ಗಂಧದಗುಡಿ ಸಿನಿಹಬ್ಬ

ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆದ ‘ಗಂಧದಗುಡಿ ಸಿನಿಹಬ್ಬ’

ಕಳೆದ ಐದು ವರ್ಷಗಳಿಂದ ಮೈಸೂರು ಕೇಂದ್ರವಾಗಿರಿಸಿಕೊಂಡು ಸಿನಿಮಾ ಕ್ಷೇತ್ರದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ‘ಮೈಸೂರು ಸಿನಿಮಾ ಸೊಸೈಟಿ’, ಈ ಬಾರಿ ಬೆಂಗಳೂರಿನಲ್ಲಿ ‘ಗಂಧದಗುಡಿ ಸಿನಿಹಬ್ಬ’ ಎಂಬ ಹೆಸರಿನಲ್ಲಿ ಎರಡು ದಿನಗಳ ಕಿರುಚಿತ್ರೋತ್ಸವವನ್ನು ಆಯೋಜಿಸಿತ್ತು.

ಇದೇ 2026ರ ನವೆಂಬರ್ 21 ಮತ್ತು 22ರಂದು ಬೆಂಗಳೂರಿನ ಎಫ್.ಕೆ.ಸಿ.ಸಿ.ಐ (FKCCI) ಆವರಣದಲ್ಲಿರುವ ‘ಸರ್.ಎಂ.ವಿಶ್ವೇಶ್ವರಯ್ಯ ಆಡಿಟೋರಿಯಂ’ನಲ್ಲಿ ನಡೆದ ‘ಗಂಧದಗುಡಿ ಸಿನಿಹಬ್ಬ’ ಕಿರುಚಿತ್ರೋತ್ಸವವನ್ನು ನಟ ರೋರಿಂಗ್ ಸ್ಟಾರ್ ಶ್ರೀಮುರಳಿ, ನಟಿ ಕಾರುಣ್ಯಾ ರಾಮ್, ಹಿರಿಯ ನಟ ಶ್ರೀನಿವಾಸ ಮೂರ್ತಿ ಸೇರಿದಂತೆ ಹಲವು ಗಣ್ಯರು ಉದ್ಘಾಟಿಸಿದರು.

ಗಂಧದಗುಡಿ ಸಿನಿಹಬ್ಬ

‘ಗಂಧದಗುಡಿ ಸಿನಿಹಬ್ಬ’ ಕಿರು ಚಿತ್ರೋತ್ಸವದಲ್ಲಿ ಅಂತಿಮ ಹಂತಕ್ಕೆ ಆಯ್ಕೆಯಾದ ಸುಮಾರು 30ಕ್ಕೂ ಹೆಚ್ಚು ಕಿರುಚಿತ್ರಗಳು ಪ್ರದರ್ಶನಗೊಂಡವು. ಸಮಾರೋಪ ಸಮಾರಂಭದಲ್ಲಿ ತೀರ್ಪುಗಾರರಿಂದ ಸುಮಾರು 12 ವಿಭಾಗಗಳಿಗೆ ಆಯ್ಕೆಯಾದ ಕಿರುಚಿತ್ರಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಇದೇ ವೇಳೆ ಕನ್ನಡ ಚಿತ್ರರಂಗದ ಹಿರಿಯ ನಟಿ ಶ್ರೀಮತಿ ಸುಧಾರಾಣಿ ಅವರಿಗೆ ‘ಜೀವಮಾನದ ಸಾಧನೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಮಾಜಿ ಡಿಸಿಎಂ ಡಾ. ಸಿ. ಎನ್. ಅಶ್ವಥ ನಾರಾಯಣ, ನಿರ್ದೇಶಕರಾದ ಪ್ರವೀಣ್ ಕೃಪಾಕರ್, ನಂದಕಿಶೋರ್, ಚೇತನ್ ಕುಮಾರ್, ಮಯೂರ್ ರಾಘವೇಂದ್ರ, ನಟಿಯರಾದ ಹರಿಣಿ ಶ್ರೀಕಾಂತ್, ಐಶ್ವರ್ಯಾ ನಾಗ್, ರೆಮೋಲಾ, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ‘ಮೈಸೂರು ಸಿನಿಮಾ ಸೊಸೈಟಿ’ ಅಧ್ಯಕ್ಷ ಚೇತನ್ ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯ ರಂಗದ ಅನೇಕ ಗಣ್ಯರು ಹಾಜರಿದ್ದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮಾಜಿ ಡಿಸಿಎಂ ಡಾ. ಸಿ. ಎನ್. ಅಶ್ವಥ ನಾರಾಯಣ್, ‘ಸಿನಿಮಾ ಎಂಬುದು ಸಮಾಜ ಮತ್ತು ಜನರ ಮೇಲೆ ತುಂಬ ಪರಿಣಾಮ ಬೀರುವಂತ ಪ್ರಭಾವಶಾಲಿ ಮಾಧ್ಯಮ. ಚಿತ್ರರಂಗವನ್ನು ನಮ್ಮಲ್ಲಿ ವಿಸ್ತರಿಸಲು ಸಾಕಷ್ಟು ಅವಕಾಶವಿದೆ. ನಮ್ಮ ಸಂಸ್ಕೃತಿ, ಜನಪದ, ಸಾಹಿತ್ಯವನ್ನು ಇಡೀ ವಿಶ್ವಕ್ಕೆ ಸಿನಿಮಾ ಮೂಲಕ ತಲುಪಿಸಬಹುದು. ‘ಮೈಸೂರು ಸಿನಿಮಾ ಸೊಸೈಟಿ’ ಇಂಥ ಪರಿಣಾಮಕಾರಿ ಮಾಧ್ಯಮವನ್ನು ಬಳಸಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡಲು ಹೊರಟಿರುವುದು ನಿಜಕ್ಕೂ ಶ್ಲಾಘನೀಯ’ ಎಂದರು.

