ಕನ್ನಡ ಡಿಜಿಟಲ್ ಮನರಂಜನಾ ಲೋಕದಲ್ಲಿ ಇದೇ ಮೊದಲ ಬಾರಿಗೆ ಲಾಂಗ್ ಫಾರ್ಮ್ ಮಾದರಿಯ ರೋಮ್ಯಾಂಟಿಕ್ ಡ್ರಾಮಾ ವೆಬ್ ಸರಣಿಯೊಂದು ಸಿದ್ಧವಾಗಿದ್ದು, ‘ಕಾರ್ಪೊರೇಟ್ ಲವ್ ಸ್ಟೋರಿ’ ಇದೇ ನವೆಂಬರ್ 27ರಿಂದ Zee5 ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದೆ. ಬೆಂಗಳೂರಿನ ಸ್ಟಾರ್ಟ್ಅಪ್ ಸಂಸ್ಕೃತಿ ಹಾಗೂ ಕಾರ್ಪೊರೇಟ್ ಜಗತ್ತಿನ ಹಿನ್ನೆಲೆಯಲ್ಲಿ ಹೆಣೆಯಲಾಗಿರುವ ಈ ಸರಣಿಯನ್ನು ಪನ್ನಗ ಭರಣ ನಿರ್ದೇಶಿಸಿದ್ದಾರೆ.
ಡೇಟಿಂಗ್ ಆ್ಯಪ್ ಸ್ಟಾರ್ಟ್ಅಪ್ ಒಂದರಲ್ಲಿ ಕೆಲಸ ಮಾಡುವ ಇಬ್ಬರು ಸಹೋದ್ಯೋಗಿಗಳು ತಮ್ಮ ವೃತ್ತಿಜೀವನದ ಮಹತ್ವಾಕಾಂಕ್ಷೆ, ಕೌಟುಂಬಿಕ ಒತ್ತಡ ಮತ್ತು ಪ್ರೀತಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದೇ ಈ ಕಥೆಯ ಜೀವಾಳವಾಗಿದೆ. ಒಟ್ಟು 30 ಎಪಿಸೋಡ್ಗಳನ್ನು ಹೊಂದಿರುವ ಈ ಸರಣಿಯಲ್ಲಿ ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಣವ್ ಶ್ರೀಧರ್ ಮತ್ತು ಸಿತಾರಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಪ್ರತಿ ಶುಕ್ರವಾರ ಐದು ಹೊಸ ಸಂಚಿಕೆಗಳು ಪ್ರಸಾರವಾಗಲಿವೆ.

ಸರಣಿಯ ಕುರಿತು ಮಾತನಾಡಿದ ನಿರ್ಮಾಪಕಿ ರಾಜಶ್ರೀ ಪೊನ್ನಪ್ಪ , “ಮಾಧ್ಯಮ ಮಿತ್ರರು ಪ್ರೀತಿಯಿಂದ ನನ್ನನ್ನು ‘ಫಿಲ್ಮಿ’ ಎನ್ನುತ್ತಿದ್ದ ಕಾರಣಕ್ಕಾಗಿಯೇ ನನ್ನ ಸಂಸ್ಥೆಗೆ ‘ಫಿಲ್ಮಿ ಫೆಲೋ ಸ್ಟುಡಿಯೋಸ್’ ಎಂದು ಹೆಸರಿಟ್ಟಿದ್ದೇನೆ. ಇಂದು ಎಲ್ಲರೂ ಕೊರಿಯನ್ ಡ್ರಾಮಾಗಳನ್ನು (K-Drama) ಇಷ್ಟಪಡುತ್ತಾರೆ. ಕನ್ನಡದಲ್ಲೂ ಅಂತಹದ್ದೇ ಒಂದು ಹೊಸ ಫಾರ್ಮ್ಯಾಟ್ ತರಬೇಕು ಎಂಬ ಆರ್ಜೆ ಪ್ರದೀಪ್ ಅವರ ಕನಸಿಗೆ ನನ್ನ ಸ್ನೇಹಿತರಾದ ಪನ್ನಗ ಭರಣ, ದಿಗಂತ್ ಸೇರಿದಂತೆ ಅನೇಕರು ಬೆಂಬಲವಾಗಿ ನಿಂತರು. ಎಮ್ಮಿ ನಾಮನಿರ್ದೇಶನಗೊಂಡಿರುವ ಅಧೀರ್ ಭಟ್ ಈ ಸರಣಿಗೆ ಕಥೆ ಬರೆದಿದ್ದು, ಬಾಲಿವುಡ್ನಲ್ಲಿ ಕೆಲಸ ಮಾಡಿರುವ ಚೈತನ್ಯ ಕುಂಭಕೋಣಂ ಕೂಡ ಕೈಜೋಡಿಸಿದ್ದಾರೆ. Zee5 ತಂಡದ ಹಗಲು-ರಾತ್ರಿ ಶ್ರಮ ಮತ್ತು ಪ್ರಿಯಾಂಕಾ ಉಪೇಂದ್ರ ಅವರ ಸಹಕಾರದಿಂದ ಕನ್ನಡದಲ್ಲಿ ಇಂತಹದೊಂದು ವಿನೂತನ ಪ್ರಯತ್ನ ಸಾಧ್ಯವಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
