ಪ್ರತಿಷ್ಠಿತ ಎಮ್ಮಿ ವೇದಿಕೆಯಲ್ಲಿ ಪ್ರಶಸ್ತಿ ಪ್ರಸ್ತುತಪಡಿಸಲಿರುವ ಮೊದಲ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ ಪಾತ್ರರಾಗಲಿದ್ದಾರೆ.
54ನೇ ಇಂಟರ್ನ್ಯಾಷನಲ್ ಎಮ್ಮಿ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡುವ ಅವಕಾಶ ವಿಜಯ್ ಸೇತುಪತಿಗೆ ಒಲಿದಿದೆ. ಈ ಮೂಲಕ ಸೇತುಪತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ.
ನವೆಂಬರ್ 23ರಂದು ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಅದ್ಧೂರಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಅಮೆರಿಕದ ಹೊರಗಿನ ವಿವಿಧ ದೇಶಗಳ ಅತ್ಯುತ್ತಮ ಕಿರುತೆರೆ ಮತ್ತು ಒಟಿಟಿ ಕಾರ್ಯಕ್ರಮಗಳಿಗೆ ಇಂಟರ್ನ್ಯಾಷನಲ್ ಎಮ್ಮಿ ಪ್ರಶಸ್ತಿ ನೀಡಲಾಗುತ್ತದೆ. ವಿಶ್ವದ ಪ್ರಮುಖ ಕಲಾವಿದರು ಮತ್ತು ಚಿತ್ರರಂಗದ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವಿಜಯ್ ಸೇತುಪತಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಣಿರತ್ನಂ ನಿರ್ದೇಶನದ ‘ಇಂಜಿ ವೆಳ್ಳಮ್’ ಸಿನಿಮಾದಲ್ಲಿ ವಿಜಯ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ತ್ಯಾಗರಾಜನ್ ಕುಮಾರರಾಜ ನಿರ್ದೇಶನದ ‘ಪಾಕೆಟ್ ನಾವೆಲ್’ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಮತ್ತು ಮಾಳವಿಕಾ ಮೋಹನನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಇನ್ನೊಂದು ಕಡೆ ‘ಮಹಾರಾಜ 2’ ಚಿತ್ರಕಥೆ ಸಿದ್ಧವಾಗಿದೆ. ನಿರ್ದೇಶಕ ನಿತಿಲನ್ ಸಾಮಿನಾಥನ್ ಈಗಾಗಲೇ ಕಥೆಯನ್ನು ವಿಜಯ್ಗೆ ವಿವರಿಸಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆಯಾಗುವ ನಿರೀಕ್ಷೆಯಿದೆ.
—-





Be the first to comment