ಬೃಂದಾವಿಹಾರಿ

Movie Review: ಬೃಂದಾವನದಲಿ ತಿರುವಿನ ದಾರಿ

ಚಿತ್ರ: ಬೃಂದಾವಿಹಾರಿ
ನಿರ್ದೇಶನ: ಶ್ರೀನಿವಾಸ ರಾಜು
ನಿರ್ಮಾಣ: ಸಮೃದ್ಧಿ ಮಂಜುನಾಥ್
ತಾರಾಗಣ: ಗಣೇಶ್, ಮಾಳವಿಕಾ ಶರ್ಮ, ದೇವಿಕಾ ಭಟ್ ಮೊದಲಾದವರು…
ರೇಟಿಂಗ್: 4/5

ಬ್ರಿಟಿಷರು ಭಾರತವನ್ನು ಆಳುತ್ತಿದ್ದಂಥ ಕಾಲಘಟ್ಟ. ಅದೊಂದು ಊರನ್ನು ಕಂಪೌಂಡ್ ಹಾಕಿ‌ ಮುಚ್ಚಿಬಿಟ್ಟಿದ್ದಾರೆ. ಆ ಊರಿನ ಜನರು ತಮ್ಮ ಊರಿಗೆ ಬೃಂದಾವನ ಎಂದು ಹೆಸರಿಟ್ಟಿದ್ದಾರೆ. ಅಲ್ಲಿ ಕೃಷ್ಣನಂತೆ ಕೊಳಲೂದಿ ಬದುಕುವ ಯುವಕನೇ ಮಾಧವ.

ಮಾಧವ ಬೆಳೆದು ಯುವಕನಾಗುತ್ತಾನೆ. ಆದರೆ ಆ ಊರನ್ನು ದಾಟಿ ಹೋಗುವ ಅವಕಾಶ ಮಾತ್ರ ಆತನಿಗೆ ಸಿಗುವುದೇ ಇಲ್ಲ. ಊರಿಗೆ ಕಂಪೌಂಡ್ ಹಾಕಿರುವ ಬ್ರಿಟಿಷರು ಮನಸು ಮಾಡಿದರೆ ಮಾತ್ರ ಆ ಗೇಟ್ ತೆರೆದು ಹೊರಗೆ ಹೋಗಲು ಸಾಧ್ಯ. ಹಾಗೆ ಒಮ್ಮೆ ಬ್ರಿಟಿಷರ ಪರಿಧಿಯೊಳಗಿನಿಂದ ಯುವತಿಯೊಬ್ಬಳ ಪ್ರವೇಶವಾಗುತ್ತದೆ. ಆಕೆಯೇ ರಾಧ. ಮಾಧವನಿಗೆ ರಾಧೆಯಲ್ಲಿ ಪ್ರೀತಿಯಾಗುತ್ತದೆ. ಆದರೆ ರಾಧೆಯನ್ನು ಬ್ರಿಟಿಷರು ಆ ಊರಿನಿಂದ ಗಡೀಪಾರು ಮಾಡುತ್ತಾರೆ. ಅವಳು ಅಲ್ಲಿಂದ ಹೊರಡುವ ಸಂದರ್ಭದಲ್ಲಿ ಮತ್ತೆ ಒಂದು ದಿನ ಮರಳುವುದಾಗಿ ಹೇಳುತ್ತಾಳೆ. ಆದರೆ ಆಕೆ ಮರಳುವ ಮೊದಲು ಮಾಧವನ ಲೋಕದಲ್ಲಿ ಮಹತ್ತರವಾದ ಬದಲಾವಣೆ ನಡೆಯುತ್ತದೆ. ಅದೇನು ಎನ್ನುವುದೇ ಈ ಚಿತ್ರದ ಪ್ರಮುಖ ಅಂಶ.

