ಪ್ರಮೋದ್ ಶೆಟ್ಟಿ

ಅನಿರೀಕ್ಷಿತ ಅತಿಥಿಗಳು ಟ್ರೇಲರ್ ಗೆ ಪ್ರಮೋದ್ ಶೆಟ್ಟಿ ಮೆಚ್ಚುಗೆ

ಇದೇ ಸಪ್ಟೆಂಬರ್ 18ರಂದು ತೆರೆಕಾಣಲಿರುವ ಚಿತ್ರ ಅನಿರೀಕ್ಷಿತ ಅತಿಥಿಗಳು. ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ಖ್ಯಾತ ನಟ ಪ್ರಮೋದ್ ಶೆಟ್ಟಿ ಬಾಯ್ತುಂಬ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಈ ಚಿತ್ರತಂಡದವರು ನನಗೆ ರಂಗಭೂಮಿ ದಿನಗಳಿಂದಲೇ ಪರಿಚಯ. ಅದರಲ್ಲೂ ಅನಿರೀಕ್ಷಿತ ಅತಿಥಿಗಳು ಚಿತ್ರದ ಕಾರ್ಯವೈಖರಿ ಬಗ್ಗೆ ಬೇರೆ ಬೇರೆ ಸಿನಿಮಾ ತಂತ್ರಜ್ಞರು ಹೊಗಳಿಕೆಯ ಮಾತನಾಡುತ್ತಿರುವುದು ನಿಜಕ್ಕೂ ಉತ್ತಮ ಸೂಚನೆಯಾಗಿದೆ ಎಂದರು.

ಟ್ರೇಲರ್ ನಲ್ಲಿ ಕಾಡಿನ ಮಧ್ಯೆ ಇರುವ ಒಂಟಿಮನೆಯೊಂದನ್ನು ಕಂಡ ಪ್ರಮೋದ್ ಶೆಟ್ಟಿ “ಇದೇ ಮನೆಯಲ್ಲೇ ರಿಷಬ್ ನಟನೆಯ ‘ಹೀರೋ’ ಸಿನಿಮಾ ಚಿತ್ರೀಕರಣ ಮಾಡಲಾಗಿತ್ತು. ಅದು ನಮಗೆ ಗೆಲುವು ತಂದುಕೊಟ್ಟಿತ್ತು. ಆ ಮನೆಯಲ್ಲಿ ಅಂಥ ಪಾಸಿಟಿವ್ ಎನರ್ಜಿ ಇದೆ. ನಿಮಗೂ ಅದರ ಗೆಲವು ಸಿಗಲಿ” ಎಂದು ಶುಅಬ ಹಾರೈಸಿದರು.

ಅನಿರೀಕ್ಷಿತ ಅತಿಥಿಗಳು‌ ಚಿತ್ರವನ್ನು‌ ಬರೆದು ನಿರ್ದೇಶಿಸಿರುವ ಮನೋಜ್ ಅಣ್ಣಯ್ಯ ಮಾತನಾಡಿ, ಈ ಚಿತ್ರಕ್ಕೆ ಎ ಸರ್ಟಿಫಿಕೇಟ್ ಸಿಕ್ಕಿದೆ. ಆದರೆ ಚಿತ್ರ ನೋಡುವ ಪ್ರೇಕ್ಷಕರು ತಮ್ಮ ಬದುಕಿನಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಳ್ಳುವಂಥ ಚಿತ್ರ ಇದು. ಮಾತ್ರವಲ್ಲ ನಮ್ಮ ಬದುಕಿನಲ್ಲಿ ಕೆಲವು ಘಟನೆಗಳು ನಡೆಯಬಾರದು ಎಂದಾದರೆ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು ಎನ್ನುವ ಸಂದೇಶ ಈ ಚಿತ್ರದಲ್ಲಿದೆ ಎಂದರು.

ಪ್ರಮೋದ್ ಶೆಟ್ಟಿ

ನಿರ್ಮಾಪಕ ಬಿ ವಿನೋದ್ ಕುಮಾರ್ ಮಾತನಾಡಿ ತಮಗೆ ನಟನೆಯ ಆಸಕ್ತಿ ಮೊದಲೇ ಇತ್ತು.‌ ಅದಕ್ಕೆ ತಕ್ಕಂತೆ ಈ ಚಿತ್ರದ ಮೂಲಕ ಸಣ್ಣದೊಂದು ಪಾತ್ರದಲ್ಲಿ ನಟಿಸುವ ಅವಕಾಶವೂ ಲಭಿಸಿದೆ ಎಂದರು. ಸಾಹಸ ನಿರ್ದೇಶಕ ಶ್ರೀರಾಮ್ ಅವರ ಸಂಯೋಜನೆಯಲ್ಲಿ ಈ ಚಿತ್ರದಲ್ಲಿ 4 ಫೈಟುಗಳಿವೆ. ಕ್ಲೈಮ್ಯಾಕ್ಸ್ ಹೊಡೆದಾಟವಂತೂ ಅದ್ಭುತವಾಗಿ ಮೂಡಿಬಂದಿದೆ. ಪ್ರಧಾನ ಪಾತ್ರಧಾರಿ ಜಗ್ಗಿಗೆ ನಿಜವಾಗಿಯೂ ಒಂದಷ್ಟು ಏಟಾಗಿತ್ತು ಎಂದು ಶ್ರೀರಾಮ್ ತಿಳಿಸಿದರು.

