ಸ್ಯಾಂಡಲ್ ವುಡ್ ನ ಚಾಕಲೇಟ್ ಹೀರೋ ಎಂದೇ ಖ್ಯಾತಿ ಪಡೆದಿರುವ ನಟ ಧರ್ಮ ಕೀರ್ತಿರಾಜ್ ಅಭಿನಯದ ಆಕ್ಷನ್ , ಕಾಮಿಡಿ, ರೊಮ್ಯಾಂಟಿಕ್ ಚಿತ್ರ ಖಡಕ್ ಈ ವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಧರ್ಮ ಕೀರ್ತಿರಾಜ್ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ.
ನಿರ್ದೇಶಕ ಟಿ.ಎನ್.ನಾಗೇಶ್ ಖಡಕ್ ಚಿತ್ರದ ಕಥೆ, ಚಿತ್ರಕಥೆ ಸಂಭಾಷಣೆ ರಚಿಸಿ ಆ್ಯಕ್ಷನ್-ಕಟ್ ಹೇಳಿದ್ದಾರೆ. ಧರ್ಮ ಕೀರ್ತಿರಾಜ್ ಅಭಿನಯದ ಮಾಸ್ ಆಕ್ಷನ್ ಕಥಾನಕವಿರುವ ಚಿತ್ರ ಇದಾಗಿದ್ದು, ಅನುಷಾ ರೈ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಿಂದೆ ನಾರದ ವಿಜಯ, ಮಿಸ್ಟರ್ ಚೀಟರ್, ಅಮಾನುಷ ಮೊದಲಾದ ಚಿತ್ರಗಳನ್ನು ನಿರ್ಮಿಸಿದ್ದ ವಲ್ಲಿ ಮತ್ತು ಕಮಲ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಇದೇ 17ರಂದು ಬಿಡುಗಡೆಯಾಗುತ್ತಿ ರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಫಿಲಂ ಚೇಂಬರ್ ನೂತನ ಅಧ್ಯಕ್ಷ ಬಾ.ಮ .ಹರೀಶ್, ಖಜಾಂಚಿ ಸಿದ್ದರಾಜು, ಗೌರವ ಕಾರ್ಯದರ್ಶಿ ಶಿಲ್ಪಾ ಶ್ರೀನಿವಾಸ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ನಿರ್ದೇಶಕ ಟಿ.ಎನ್. ನಾಗೇಶ್ ಮಾತನಾಡುತ್ತಾ ಡ್ರಗ್ಸ್ ಮತ್ತು ಸ್ಮಗ್ಲಿಂಗ್ ಮಾಫಿಯಾ ನಮ್ಮ ಸಮಾಜದ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ, ಇದರ ವಿರುದ್ದ ಹೋರಾಡುವ ನಾಯಕನ ಕಥೆ ಈ ಚಿತ್ರದಲ್ಲಿದ್ದು, ಬೆಂಗಳೂರು, ಹೊನ್ನಾವರ, ಗೋಕರ್ಣ, ಮಂಗಳೂರು ಸುತ್ತಮುತ್ತ ಸುಮಾರು 45 ದಿನಗಳ ಕಾಲ ಚಿತ್ರೀಕರಣ ನಡೆಸಿದೇವೆ.
ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ಒಬ್ಬ ಖಡಕ್ ಪೋಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಅನುಷಾ ರೈ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ ಎಂದು ಹೇಳಿದರು.
ನಾಯಕ ಧರ್ಮ ಮಾತನಾಡಿ ನನ್ನ 13 ವರ್ಷದ ಸಿನಿಜರ್ನಿಯಲ್ಲಿ ಮೊದಲ ಬಾರಿಗೆ ಅಂಡರ್ ಕವರ್ ಪೋಲಿಸ್ ಅಧಿಕಾರಿ ಪಾತ್ರ ಮಾಡಿದೇನೆ. ಇಡೀ ಸಿನಿಮಾದಲ್ಲಿ ಹಾಗಿರಲ್ಲ. ಕೆಲ ಸಂದರ್ಭಕ್ಕೆ ಅನುಗುಣವಾಗಿ ಕಥೆ ಸಾಗಲಿದೆ. ಈ ಚಿತ್ರ ವಿಭಿನ್ನವಾಗಿ ಬಂದಿದೆ. ಹಾಗೆಯೇ ಚಂದ್ರಪ್ರಭಾ ಅವರ ಕಾಮಿಡಿ ಟೈಮಿಂಗ್ ತುಂಬಾ ಚೆನ್ನಾಗಿದೆ.
