ಅಂಬರೀಷ್ ಗೆ ಮತ್ತೊಂದು ಹೆಸರೇ ಆತ್ಮೀಯತೆ!

ಅಂಬರೀಷ್ ಎಂದರೇನೇ ಅದೊಂದು ಗೌಜಿ-ಗದ್ದಲ-ಸಂಭ್ರಮ. ಅಂಥದೊಂದು ನಂಬಿಕೆಯನ್ನು ಅವರೇ ನಮ್ಮೊಳಗೆ ಸೃಷ್ಟಿಸಿ ಬಿಟ್ಟಿದ್ದಾರೆ. ಅದಕ್ಕೆ ಕಾರಣ ಅವರ ವ್ಯಕ್ತಿತ್ವ.
ಬಹುಶಃ ವ್ಯಕ್ತಿಯೊಬ್ಬ ತನ್ನ ತನದಿಂದಲೇ ಗುರುತಿಸಿಕೊಂಡು ಇಷ್ಟೊಂದು ಜನಪ್ರಿಯತೆ ಪಡೆದುಕೊಂಡಿದ್ದು ಇದೇ ಮೊದಲು ಇರಬೇಕು. ಸಿನಿಮಾ ನಟರ ವಿಚಾರಕ್ಕೆ ಬಂದರೆ ನಮಗೆ ಡಾ.ರಾಜಕುಮಾರ್ ಅವರೇ ಅಂತಿಮ ಅನಿಸಿಬಿಡುತ್ತದೆ. ಅವರು ಅಭಿಮಾನಿಗಳಲ್ಲಿ ದೇವರನ್ನು ಕಂಡವರು. ಅಷ್ಟನ್ನು ಹೊರತುಪಡಿಸಿ ಅವರ ಬದುಕು ಎಲ್ಲರೂ ನಂಬಿರುವ ಆದರ್ಶಗಳ ಮೇಲೆಯೇ ನಿಂತುಕೊಂಡಿರುವಂಥದ್ದು. ಆದರೆ ಅಂಬರೀಷ್ ಹಾಗಲ್ಲ. ಅವರ ವಿಚಾರದಲ್ಲಿ ಕರ್ಣ ಎನ್ನುವ ಬಿರುದನ್ನು ಎಲ್ಲರ ಪಾಲಿನ ಆದರ್ಶ ಎನ್ನಬಹುದೇ ಹೊರತು ಉಳಿದೆಲ್ಲವೂ ಅವರಾಗಿಯೇ ಸೃಷ್ಟಿಸಿಕೊಂಡಂಥ ಇಮೇಜ್ ಗಳು.‌
ನೇರ ಮಾತು
ನೇರವಾದ ಮಾತುಗಳು ಆದರ್ಶ ಎನಿಸುವುದು ಅಪರೂಪ. ಒಬ್ಬರಿಗೆ ಆದರ್ಶ ಎನಿಸುವ ಹೊತ್ತಲ್ಲಿ ಹಲವರಿಗೆ ನೋವು ಮಾಡುವುದೇ ಹೆಚ್ಚು. ಆದರೆ ಅಂಬರೀಷ್ ಹಾಗಲ್ಲ. ಅವರ ಮಾತುಗಳನ್ನು ಕೇಳಿ ಯಾರೂ ಕೂಡ ಕೊರಗಿ ಕೂರುತ್ತಿರಲಿಲ್ಲ. ಈಗಿನಂತೆ ಮಾಧ್ಯಮಗಳು ನೀಡಿದ ಇಮೇಜ್ ಅವರದಲ್ಲ. ಬಾಯಿಯಿಂದ ಬಾಯಿಗೆ ಹರಡಿಕೊಂಡಂಥ ಇಮೇಜ್ ಅದು. ಆದರೆ ದೃಶ್ಯ‌ಮಾಧ್ಯಮಗಳು ಬಂದ ಮೇಲೆ ಅದೆಲ್ಲವೂ ಸತ್ಯ ಎಂದು ಎಲ್ಲರಿಗೂ‌ ಗೋಚರಿಸಿದ್ದಂತೂ ನಿಜ.
ಗುಂಡು – ತುಂಡು
ನಿಧನದ ಬಳಿಕ ಎಲ್ಲ ಒಳ್ಳೆಯದನ್ನೇ ಮಾತನಾಡಬೇಕು ಎನ್ನುವುದು ನಡೆದುಕೊಂಡು ಬಂದ ರೀತಿ. ಆದರೆ ಅವರ ವ್ಯಕ್ತಿತ್ವವನ್ನೇ ಅಡಗಿಸಿ ನಡೆಸುವ ಹೊಗಳಿಕೆಯನ್ನು ಖುದ್ದು ಅಂಬರೀಷ್ ಅವರೇ ಕಂಡರೂ‌ ಸಹಿಸಲಿಕ್ಕಿಲ್ಲ! 
