ಹೇಳಿದರು.

ತಮ್ಮ ಪಾತ್ರದ ಬಗ್ಗೆ ನಾಯಕಿ ನಿಧಿ ಗೌಡ ತಿಳಿಸಿದರು. ಸಿರಿ ಮ್ಯೂಸಿಕ್ ಸುರೇಶ್ ಚಿಕ್ಕಣ್ಣ, ಸಂಗೀತ ನಿರ್ದೇಶಕ ಅಭಿರಾಮ್, ಛಾಯಾಗ್ರಾಹಕರಾದ ಅಭಿಷೇಕ್, ರೋಹಿತ್ ದನಿ, ಸಹ ನಿರ್ಮಾಪಕ ಯತೀಶ್ ಕುಮಾರ್, ಐ ಟು ಐ ಇನ್ಫೊಟೆಕ್ ನ ಶಮಂತ್ ಶೆಟ್ಟಿ, ನಟ ಹರೀಶ್ ಕುಮಾರ್ ಹಾಗೂ ಕಾರ್ಯಕಾರಿ ನಿರ್ಮಾಪಕ ಲಿಯಾನ್ ಗೌಡ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!