‘ಮಹಾಭಾರತ’ ಧಾರಾವಾಹಿಯಲ್ಲಿ ಕೃಷ್ಣನ ಪಾತ್ರದ ಮೂಲಕ ಜನಪ್ರಿಯರಾಗಿದ್ದ ನಟ ಹಾಗೂ ಮಾಜಿ ಸಂಸದ ನಿತೀಶ್ ಭಾರಧ್ವಾಜ್ ‘ರಾಮಾಯಣ’ ಚಿತ್ರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿರುವ ಅವರು, ಸಿನಿಮಾ ಕಮ್ಯೂನಿಸ್ಟ್ ಅಜೆಂಡಾ ಹೊಂದಿದೆ ಎಂಬ ಆರೋಪ ಮಾಡಿದ್ದಾರೆ. ಸಿನಿಮಾದ ಕಥೆ ನಿರೂಪಣೆ, ರಾಮ ಮತ್ತು ರಾವಣನ ಪಾತ್ರಗಳ ಚಿತ್ರಣ, ನಿರ್ಮಾಣಕ್ಕೆ ಬಂದಿರುವ ಹಣದ ಮೂಲದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
‘ಶ್ರೀರಾಮನನ್ನು ