Case of kondana Movie Review : ನಿಗೂಢ ಪತ್ತೆದಾರಿ ಕಥೆ ಕೇಸ್ ಆಫ್ ಕೊಂಡಾಣ

ಚಿತ್ರ : ಕೇಸ್ ಆಫ್ ಕೊಂಡಾಣ
ನಿರ್ದೇಶನ : ದೇವಿ ಪ್ರಸಾದ್ ಶೆಟ್ಟಿ
ತಾರಾಗಣ : ವಿಜಯ್ ರಾಘವೇಂದ್ರ, ಭಾವನಾ ಮೆನನ್, ಖುಷಿ ರವಿ, ರಂಗಾಯಣ ರಘು, ಸುಂದರ ರಾಜ್ ಇತರರು.

ರೇಟಿಂಗ್ : 3.5/5

ನಿಗೂಢ ಸರಣಿ ಕೊಲೆಗಳ ತನಿಖಾ ಪತ್ತೇದಾರಿ ಕಥೆಯಾಗಿ ತೆರೆಯ ಮೇಲೆ ಈ ವಾರ ಕೇಸ್ ಆಫ್ ಕೊಂಡಾಣ ಬಂದಿದೆ.

ಬೆಂಗಳೂರಿನಲ್ಲಿ ನಡೆಯುವ ಸರಣಿ ಕೊಲೆಗಳ ಹಿಂದೆ ಬೀಳುವ ಪೊಲೀಸರಿಗೆ ಹಲವು ಸವಾಲುಗಳು ಎದುರಾಗುತ್ತವೆ. ಇಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಪ್ರೇಕ್ಷಕರಿಗೆ ಕಥೆಯನ್ನು ಹೇಳುವ ಯತ್ನ ಮಾಡಲಾಗಿದೆ.

ಚಿತ್ರದಲ್ಲಿ ಎಎಸ್ ಐ ಆಗಿ ವಿಜಯ್ ರಾಘವೇಂದ್ರ ಕಾಣಿಸಿಕೊಂಡಿದ್ದಾರೆ. ಸರಣಿ ಕೊಲೆಗಳ ತನಿಖೆ ಮಾಡುವ ಡಿ ಎಸ್ ಪಿ ಆಗಿ ಭಾವನಾ ಮೆನನ್, ಪೋಲಿಸ್ ಆಗಿ ರಂಗಾಯಣ ರಘು, ವೈದ್ಯೆ ಆಗಿ ಖುಷಿ ರವಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಕಥೆಗೆ ನ್ಯಾಯ ಒದಗಿಸುವ ಯತ್ನ ಮಾಡಿದ್ದಾರೆ.

ನಿರ್ದೇಶಕ ದೇವಿ ಪ್ರಸಾದ್ ಅವರು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತೆ ಕಥೆ, ದೃಶ್ಯವನ್ನು ಸಂಯೋಜನೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಚಿತ್ರದ ಮೊದಲ ಭಾಗವನ್ನು ಆರಾಮವಾಗಿ ಕುಳಿತು ನೋಡಬಹುದು. ದ್ವಿತೀಯಾರ್ಧದಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೀಟಿನಂಚಿನಲ್ಲಿ ಕುಳಿತು ಕುತೂಹಲದಿಂದ ನೋಡುವಂತೆ ಮಾಡುತ್ತದೆ.

ಕಥೆಯಲ್ಲಿ ರೌಡಿಸಂನ ಅಟ್ಟಹಾಸ, ಕ್ರೌರ್ಯ ಇದ್ದರೂ ಅದನ್ನು ಪ್ರೇಕ್ಷಕರ ಕಣ್ಣಿಗೆ ಅಸಹನೀಯ ಅನಿಸುವ ರೀತಿ ಕಾಣದಂತೆ ನಿರ್ದೇಶಕರು ಎಚ್ಚರ ವಹಿಸಿದ್ದಾರೆ. ಕ್ರೌರ್ಯದ ದೃಶ್ಯಗಳನ್ನು ಹಿನ್ನೆಲೆ ಸಂಗೀತದಲ್ಲಿ ಹೇಳುವ ಯತ್ನವನ್ನು ಮಾಡಲಾಗಿದೆ. ಜೋಗಿ ಚಿತ್ರಕಥೆ, ವಿಶ್ವಜಿತ್ ರಾವ್ ಸಿನಿಮಾಟೋಗ್ರಫಿ, ಗಗನ್ ಬಡೆರಿಯ ಸಂಗೀತ, ಭವಾನಿ ಶಂಕರ್ ಆನೆಕಲ್ಲು ಕಲಾ ನಿರ್ದೇಶನ ಚಿತ್ರವನ್ನು ಸುಂದರವಾಗಿ ಮೂಡಿ ಬರುವಂತೆ ಮಾಡಿದೆ.

ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳನ್ನು ಇಷ್ಟಪಡುವವರಿಗೆ ಈ ಚಿತ್ರ ಖುಷಿ ನೀಡಬಹುದು ಎಂದು ಖಂಡಿತವಾಗಿ ಹೇಳಬಹುದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!