ಯಶ್ ಸಿನಿಮಾ ಅಂದರೆ ಮೊದಲ ಒಂದು ವಾರ ಟಿಕೆಟ್ ಸಿಗುವುದೇ ಕಷ್ಟ ಎನ್ನುವ ಟ್ರೆಂಡ್ ಸೃಷ್ಟಿಸಿದ್ದು ಕೆ.ಜಿ.ಎಫ್ ಸಿನಿಮಾ. ಆದರೆ ಮೊದಲ ದಿನವೇ ಟಿಕೆಟ್ ಸಿಗಬಲ್ಲದು ಎಂದು ತೋರಿಸಿಕೊಟ್ಟಿರುವುದು ಟಾಕ್ಸಿಕ್. ಇದಕ್ಕೆ ಕಾರಣವೇನು? ಕನ್ನಡದ ತಾರೆಯರು ಮಾತ್ರ ಒಂದಾಗಿ ಪ್ರೋತ್ಸಾಹಿಸಿದ್ದೇಕೆ? ಇಲ್ಲಿದೆ ಒಂದು ಪುಟ್ಟ ಅವಲೋಕನ.
ಟಾಕ್ಸಿಕ್ ಭಾರೀ ನಿರೀಕ್ಷೆ ಇದ್ದಿದ್ದೇನೋ ನಿಜ. ಆದರೆ ಟಿಕೆಟ್ ರೇಟ್ ಕೂಡ ಭಾರೀ ಆಗಿದ್ದಿದ್ದು ಮಾತ್ರ ಸುಳ್ಳಲ್ಲ. ಮಾಲ್ ಗಳಲ್ಲಿ ಸಿನಿಮಾ ನೋಡಬೇಕಾದರೆ ಮಿನಿಮಮ್ 700ರಿಂದ 2000 ರೂಪಾಯಿ ತನಕ ಟಿಕೆಟ್ ರೇಟ್ ಇತ್ತು. ಸಿಂಗಲ್ ಥಿಯೇಟರ್ ಗೆ ಹೋಗೋಣ ಅಂದರೆ ಫ್ಯಾನ್ಸ್ ಗದ್ದಲದಲ್ಲಿ ಏನೇನೂ ಅರ್ಥವಾಗುವುದೇ ಕಷ್ಟ. ವಾರಾಂತ್ಯದಲ್ಲಿ ಕುಟುಂಬ ಸಮೇತ ಹೋಗೋಣ ಅಂದರೆ ಚಿತ್ರಕ್ಕೆ ವಯಸ್ಕರ ಸರ್ಟಿಫಿಕೇಟ್ ನೀಡಲಾಗಿದೆ. ಹಾಗಾಗಿ ಮಕ್ಕಳನ್ನು ಬಿಟ್ಟು ಚಿತ್ರ ನೋಡಬೇಕು. ಇದರ ನಡುವೆ ಹೇಗೋ ಬಿಡುವು ಮಾಡಿಕೊಂಡು ಹೋಗುವ ಎಂದರೆ ಹೋದವರೆಲ್ಲ ಚಿತ್ರದ ಬಗ್ಹೆ ನೆಗೆಟಿವ್ ಹೇಳುವವರೇ. ಹಾಗಂತ ಅವರು ಯಾರೂ ಯಶ್ ವಿರೋಧಿಗಳಲ್ಲ. ಆತನ ಈ ಹಿಂದಿನ ಸಿನಿಮಾಗಳನ್ನು ನೋಡಿ ಕೊಂಡಾಡಿದವರೇ. ಇಷ್ಟೆಲ್ಲ ಸಮಸ್ಯೆಗಳಿರುವಾಗ ಜನ ಇದನ್ನು ಚಿತ್ರ್ರಮಂದಿರದಲ್ಲೇ ನೋಡಬೇಕೇ ಎನ್ನುವ ಪ್ರಶ್ನೆ ಕೇಳಿಕೊಂಡಿದ್ದಾರೆ. ಒಟಿಟಿಯಲ್ಲಿ ಬಂದಾಗಲಾದರೂ ನೋಡಬಹುದು ಎನ್ನುವ ತೀರ್ಮಾನಕ್ಕೆ ಬರುತ್ತಿದ್ದಾರೆ. ಹೀಗಾಗಿಯೇ ಬುಕ್ಕಿಂಗ್ ರಭಸ ಕಡಿಮೆಯಾಗಿದೆ. ಆದರೆ ವಿಶೇಷ ಏನೆಂದರೆ ಕನ್ನಡದ ತಾರೆಯರೆಲ್ಲ ಒಟ್ಟಾಗಿ ಬೆಂಬಲಕ್ಕೆ ನಿಂತಿದ್ದಾರೆ.
ಕನ್ನಡದ ಬಿಗ್ ಬಜೆಟ್ ಸಿನಿಮಾವೊಂದು ನೆಗೆಟಿವ್ ರಿವ್ಯು ಪಡೆಯಲು ಶುರು ಮಾಡಿದಾಗ ಆ ತಾರೆಯ ಸಹೋದ್ಯೋಗಿಗಳು ಚಿತ್ರದ ಬೆಂಬಲಕ್ಕೆ ನಿಲ್ಲುವುದು ತೀರ ಸಹಜ. ಅದು ಚಿತ್ರ ತಮಗೆ ಇಷ್ಟವಾಯಿತು ಎಂದು ಹೇಳುವಲ್ಲಿಯತನಕ ಸರಿ. ಆದರೆ ಪ್ರೇಕ್ಷಕರು ಅರ್ಥಮಾಡಿಕೊಳ್ಳುತ್ತಿಲ್ಲ, ಇದು ಅದ್ಭುತ ಸಿನಿಮಾ ಎಂದೆಲ್ಲ ಹೇಳುವುದು ಅರ್ಥ ಹೀನ. ಇದೇ ಪ್ರೇಕ್ಷಕರು ಎಷ್ಟೋ ಒಳ್ಖೆಯ ಚಿತ್ರಗಳನ್ನು ಗೆಲ್ಲಿಸಿದ್ದಾರೆ. ಅದೇ ರೀತಿ ವಲವಾರದಂಥ ಒಳ್ಖೆಯ ಚಿತ್ರಗಳನ್ನು ಯಾವ ತಾರೆಯೂ ನೋಡಿ ಬೆಂಬಲಿಸದೇ ಹೋಗಿದ್ದು ಕೂಡ ಇದೆ. ಬಿಗ್ ಬಜೆಟ್ ಸಿನಿಮಾ ಆಗಿದ್ದರೆ ಸಾಕು, ಚಿತ್ರ ಹೇಗಿದ್ದರೂ ನಾವು ಬೆಂಬಲಿಸುತ್ತೇವೆ ಎನ್ನುವ ತಾರೆಯರ ವರ್ತನೆ ನಿಜಕ್ಕೂ ಅಸಹ್ಯದ ಪರಮಾವಧಿ ಎನ್ನದೇ ಇರಲಾಗದು!





Be the first to comment