ಕೊಳಲು ಹಿಡಿದು ಹಾಡು ನುಡಿಸುವ, ಗೆಳೆಯರೊಡನೆ ಗಿಲ್ಲಿ ದಾಂಡು ಆಡುವ ಮಾಧವನಾಗಿ ಗೋಲ್ಡನ್‌ ಸ್ಟಾರ್ ಗಣೇಶ್ ನಟಿಸಿದ್ದಾರೆ. ಆ ಕಾಲದ ಉಡುಗೆಯಲ್ಲಿ ರಾಧೆಯನ್ನು ಪ್ರೀತಿಸುವ ಯುವಕನಾಗಿ ಗಣೇಶ್ ಪಾತ್ರ ನಿರ್ವಹಿಸಿರುವ ರೀತಿ ಅದ್ಭುತವಾಗಿದೆ. ಇಷ್ಟೇನಾ ಎನ್ನುವ ಹೊತ್ತಿನಲ್ಲಿ ಚಿತ್ರದಲ್ಲೊಂದು ಅದ್ಭುತ ತಿರುವು ಇದೆ.‌ ಅದೇ ಕಥೆಗೆ ಜೀವಾಂಶ ಆಗಿರುವ ಕಾರಣ ಆ ದೃಶ್ಯವನ್ನು, ತಿರುವನ್ನು ಪ್ರತಿ ಪ್ರೇಕ್ಷಕರು ಪರದೆಯ ಮೇಲೆ ನೋಡಿದರೇನೇ ಸೊಗಸು.

ಗಣೇಶ್ ಜೊತೆಗೆ ಇಲ್ಲಿ ತಾರೆಯರ ದಂಡೇ ಇದೆ. ಮಾಧವನ ಅಜ್ಜ ಅಜ್ಜಿಯಾಗಿ ಹಿರಿಯ ನಟಿ ಲಕ್ಷ್ಮೀ ಮತ್ತು ಅಶೋಕ್ ಅಭಿನಯಿಸಿದ್ದಾರೆ. ಅತಿಥಿಗಳಾಗಿ ಬರುವ ದೊಡ್ಡಪ್ಪನಾಗಿ ನಟರಂಗ ರಾಜೇಶ್ ದೊಡ್ಡಮ್ಮನಾಗಿ ಸಂಗೀತಾ ಕಾಣಿಸಿದ್ದಾರೆ. ಚಿಕ್ಕಪ್ಪನಾಗಿ ರವಿ ಭಟ್ ಚಿಕ್ಕಮ್ಮನಾಗಿ ವೀಣಾ ಬಾಲಾಜಿ ಅಭಿನಯಿಸಿದ್ದಾರೆ.

ಬೃಂದಾವನದ ಹೊರಗಿನ ಪಾತ್ರಗಳನ್ನು ರಾಮ್ ಕುಮಾರ್, ಅವಿನಾಶ್, ರಂಗಾಯಣ ರಘು, ಸಾಧುಕೋಕಿಲ, ಗಿರೀಶ್ ಶಿವಣ್ಣ ನಟಿಸಿದ್ದಾರೆ. ಗಣೇಶ್ ಸ್ನೇಹಿತರಾಗಿ ಕುರಿ ಪ್ರತಾಪ್, ಮಂಜು ಪಾವಗಡ, ಕುರಿ ಪ್ರತಾಪ್ ಮೊದಲಾದವರಿದ್ದಾರೆ.

ತಾರಾಗಣದಿಂದ ಮಾತ್ರವಲ್ಲ, ಹಾಡುಗಳು, ಲೊಕೇಶನ್, ಛಾಯಾಗ್ರಹಣ ಹೀಗೆ ಪ್ರತಿಯೊಂದು ವಿಚಾರದಲ್ಲಿ ಕೂಡ ಬೃಂದಾ ವಿಹಾರಿ ಶ್ರೀಮಂತವಾಗಿದೆ. ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಗಣೇಶ್ ಅವರ ಭಾವನಾತ್ಮಕ ನಟನೆಯನ್ನು ನೋಡುವ ಮಂದಿಯ ಕಣ್ಣಲ್ಲಿ ಒಂದು ಹನಿ ಕಣ್ಣೀರು ಜಿನುಗುವುದು ಖಚಿತ. ಅದೊಂದು ದೃಶ್ಯವೇ ಸಾಕು ಗಣೇಶ್ ಯಾಕೆ ಕೌಟುಂಬಿಕ ಪ್ರೇಕ್ಷಕರ ಮೆಚ್ಚಿನ ನಟ ಎಂದು ತಿಳಿಯಲು.

ಹಾಸ್ಯ, ತರಲೆ, ಪ್ರೇಮ ಮತ್ತು ಭಾವನಾತ್ಮಕ ಸಂದೇಶದೊಂದಿಗೆ ಮನಮುಟ್ಟುವ ಚಿತ್ರ ಬೃಂದಾ ವಿಹಾರಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!