ವಿವಾದಕ್ಕೆ ಸಿಲುಕಿದ ಹಂಸಲೇಖ

ಸಂಗೀತ ನಿರ್ದೇಶಕ ಹಂಸಲೇಖ ಕಾರ್ಯಕ್ರಮವೊಂದರಲ್ಲಿ ಆಡಿದ ಮಾತುಗಳು ಸಾರ್ವಜನಿಕ ವಲಯದಲ್ಲಿ ಬಲು ದೊಡ್ಡ ವಿವಾದ ಉಂಟು ಮಾಡಿದೆ.

ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹಂಸಲೇಖ ಅವರು, “ಪೇಜಾವರ ಸ್ವಾಮಿಜೀ ದಲಿತರ ಮನೆಗೆ ಹೋದರು ಎನ್ನುವುದು ಬಹಳ ಸುದ್ದಿಯಾಗಿತ್ತು. ದಲಿತರ ಮನೆಗೆ ಹೋಗಿ ಪೇಜಾವರ ಸ್ವಾಮಿಗಳು ಅಲ್ಲಿ ಕುಳಿತಿರಷ್ಟೇ. ಅವರು ಕೋಳಿ ಕೊಟ್ಟರೆ ತಿನ್ನಲಿಕ್ಕಾಗುತ್ತದೇ? ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ಅವರು ತಿನ್ನುತ್ತಿದ್ದರೇ? ಲಿವರ್ ಫ್ರೈ ಕೊಟ್ಟಿದ್ದರೆ ತಿನ್ನುತ್ತಿದ್ದರೇ?” ಎಂದು ಹಂಸಲೇಖ ಹೇಳಿರುವುದು ವಿವಾದ ಉಂಟು ಮಾಡಿದೆ.

“ಬಲಿತರು ದಲಿತರ ಮನೆಗೆ ಹೋಗುವುದು ಅದೇನು ದೊಡ್ಡ ವಿಷಯ? ಬಲಿತರು ದಲಿತರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಬೇಕು. ಊಟ ಹಾಕಬೇಕು. ಕುಡಿಯಲು ಲೋಟ ಕೊಡಬೇಕು. ಬಳಿಕ ಆ ಲೋಟವನ್ನು ನಾವು ತೊಳೆಯುತ್ತೇವೆ ಎಂದು ಅವರು ಹೇಳಬೇಕು” ಎಂದು ಹಂಸಲೇಖ ಹೇಳಿದ್ದಾರೆ.

“ಬಿಳಿಗಿರಿ ರಂಗಯ್ಯ ಸೋಲಿಗರ ಮನೆಗೆ ಹೋಗಿ ಹೆಣ್ಣಿನೊಂದಿಗೆ ಸಂಸಾರ ಮಾಡುವುದರಲ್ಲಿ ಯಾವ ದೊಡ್ಡ ವಿಷಯವಿದೆ? ರಂಗಯ್ಯ ಆ ಸೋಲಿಗರ ಹೆಣ್ಣು ಮಗಳನ್ನು ಕರೆದುಕೊಂಡು ಹೋಗಿ ತನ್ನ ದೇವಸ್ಥಾನದಲ್ಲಿ ಇಟ್ಟು ಗೌರವ ಮಾಡಿದ್ದರೆ ಅದು ರಂಗಯ್ಯನ ತಾಕತ್ತು ಆಗುತ್ತಿತ್ತು. ಬೆಳಕು ಇಲ್ಲದಾಗ ಸೋಲಿಗರ ಮನೆಗೆ ಬಂದು ಆ ಹೆಣ್ಣು ಮಗಳೊಂದಿಗೆ ಸಂಸಾರ ನಡೆಸಿ ಬೆಳಕು ಹರಿಯುವುದರೊಳಗೆ ಹೋಗಿ ಕಲ್ಲಾಗುವುದು ಅದೇನು ದೊಡ್ಡ ವಿಷಯ? ಅದು ನಾಟಕ, ಬೂಟಾಟಿಕೆ” ಎಂದು ಹೇಳಿ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
“ಭಗವದ್ಗೀತೆ ನಮಗೆ ಎಷ್ಟು ಸಹಾಯ ಮಾಡಿದೆಯೋ ಗೊತ್ತಿಲ್ಲ. ಆದರೆ ಅಂಬೇಡ್ಕರ್ ಕೊಟ್ಟ ಬಡವರ ಗೀತೆ ಸಂವಿಧಾನ ನಮ್ಮನ್ನು ಸಾಂಸ್ಕೃತಿಕ ಗುಲಾಮಗಿರಿಯಿಂದ ಹೊರಗೆ ತಂದಿದೆ. ನಮ್ಮ ಡೆಮಾಕ್ರಸಿ, ಧರ್ಮಾಕ್ರಸಿ ಆಗುತ್ತದೆಂಬ ಆತಂಕ ಜನಸಾಮಾನ್ಯರಲ್ಲಿ ಇದೆ. ಹಾಗೇನಾದರೂ ಆದರೆ ನಾವು ಮತ್ತೆ ಹಳೆಯ ಕಾಲಕ್ಕೆ ಜಾರುತ್ತೇವೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸಂಪೂರ್ಣ ನಾಶವಾಗುವುದಿಲ್ಲ ಎಂಬ ನಂಬಿಕೆ ಇದೆ. ಪ್ರಜಾಪ್ರಭುತ್ವ ಉಳಿಸಲು ನಾವೆಲ್ಲ ಎಚ್ಚರದಿಂದ ಕೆಲಸ ಮಾಡಬೇಕು” ಎಂದು ಹೇಳಿದ್ದಾರೆ.

ಹಂಸಲೇಖ ಅವರ ಮಾತುಗಳ ಬಗ್ಗೆ ಪರ, ವಿರೋಧದ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಹಂಸಲೇಖ ಅವರು ಕೇವಲ ಭಗವದ್ಗೀತೆ ಹೆಸರನ್ನೇ ಉಲ್ಲೇಖಿಸಿದ್ದು ಏಕೆ? ಧಾರ್ಮಿಕ ಗ್ರಂಥಗಳು ಎನ್ನಬಹುದಿತ್ತಲ್ಲ ಎಂದು ಕೆಲವರು ಪ್ರಶ್ನಿಸಿದ್ದಾರೆ.
ಇನ್ನೂ ಕೆಲವರು ಬಿಳಿಗಿರಿ ರಂಗಯ್ಯನ ಬಗ್ಗೆ ಮಾತನಾಡಿದ್ದಕ್ಕೆ ಹಂಸಲೇಖ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿದ್ದು ಬಹು ದೊಡ್ಡ ಕ್ರಾಂತಿಕಾರಿ ಕಾರ್ಯ. ಅದನ್ನು ಗೇಲಿ ಮಾಡಿದ್ದು ಸರಿಯಲ್ಲ ಎಂದು ಕೆಲವರು ಹೇಳಿದ್ದಾರೆ. ಇದೇ ವೇಳೆ ಕೆಲವರು ಹಂಸಲೇಖ ಇರುವುದನ್ನೇ ಹೇಳಿದ್ದಾರೆ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.
________

Be the first to comment

Leave a Reply

Your email address will not be published. Required fields are marked *

Translate »
error: Content is protected !!