ನಿರ್ದೇಶಕ ಪನ್ನಗ ಭರಣ ಮಾತನಾಡಿ, “ನಾನು ಮಾರಿಷಸ್ನಲ್ಲಿ ಚಿತ್ರೀಕರಣದಲ್ಲಿದ್ದಾಗ ಈ ಪ್ರಾಜೆಕ್ಟ್ಗಾಗಿ ಕರೆ ಬಂತು. ವೇದಿಕೆ ಥಿಯೇಟರ್ ಆಗಿರಲಿ, ಟಿವಿ ಅಥವಾ ಮೊಬೈಲ್ ಆಗಿರಲಿ, ಕಥೆಯನ್ನು ದೃಶ್ಯರೂಪದಲ್ಲಿ ಪರಿಣಾಮಕಾರಿಯಾಗಿ ಹೇಳುವುದೇ ಮುಖ್ಯ. ಕನ್ನಡದಲ್ಲಿ ಹೊಸ ಫಾರ್ಮ್ಯಾಟ್ಗಳು ಏಕೆ ಬರುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರವಾಗಿ ನಾವು ಈ ಮೊದಲ ಹೆಜ್ಜೆ ಇಟ್ಟಿದ್ದೇವೆ. ಸಿನಿಮಾ ಶೈಲಿಯಲ್ಲೇ ಕಡಿಮೆ ಅವಧಿಯಲ್ಲಿ 30 ಎಪಿಸೋಡ್ಗಳನ್ನು ಚಿತ್ರೀಕರಿಸುವುದು ಸವಾಲಾಗಿತ್ತು. Zee5 ತಂಡ ಹಾಗೂ ನನ್ನ ನಿರ್ದೇಶನ ತಂಡದ ಬೆಂಬಲದಿಂದ ಇದು ಅಚ್ಚುಕಟ್ಟಾಗಿ ಮೂಡಿಬಂದಿದೆ. ಕೊರಿಯನ್ ಸರಣಿಗಳನ್ನು ನೋಡುವ ಪ್ರೇಕ್ಷಕರಿಗೆ ಈಗ ಕನ್ನಡದಲ್ಲೇ ಒಂದು ಮುದ್ದಾದ ಪ್ರೇಮಕಥೆಯನ್ನು ನೀಡುತ್ತಿದ್ದೇವೆ” ಎಂದರು.

ನಾಯಕ ನಟ ಪ್ರಣವ್ ಶ್ರೀಧರ್ ತಮ್ಮ ಪಾತ್ರದ ಬಗ್ಗೆ ವಿವರಿಸುತ್ತಾ, “ಒಟಿಟಿ ತೆರೆದಾಗಲೆಲ್ಲಾ ಕನ್ನಡ ಕಲಾವಿದರಿಗೆ ಇಂತಹ ವೆಬ್ ಸರಣಿಗಳು ಏಕಿಲ್ಲ ಎನಿಸುತ್ತಿತ್ತು. ಆ ಕನಸು ಈಗ ನನಸಾಗಿದೆ. ಇಲ್ಲಿ ನಾನು ಪಾಂಡವಪುರದ ರೈತನ ಮಗ ‘ಅರ್ಜುನ್’ ಪಾತ್ರ ಮಾಡಿದ್ದೇನೆ. ಬೆಂಗಳೂರಿನಲ್ಲಿ ಏನಾದರೂ ಸಾಧಿಸಬೇಕೆಂದು ಕಾರ್ಪೊರೇಟ್ ಕಂಪನಿಗೆ ಸೇರುವ ಆತನ ಜೀವನದಲ್ಲಿ ‘ನಿತ್ಯಾ’ ಬಂದಾಗ ಏನಾಗುತ್ತದೆ ಎಂಬುದೇ ಕಥೆ. ಪ್ರಿಯಾಂಕಾ ಉಪೇಂದ್ರ ಅವರು ಬಾಸ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದು, ಪನ್ನಗ ಸರ್ ರೊಮ್ಯಾಂಟಿಕ್ ದೃಶ್ಯಗಳನ್ನು ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ” ಎಂದರು.