ಮೈತ್ರಿ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜತೆ ನಟಿಸಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದ ಜಗ್ಗಿಗೆ ಅಂದೇ ನಾಯಕನಾಗಿ ನಟಿಸುವ ಆಸೆಯಿತ್ತು. ಅದನ್ನು ಪುನೀತ್ ಅವರಲ್ಲಿ ಹೇಳಿಕೊಂಡಾಗ ಅವರು “ದೇವ್ರಿದ್ದಾನೆ ಹೀರೋ ಆಗ್ತೀಯ ಎಂದಿದ್ದರು” ಎಂದು ಜಗ್ಗಿ ಸ್ಮರಿಸಿಕೊಂಡರು. ಅದೇ ರೀತಿ ಮೈತ್ರಿಯ ನಟನೆ ನೋಡಿ “ಒಳ್ಳೆಯ ನಟ” ಎಂದು ಯಶ್ ಮೆಚ್ಚಿದ್ದನ್ನೂ ನೆನಪಿಸಿಕೊಂಡರು. 109 ಕೆ.ಜಿ ಆಗಿದ್ದ ನಾನು ಈ ಚಿತ್ರಕ್ಕಾಗಿ 72ಕೆ.ಜಿ ಆಗಿದ್ದೇನೆ. ನಾಯಕನಾಗುವ ಕನಸು ನನಸಾಗಿದೆ ಎಂದರು.

ಪ್ರಮೋದ್ ಶೆಟ್ಟಿ

ಚಿತ್ರದಲ್ಲಿ ಮತ್ತೊಂದು ಪ್ರಧಾನ ಪಾತ್ರವಾದ ಶಕ್ತಿಯಾಗಿ ನಟಿಸಿರುವ ವಿವೇಕ್ ಸಿಂಹ ಮಾತನಾಡಿ ತಾವು ಈ ಹಿಂದೆ ‘ಚೂರಿಕಟ್ಟೆ’, ‘ಸ್ಪೂಕಿ ಕಾಲೇಜ್’ ಮೊದಲಾದ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ ಬಳಿಕ ಈ ಚಿತ್ರದಲ್ಲಿ ಪ್ರಧಾನ ಪಾತ್ರದ ಅವಕಾಶ ದೊರಕಿದೆ ಎಂದರು.

ಚಿತ್ರದ ನಾಯಕಿಯಾಗಿ ಬೋಲ್ಡ್ ದೃಶ್ಯಗಳಲ್ಲಿ ನಟಿಸಿರುವ ಸಂಪ್ರತಿ ಆಳ್ವಾ ತಮಗೆ ಈ ಪಾತ್ರ ದೊರಕಲು ಮತ್ತೋರ್ವ ನಾಯಕಿ ಹರಿತ ಶಾ ಕಾರಣ ಎಂದರು. ಚಿತ್ರತಂಡಕ್ಕೆ ಧನ್ಯವಾದ ಹೇಳಿದ ಹರಿತ ಶಾ ಮಾತುಗಳನ್ನು ಕೇಳಿ ಕನ್ನಡವೇ ಬಾರದ ಈಕೆ ಇಷ್ಟು ಸ್ಪಷ್ಟವಾಗಿ ಮಾತನಾಡಲು ಕಲಿತಿರುವುದೇ ಸಾಧನೆ ನಿರ್ದೇಶಕರು ಮೆಚ್ಚಿಕೊಂಡರು. ನಟ ದೈವಿಕ್ ಮಾತನಾಡಿ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರಾಗಿದ್ದೆ. ಆದರೆ ನಟನಾಗಿ ಇದು ಮೊದಲ ಚಿತ್ರ ಎಂದರು. ಕಲಾವಿದರಾದ ಶ್ರೀದತ್ತ, ದಯ ಪಲ್ಲವಗೆರೆ ಛಾಯಾಗ್ರಾಹಕ ಎರಿಕ್ , ಸಂಗೀತ ನಿರ್ದೇಶಕ ಸ್ವಾಮಿನಾಥನ್ ಮೊದಲಾದವರು ವೇದಿಕೆ ಮೇಲೆ ತಮ್ಮ ಸಂಭ್ರಮ ಹಂಚಿಕೊಂಡರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!