ಬಿಗ್ ಬಾಸ್ ಖ್ಯಾತಿಯ ಖ್ಯಾತ ನಟಿ ಐಶ್ವರ್ಯಾ ಸಿಂಧೋಗಿ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಮಾಡಿದ್ದು ಪೊಲೀಸ್ ಪ್ರಕರಣ ದಾಖಲಾಗಿದೆ.
ಐಶ್ವರ್ಯಾ ಸಿಂಧೋಗಿ ಅವರು ತಮ್ಮ ಸೋಷಿಯಲ್ ಮೀಡಿಯದಲ್ಲಿ ಅಪ್ಲೋಡ್ ಮಾಡುವ ಪೋಸ್ಟ್ಗಳಿಗೆ ಕಳೆದ 2 ತಿಂಗಳಿಂದ ಸತತವಾಗಿ ಆಕ್ಷೇಪಾರ್ಹ ಕಮೆಂಟ್ಗಳನ್ನು ಮಾಡಲಾಗುತ್ತಿದೆ ಎಂದು ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಮ್ಮ ವಿರುದ್ಧ ಬಳಸಲಾಗುತ್ತಿರುವ ನಕಲಿ ಖಾತೆಗಳನ್ನು ಪತ್ತೆಹಚ್ಚಿ, ಸಂಪೂರ್ಣ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ದೂರಿನ ಮೇರೆಗೆ ಸಂಜಯನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತಮ್ಮ ಪೋಸ್ಟ್ಗಳ ಕೆಳಗೆ ನಿರಂತರವಾಗಿ ಅಶ್ಲೀಲ, ಅವಹೇಳನಕಾರಿ ಹಾಗೂ ಮಾನಹಾನಿಕರ ಕಾಮೆಂಟ್ಗಳನ್ನು ಮಾಡುತ್ತಿರುವ ವ್ಯಕ್ತಿಯ ವಿರುದ್ಧ ಐಶ್ವರ್ಯಾ ಸಿಂಧೋಗಿ ದೂರು ದಾಖಲಿಸಿದ್ದಾರೆ.
ಈ ಹಿಂದೆ 2022 ರಲ್ಲಿಯೂ ಇದೇ ರೀತಿಯ ಕಿರುಕುಳಕ್ಕೆ ಐಶ್ವರ್ಯಾ ಸಿಂಧೋಗಿ ಗುರಿಯಾಗಿದ್ದರು. ಆಗಲೂ ಕರೆಗಳ ಮೂಲಕ ಕಿರುಕುಳ, ಹಿಂಬಾಲಿಸುವುದು ಹಾಗೂ ವಿವಿಧ ರೀತಿಯ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಿ ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ದೂರು ಬಳಿಕ ಕೆಲಕಾಲ ಕಿರುಕುಳ ನಿಂತಿದ್ದರೂ, ಇದೀಗ ಮತ್ತೆ ಅದೇ ರೀತಿಯ ಘಟನೆಗಳು ಮರುಕಳಿಸಿರುವುದಾಗಿ ಐಶ್ವರ್ಯಾ ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನಟಿಯರನ್ನು ಗುರಿಯಾಗಿಸಿಕೊಂಡು ಮಾನಸಿಕ ಕಿರುಕುಳ ನೀಡುವ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚೆಗಷ್ಟೇ ನಟಿ ರಮ್ಯಾ ಹಾಗೂ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಇದೇ ರೀತಿಯ ಅವಹೇಳನಕಾರಿ ಕಾಮೆಂಟ್ಗಳ ವಿರುದ್ಧ ದೂರು ನೀಡಿದ್ದರು.
—–





Be the first to comment