ಚಿತ್ರ: ಶಂಕರಾಭರಣ
ನಿರ್ದೇಶನ: ಸುಮಂತ್ ಭಟ್
ನಿರ್ಮಾಣ: ರಂಗಸ್ಥಳ ಸ್ಟುಡಿಯೋಸ್
ತಾರಾಗಣ: ಶೈನ್ ಶೆಟ್ಟಿ, ತನ್ವಿ ರಾವ್ ಮತ್ತು ತನ್ವಿ ರಾಮ್ ಮೊದಲಾದವರು….
ರೇಟಿಂಗ್: 3.5/5
ಬಸ್ ಚಾಲಕ ವಿಠಲನ ಪುತ್ರ ಶಂಕರ. ಶಾಲಾ ದಿನಗಳಿಂದಲೇ ತಂದೆಯಂತೆ ಡ್ರೈವರಾಗಬೇಕು ಎನ್ನುವುದು ಆತನ ಕನಸು.
ಆದರೆ ಚಾಲಕನಾದ ಬಳಿಕ ಒಮ್ಮೆ ಮಾಲೀಕನಿಂದ ಅವಮಾನ ಎದುರಿಸುತ್ತಾನೆ. ಅಲ್ಲಿಂದ ಕೆಲಸ ತೊರೆದು ಬಂದಾತನಿಗೆ ಎಲ್ಲಿಯೂ ಕೆಲಸ ಸಿಗುವುದಿಲ್ಲ. ಸ್ವತಃ ಒಂದು ಬಸ್ ಕೊಳ್ಳುವ ಯೋಜನೆ ಹಾಕುತ್ತಾನೆ. ಸೆಕೆಂಡ್ ಹ್ಯಾಂಡ್ ಬಸ್ ಕೊಂಡವನು ಹೊಸದರಂತೆ ಬದಲಾಯಿಸಿ ತಾನೇ ಚಾಲಕನಾಗುತ್ತಾನೆ. ಆದರೆ ಆತನಿಗೆ ಸಿಗುವ ರೂಟ್ ತೌಡುಗೋಳಿಯಿಂದ ಉಡುಪಿಗೆ ಹೋಗುವಂಥದ್ದು ಆಗಿರುತ್ತದೆ. ಆದರೆ ಕಳೆದ ಹದಿನೈದು ವರ್ಷಗಳಿಂದ ಆ ರೂಟ್ ನಲ್ಲಿ ಯಾವ ಬಸ್ ಗಳು ಕೂಡ ಸಂಚರಿಸುತ್ತಿರುವುದಿಲ್ಲ. ಅದಕ್ಕೆ ಕಾರಣವೇನು? ಅಂಥದೊಂದು ರೂಟ್ ಆಯ್ದುಕೊಂಡ ಬಳಿಕ ಶಂಕರನಿಗೆ ಎದುರಾಗುವ ಸಮಸ್ಯೆಗಳೇನು ಎನ್ನುವುದನ್ನು ಚಿತ್ರದಲ್ಲಿ ಕುತೂಹಲಕಾರಿಯಾಗಿ ತೋರಿಸಲಾಗಿದೆ.
ಶಂಕರ ಬಾಲ್ಯದಿಂದಲೇ ಭಯಂಕರ ಎಂದು ಹೆಸರು ಪಡೆದವನು. ಆದರೆ ಆತ ಕೂಡ ಭಯಗೊಳ್ಳುವ ಘಟನೆಗಳು ಎದುರಾಗುತ್ತವೆ. ಆತನಿಗೆ ಯುವತಿಯೊಬ್ಬಳ ದೆವ್ವ ತನ್ನ ಬಸ್ಸಲ್ಲಿದೆ ಎನ್ನುವ ಸತ್ಯ ಅರಿವಾಗುತ್ತದೆ. ಆ ದೆವ್ವದ ಹಿಂದಿನ ಸತ್ಯವೇ ಶಂಕರಾಭರಣ ಚಿತ್ರದ ಸಾರ.
