ಶ್ರೀನಿ ನಿರ್ದೇಶನದ ‘ಘೋಸ್ಟ್’ ಚಿತ್ರದಲ್ಲಿ ಕೆಜಿಎಫ್ ಖ್ಯಾತಿಯ ನಟಿ ಅರ್ಚನಾ ಜೋಯಿಸ್ ನಟಿಸಲಿದ್ದಾರೆ.
ಈ ಹಿಂದೆ ತಮ್ಮ ಚಿತ್ರದಲ್ಲಿ ನಾಯಕಿ ಇರುವುದಿಲ್ಲ ಎಂದು ಹೇಳಿದ್ದ ನಿರ್ದೇಶಕರು ಇದೀಗ ಚಿತ್ರದ ಪ್ರಮುಖ ಪಾತ್ರಕ್ಕೆ ನಟಿ ಅರ್ಚನಾ ಜೋಯಿಸ್ ಅವರನ್ನು ಕರೆತಂದಿದ್ದಾರೆ.
ಶಿವರಾಜಕುಮಾರ್ ಅಭಿನಯದ ಶ್ರೀನಿಯ ನಿರ್ದೇಶನದ ಘೋಸ್ಟ್ ಸಿನಿಮಾದಲ್ಲಿ ಅನುಪಮ್ ಖೇರ್, ದಕ್ಷಿಣ ಭಾರತದ ಜನಪ್ರಿಯ ನಟ ಜಯರಾಮ್ ಮತ್ತು ಪ್ರಶಾಂತ್ ನಾರಾಯಣನ್ ಪ್ರಮುಖ ಪಾತ್ರಗಳನ್ನು ನಿಭಾಯಿಸಲಿದ್ದಾರೆ.
ಅರ್ಚನಾ ಅವರ ಪಾತ್ರದ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಶ್ರೀನಿ, ‘ಅರ್ಚನಾ ಅವರು ಪತ್ರಕರ್ತೆಯಾಗಿ ನಟಿಸಿದ್ದಾರೆ. ಇಡೀ ಚಿತ್ರದಲ್ಲಿ ಅವರು ಕಾಣಿಸುತ್ತಾರೆ. ಅವರ ಪಾತ್ರವೇ ಸಸ್ಪೆನ್ಸ್ ಮತ್ತು ಟ್ವಿಸ್ಟ್ ನ್ನು ತರುತ್ತದೆ. ಅರ್ಚನಾ ಜೋಯಿಸ್ ಅವರನ್ನು ಉತ್ತಮವಾಗಿ ತೋರಿಸಿದ್ದೇವೆ. ಅವರು ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಈ ಪಾತ್ರವನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ ಎಂದು ಹೇಳಿದ್ದಾರೆ.
ಕೆಜಿಎಫ್ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿರುವ ಅರ್ಚನಾ, ತಮ್ಮ ಮುಂದಿನ ಚಿತ್ರ ‘ಹೊಂದಿಸಿ ಬರೆಯಿರಿ’ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.
ಶೇ.40 ರಷ್ಟು ಚಿತ್ರೀಕರಣ ಬಾಕಿ ಉಳಿದಿರುವ ಈ ಚಿತ್ರದ ಮುಂದಿನ ಶೆಡ್ಯೂಲ್ ಫೆಬ್ರುವರಿ 10 ರಿಂದ ಪುನರಾರಂಭಗೊಳ್ಳಲಿದೆ ಮಾರ್ಚ್ ನಲ್ಲಿ ಚಿತ್ರೀಕರಣವನ್ನು ಮುಗಿಸಲು ನಿರ್ಮಾಪಕರು ಯೋಜಿಸಿದ್ದಾರೆ.
ಸಂದೇಶ್ ಪ್ರೊಡಕ್ಷನ್ ನಿರ್ಮಾಣದ ಘೋಸ್ಟ್ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಮಹೇಂದ್ರ ಸಿಂಹ ಅವರ ಛಾಯಾಗ್ರಹಣವಿದೆ.
___





Be the first to comment