ಗಂಧದಗುಡಿ ಸಿನಿಹಬ್ಬ

‘ಮೈಸೂರು ಸಿನಿಮಾ ಸೊಸೈಟಿ’ಯ ‘ಜೀವಮಾನ ಸಾಧನೆ ಪ್ರಶಸ್ತಿ’ಯನ್ನು ಸ್ವೀಕರಿಸಿ ಮಾತನಾಡಿದ ಹಿರಿಯ ನಟಿ ಶ್ರೀಮತಿ ಸುಧಾರಾಣಿ, ‘ಮೈಸೂರು ಮತ್ತು ಸಿನಿಮಾ ಈ ಎರಡಕ್ಕೂ ಮೊದಲಿನಿಂದಲೂ ಒಂದು ನಿಕಟ ಸಂಬಂಧವಿದೆ. ‘ಮೈಸೂರು ಸಿನಿಮಾ ಸೊಸೈಟಿ’ ಮೂಲಕ ಇಂಥದ್ದೊಂದು ಗೌರವ ಸಿಗುತ್ತಿರುವುದಕ್ಕೆ ತುಂಬ ಖುಷಿಯಾಗುತ್ತಿದೆ. ನಾನು ಮಾಡಿದ ಪ್ರತಿಯೊಂದು ಪಾತ್ರಗಳು ನನಗೆ ಜೀವ ತುಂಬಿದೆ. ನನ್ನ ಜೀವನಕ್ಕೆ ಹೊಸ ಅಧ್ಯಾಯ ಕೊಟ್ಟಿವೆ. ಚಿತ್ರರಂಗಕ್ಕೆ ಬಾಲನಟಿಯಾಗಿ ಬಂದು ನಲವತ್ತು ವರ್ಷವಾದರೂ, ಪ್ರೇಕ್ಷಕರಿಂದ ಸಿಗುತ್ತಿರುವ ಪ್ರೀತಿ, ಅಭಿಮಾನ ಹೆಚ್ಚಾಗುತ್ತಿದೆ. ಅದಕ್ಕೆ ನಾನು ಯಾವಾಗಲೂ ಚಿರಋುಣಿ. ಇದನ್ನು ಕಾಪಾಡಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.

‘ರಾಷ್ಟ್ರ ಪ್ರಶಸ್ತಿ’ ವಿಜೇತ ನಿರ್ದೇಶಕ ಪ್ರವೀಣ್ ಕೃಪಾಕರ್ ಮಾತನಾಡಿ, ‘ಸಮಾಜದ ಬೆಳವಣಿಗೆಗೆ ಸಿನಿಮಾ ಸೊಸೈಟಿಗಳು ಸಹಾಯಕವಾಗುತ್ತಿವೆ. ಸಿನಿಮಾ ಸೊಸೈಟಿಯಿಂದ ಸದಭಿರುಚಿಯ ಪ್ರೇಕ್ಷಕ ವರ್ಗ ಸೃಷ್ಟಿಯಾಗುತ್ತಿದೆ. ಇದೊಂದು ಸಕಾರಾತ್ಮಕ ಅಂಶ. ಕಿರುಚಿತ್ರಗಳನ್ನು ಗುರುತಿಸಿ, ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಡುತ್ತಿರುವ ‘ಮೈಸೂರು ಸಿನಿಮಾ ಸೊಸೈಟಿ’ಯ ಕಾರ್ಯ ಪ್ರಶಂಸನೀಯ. ಕನ್ನಡ ಚಿತ್ರಗಳನ್ನು ಮತ್ತು ಸದಭಿರುಚಿ ಪ್ರೇಕ್ಷಕರನ್ನು ಬೆಳೆಸುವ ನಿಟ್ಟಿನಲ್ಲಿ ‘ಮೈಸೂರು ಸಿನಿಮಾ ಸೊಸೈಟಿ’ಯಂತಹ ಸಂಸ್ಥೆಗಳ ಅಗತ್ಯವಿದೆ. ಇಂಥ ವೇದಿಕೆಗಳ ಮೂಲಕ ನೂರಾರು ಹೊಸ ಕಲಾವಿದರು, ತಂತ್ರಜ್ಞರಿಗೆ ಮನ್ನಣೆ, ಮಾನ್ಯತೆ ಸಿಗುತ್ತಿದೆ. ಈ ವೇದಿಕೆಯನ್ನು ನಾವೆಲ್ಲರೂ ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಸಿನಿಮಾಕ್ಕಾಗಿಯೇ ಇರುವ ಈ ಸಂಸ್ಥೆಯ ಕಾರ್ಯಕ್ರಮಗಳು ಹೀಗೆ ನಡೆಯಲಿ’ ಎಂದರು.

ಗಂಧದಗುಡಿ ಸಿನಿಹಬ್ಬ

Be the first to comment

Leave a Reply

Your email address will not be published. Required fields are marked *

Translate »
error: Content is protected !!