ನಾಯಕಿ ಸಿತಾರಾ ಮಾತನಾಡಿ, “ನಾನು ಮೊದಲು ಇದರ ಸ್ಕ್ರಿಪ್ಟ್ ಓದಿದ ಮೇಲೆ ಬೆರಗಾದೆ. ಬೆಂಗಳೂರಿನ ಹುಡುಗಿ ನಿತ್ಯಾಳ ಪಾತ್ರ ನನಗೆ ತುಂಬಾ ವಿಶೇಷ. ಬೆಳಗ್ಗೆ 7ರಿಂದ ರಾತ್ರಿ 11:30ರವರೆಗೆ ನಿರಂತರವಾಗಿ ಚಿತ್ರೀಕರಣ ನಡೆಸಿದರೂ ಇಡೀ ಪಯಣ ಅವಿಸ್ಮರಣೀಯವಾಗಿತ್ತು. ನಿತ್ಯಾ ಬೆಂಗಳೂರಿನ ಹುಡುಗಿ. ಕಾಲೇಜು ಮುಗಿಸಿ ಮುಂದೆ ಓದಬೇಕಾ ಅಥವಾ ಇಂಟರ್ನ್ಶಿಪ್ ಮಾಡಬೇಕಾ ಅನ್ನೋ ಗೊಂದಲದಲ್ಲಿದ್ದು, ಕೊನೆಗೆ ಕಾರ್ಪೊರೇಟ್ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಅಲ್ಲಿ ಅವಳಿಗೆ ಅರ್ಜುನ್ ಭೇಟಿಯಾಗುತ್ತಾನೆ, ಅವರಿಬ್ಬರ ನಡುವೆ ಒಂದು ಕ್ಯೂಟ್ ಲವ್ ಸ್ಟೋರಿ ಶುರುವಾಗುತ್ತೆ” ಎಂದು ಅನುಭವ ಹಂಚಿಕೊಂಡರು.
ಜೀ ಕನ್ನಡ ಮತ್ತು ಕನ್ನಡ Zee5 ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾತನಾಡಿ, “ಕಳೆದ ಕೆಲವು ವರ್ಷಗಳಲ್ಲಿ ಜೀ ಸಂಸ್ಥೆ ‘ಒನ್ ಸ್ಟಾಪ್ ಸೊಲ್ಯೂಷನ್’ ಆಗಿ ಬೆಳೆದಿದೆ. ಮೈಕ್ರೋ ಡ್ರಾಮಾ ನಂತರ ಈಗ ಲಾಂಗ್ ಫಾರ್ಮ್ ವೆಬ್ ಸರಣಿಯನ್ನು ತರುತ್ತಿದ್ದೇವೆ. ಒಂದು ಎಪಿಸೋಡ್ ಚಿತ್ರೀಕರಣಕ್ಕೆ ಮೂರೂವರೆ ದಿನ ಬೇಕಾಗುತ್ತಿತ್ತು. ಟ್ರೈಲರ್ನಲ್ಲಿರುವ ಸಿನಿಮಾಟಿಕ್ ಗುಣಮಟ್ಟ ಎಲ್ಲಾ 30 ಎಪಿಸೋಡ್ಗಳಲ್ಲೂ ಇದೆ. ಡಿಜಿಟಲ್ ವೇದಿಕೆಯಲ್ಲಿ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ದೊಡ್ಡ ಸವಾಲು. ಸಿನಿಮಾದಂತೆ ಒಂದೇ ಕ್ಲೈಮ್ಯಾಕ್ಸ್ ಇರದೆ, ಇಲ್ಲಿ ಪ್ರತಿ ಎಪಿಸೋಡ್ಗೂ ಪ್ರತ್ಯೇಕ ಆರಂಭ, ಮಧ್ಯಂತರ ಮತ್ತು ಅಂತ್ಯವಿರುತ್ತದೆ. ಮುಂದಿನ ದಿನಗಳಲ್ಲಿ Zee5 ಎಕ್ಸ್ಕ್ಲೂಸಿವ್ ಆಗಿ ಟಾಕ್ ಶೋ, ಕಾಮಿಡಿ ಹಾಗೂ ನಾನ್-ಫಿಕ್ಷನ್ ಕಾರ್ಯಕ್ರಮಗಳನ್ನೂ ತರುವ ಯೋಜನೆಯಿದೆ” ಎಂದು ತಿಳಿಸಿದರು.





Be the first to comment