ಡ್ರೈವರ್ ಶಂಕರನಾಗಿ ಶೈನ್ ಶೆಟ್ಟಿ ನಟನೆ ಆಕರ್ಷಕ. ಒಬ್ಬ ನಿಜವಾದ ಚಾಲಕನ ಬದುಕಿನೊಳಗೆ ಪ್ರವೇಶ ಮಾಡಿದಂಥ ಅನುಭವ ನಮಗಾಗುತ್ತದೆ. ಬಸ್ಸಿನ ಸಿಬ್ಬಂದಿಗಳ ಜೊತೆಗಿನ ಸಂಬಂಧವಾಗಲೀ, ಅಥವಾ ಮನೆಯೊಳಗಿನ ಅನುಬಂಧವನ್ನಾಗಲೀ ನಿರ್ದೆಶಕರು ಅಚ್ಚುಕಟ್ಟಾಗಿ ತೋರಿಸಿದ್ದಾರೆ.
ಬಸ್ ಕೊಳ್ಳಲು ನೆರವಾಗುವ ಅಕ್ಕನ ಆಪ್ತತೆ, ಮೊದಲ ಬಾರಿ ಬಸ್ ಚಲಾಯಿಸಿ ಉದ್ಘಾಟಿಸುವ ತಂದೆ ಮೊದಲಾದ ಸನ್ನಿವೇಶಗಳು ಮನ ಸೆಳೆಯುತ್ತವೆ. ಅಕ್ಕನ ಪಾತ್ರದಲ್ಲಿ ಆತ್ಮೀಯವಾಗಿ ಕಾಣಿಸುವ ಕೃತಿ ಶೆಟ್ಟಿ, ಅಪ್ಪನಾಗಿ ಸದಾ ನಿಗೂಢವಾಗಿ ಕಾಡುವ ದೀಪಕ್ ರೈ ಪಾಣಾಜೆ ನಟನೆ ನೆನಪಲ್ಲಿ ಉಳಿಯುತ್ತದೆ.
ಶಂಕರನ ಪ್ರೇಯಸಿ ಜೆನಿ ಪಾತ್ರವನ್ನು ತನ್ವಿ ರಾಮ್ ನಿಭಾಯಿಸಿದ್ದಾರೆ. ಬಸ್ಸಿನೊಳಗೆ ಕಾಡುವ ದೆವ್ವವಾಗಿ ತನ್ವಿರಾವ್ ನಟಿಸಿದ್ದಾರೆ. ಮಧುಕರ ಮತ್ತು ಸುಧಾಕರ ಎನ್ನುವ ಅಣ್ಣ ತಮ್ಮಂದಿರ ಪಾತ್ರಗಳನ್ನು ಅನಿಲ್ ಮತ್ತು ಸಂಪತ್ ನಿಭಾಯಿಸಿದ್ದಾರೆ. ಮಧುಕರ್ ಪುತ್ರ ಪ್ರೇಮ್ ಪಾತ್ರಕ್ಕೆ ಅರ್ಜುನ್ ಕಜೆ ಜೀವ ನೀಡಿದ್ದಾರೆ. ಪ್ರತಿಯೊಂದು ಪಾತ್ರಗಳಿಂದಲೂ ಉತ್ತಮ ಅಭಿನಯ ತೆಗೆಸಿರುವ ಕೀರ್ತಿ ನಿರ್ದೇಶಕರಿಗೆ ಸಲ್ಲುತ್ತದೆ.
ಚರಣ್ ರಾಜ್ ಹಿನ್ನೆಲೆ ಸಂಗೀತ ಮತ್ತು ಹಳ್ಳಿ ಪರಿಸರದ ಅದ್ಭುತ ಚಿತ್ರೀಕರಣ ಈ ಚಿತ್ರದ ಹೈಲೈಟ್. ದೆವ್ವವಿದ್ದರೂ ಕುಟುಂಬ ಸಮೇತ ನೋಡಬಹುದಾದ ಚಿತ್ರ ನೀಡಿರುವ ಚಿತ್ರತಂಡದ ಪ್ರಯತ್ನವನ್ನು ಮೆಚ್ಚಲೇಬೇಕು.





Be the first to comment