ಅಂಬರೀಷ್ ಕುಡಿಯುತ್ತಿದ್ದರು. ಅವರಿಗೆಂದೇ ಮನೆಯಲ್ಲಿ ಮಿನಿ ಬಾರ್ ಕಟ್ಟಿಸಿದ್ದ‌ ವಿಷ್ಣುವರ್ಧನ್ ಅದಕ್ಕೊಂದು ಉದಾಹರಣೆ. ಮೂರು ದಶಕಗಳ ಆತ್ಮೀಯ ಸ್ನೇಹಿತನಾಗಿದ್ದುಕೊಂಡು ಅಂಬರೀಷ್ ಅವರನ್ನು ಬದಲಿಸುತ್ತೇನೆ, ವ್ಯಾಯಾಮ ಕಲಿಸುತ್ತೇನೆ ಎಂದೆಲ್ಲ ಹೊರಟು ಕೊನೆಗೆ ಅಂಬಿಗಾಗಿಯೇ ಒಂದು ಬಾರ್ ಸ್ಥಾಪಿಸಿ ಬಿಡುವುದೇ ಸರಿ ಎಂಬ ತೀರ್ಮಾನಕ್ಕೆ ಬಂದವರು. ಅಂಬಿಯ 60ನೇ ವರ್ಷದ ಸಾರ್ಥಕ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಜನಿಕಾಂತ್, ಅಂಬರೀಷ ಹೇಗೆ ಹಠದಲ್ಲಿ, ಛಲದಲ್ಲಿ ದುರ್ಯೋಧನ ಎಂದು ವಿವರಿಸಿದ್ದರು. ಧೂಮಪಾನದ ಕೆಡುಕುಗಳ ಬಗ್ಗೆ ಆತನಿಗೆ ನಾವು ಹೇಳಿಕೊಡಬೇಕಿಲ್ಲ. ಗೊತ್ತಿದ್ದೂ ಕೂಡ ಹಠ ಸಾಧಿಸಬಲ್ಲ ಆತನನ್ನು ಬದಲಿಸಲು ಸಾಧ್ಯವಿಲ್ಲ ಎಂದಿದ್ದರು. ಇನ್ನು ಅಂಬರೀಷ್ ಅವರು ಮೆಚ್ಚುವ ‘ತಲೆಮಾಂಸದ ಪ್ರೀತಿಯ ಊಟ’ಕ್ಕೆ ತಾವು ಕೂಡ ಫಿದಾ ಆಗಿರುವುದನ್ನು ರಜನಿ ಹೇಳಿಕೊಂಡಿದ್ದರು. ಬಾಲ್ಯದಿಂದಲೇ ಆಹಾರ ಪ್ರಿಯರಾಗಿದ್ದ ಅಂಬರೀಷ್ ತಮಗೆ ಬೇಕಿದ್ದ ಹಾಗೆ ತಿಂದು, ಉಂಡು ಬೆಳೆದವರು. ಅವರು ತೋರಿಕೆಗಾಗಿ ಯಾವತ್ತೂ ಆಹಾರ ಸಂಸ್ಕೃತಿ ಮಾಡಲಿಲ್ಲ. ಆದುದರಿಂದಲೇ ಅವರ ವ್ಯಕ್ತಿತ್ವ ಎಲ್ಲರಿಗಿಂತ ವಿಭಿನ್ನವಾಗಿ ಗುರುತಿಸಲ್ಪಡುತ್ತಿದೆ. ಮುಂದೆಯೂ ಅಜರಾಮರವಾಗಿ ಉಳಿದುಬಿಡುತ್ತದೆ.
This Article Has 1 Comment
  1. Pingback: go right here

Leave a Reply

Your email address will not be published. Required fields are marked *

Translate »
error: Content is protected !!