‘ಜೈಲರ್ 2’ 4 ದಿನಕ್ಕೆ 424 ಕೋಟಿ ಗಳಿಕೆ!

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’  ಚಿತ್ರ  ಬಿಡುಗಡೆಯಾದ ಕೇವಲ ನಾಲ್ಕು ದಿನಗಳಲ್ಲಿ ವಿಶ್ವಾದ್ಯಂತ 424 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ   ಆಕ್ಷನ್ ಎಂಟರ್‌ಟೈನರ್ ‘ಜೈಲರ್ 2’  ಭಾನುವಾರ ಒಂದೇ ದಿನ ಭಾರತದಲ್ಲಿ 55.85 ಕೋಟಿ ರೂಪಾಯಿ  ಗಳಿಕೆ ದಾಖಲಿಸಿದೆ. ಇದರೊಂದಿಗೆ ದೇಶೀಯ ಮಾರುಕಟ್ಟೆಯಲ್ಲಿ ಚಿತ್ರದ ಒಟ್ಟು  ಕಲೆಕ್ಷನ್ 199.90 ಕೋಟಿ ರೂಪಾಯಿಗೆ ತಲುಪಿದೆ. ವಾರಾಂತ್ಯದ ರಜೆಯ ಲಾಭ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಸಿಕ್ಕಿದೆ ಎನ್ನಲಾಗುತ್ತಿದೆ.

ವಿದೇಶಿ ಮಾರುಕಟ್ಟೆಯಲ್ಲೂ ‘ಜೈಲರ್ 2’ ಉತ್ತಮ ಪ್ರದರ್ಶನ ನೀಡಿದೆ. ವರದಿಗಳ ಪ್ರಕಾರ ವಿದೇಶಗಳಿಂದ ಸುಮಾರು 190 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಸಂಗ್ರಹವಾಗಿದೆ. ದೇಶೀಯ ಮತ್ತು ವಿದೇಶಿ ಮಾರುಕಟ್ಟೆಗಳ ಗಳಿಕೆಯನ್ನು ಸೇರಿಸಿದಾಗ ಚಿತ್ರದ ವಿಶ್ವಾದ್ಯಂತ ಗ್ರಾಸ್ ಕಲೆಕ್ಷನ್ 424.25 ಕೋಟಿ ರೂಪಾಯಿಗೆ ತಲುಪಿದೆ. ಇದೇ ವೇಗ ಮುಂದುವರಿದರೆ ಗಳಿಕೆ 500 ಕೋಟಿ ರೂಪಾಯಿಗಳ ಗಡಿ ದಾಟುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ತಮಿಳು ಆವೃತ್ತಿ ಚಿತ್ರದ ಗಳಿಕೆಯಲ್ಲಿ ಮುಂಚೂಣಿಯಲ್ಲಿದೆ ಎನ್ನಲಾಗಿದೆ. ತೆಲುಗು, ಹಿಂದಿ ಮತ್ತು ಕನ್ನಡ ಆವೃತ್ತಿಗಳೂ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುತ್ತಿವೆ. ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿರುವುದರಿಂದ ಚಿತ್ರದ ಮಾರುಕಟ್ಟೆ  ವಿಸ್ತರಿಸಿದೆ.

ಚಿತ್ರದಲ್ಲಿ ರಜನಿಕಾಂತ್ ಅವರೊಂದಿಗೆ ಶಿವರಾಜ್‌ಕುಮಾರ್, ಮೋಹನ್‌ಲಾಲ್ ಮತ್ತು ಶಮ್ನಾ ಕಾಸಿಮ್ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಅವರ  ಪ್ರಭಾವ, ನೆಲ್ಸನ್ ಅವರ ನಿರ್ದೇಶನ ಚಿತ್ರಕ್ಕೆ ಪ್ರೇಕ್ಷಕರ ಗಮನ ಸೆಳೆಯಲು ನೆರವಾಗಿವೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!