ನಿರ್ದೇಶಕ ನಾಗೇಶ್ ಅವರ ಜೊತೆ ಹಿಂದೆ ಒಲವೇ ವಿಸ್ಮಯ ಚಿತ್ರದಲ್ಲಿ ಕೆಲಸ ಮಾಡಿದ್ದೆ, ನಾಯಕಿ ಅನುಷಾ ಜೊತೆ ಮತ್ತೆರಡು ಚಿತ್ರಗಳನ್ನು ಮಾಡುತ್ತಿದೇನೆ, ನನ್ನ 3 ಸಿನಿಮಾಗಳು ರಿಲೀಸ್‍ಗೆ ರೆಡಿ ಇದೆ, ಇನ್ನೂ ಮೂರು ಸಿನಿಮಾಗಳು ಅಂಡರ್ ಪ್ರೊಡಕ್ಷನ್‍ನಲ್ಲಿವೆ ಎಂದು ಹೇಳಿದರು. ನಾಯಕಿ ಅನುಷಾ ಮಾತನಾಡಿ ಧರ್ಮ ಅವರ ಜೊತೆ ವರ್ಕ್ ಮಾಡಿದ್ದು ಖುಷಿಯಾಗಿದೆ. ಕಾರವಾರ, ಗೋಕರ್ಣದಲ್ಲಿ ಶೂಟ್ ಮಾಡಿದ್ದು ಒಳ್ಳೇ ಅನುಭವ. ನನ್ನ ಪಾತ್ರಕ್ಕೆ 2 ಶೇಡ್ ಇರುತ್ತದೆ, ಪಕ್ಕದ್ಮನೆ ಹುಡುಗಿ ಥರದ ಪಾತ್ರ ಎಂದು ಹೇಳಿದರು.
ನಿರ್ಮಾಪಕರುಗಳಾದ ವಲ್ಲಿ ಹಾಗೂ ಕಮಲ್ ಚಿತ್ರ ನಿರ್ಮಾಣದ ಹಾದಿಯನ್ನು ವಿವರಿಸಿದರು. ಸಂಗೀತ ನಿರ್ದೇಶಕ ಕೃಪಾಕರ್ ಮಾತನಾಡಿ ಈ ಚಿತ್ರದಲ್ಲಿ ಮ್ಯೂಸಿಕ್‍ಗೆ ತುಂಬಾ ಅವಕಾಶವಿತ್ತು. ಚಿತ್ರದಲ್ಲಿರುವ 4 ಹಾಡುಗಳಿಗೆ ನಾಗೇಶ್ ಅವರು ಒಳ್ಳೇ ಟ್ಯೂನ್‍ಗಳನ್ನು ಮಾಡಿಸಿದ್ದಾರೆ. ಸದ್ದಿಲ್ಲದೆ ಎನ್ನುವ ಹಾಡು ಈಗಾಗಲೇ ತುಂಬಾ ಜನಪ್ರಿಯವಾಗಿದೆ ಎಂದು ಹೇಳಿದರು, ಇದೇ ಹಾಡಿಗೆ ದನಿಯಾಗಿರುವ ಗಾಯಕಿ ಡಾ.ಪ್ರಿಯದರ್ಶಿನಿ ಕೂಡ ಹಾಜರಿದ್ದು ಮಾತನಾಡಿದರು.
ಚಿತ್ರದ ಉಳಿದ ಪಾತ್ರವರ್ಗಗಳಲ್ಲಿ ಕಬೀರ್ ದುಹಾನ್‍ಸಿಂಗ್, ಸುಮನ್, ಕಮಲ್, ಅಶೋಕ್ ಚಕ್ರವರ್ತಿ, ಚಂದ್ರಪ್ರಭಾ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ಶಂಕರ್ ಅವರ ಛಾಯಾಗ್ರಹಣ ಹಾಗೂ ಅರ್ಜುನ್‍ರಾವ್ ಅವರ ಸಹ ನಿರ್ದೇಶನವಿದೆ. ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಈ ಖಡಕ್ ಚಿತ್ರ ಇದೇ 17ರಂದು ರಾಜ್ಯಾದ್ಯಂತ ಚಿತ್ರಮಂದಿರದಲ್ಲಿ ಪ್ರವೇಶ ಮಾಡಲಿದೆ.
Be the first to comment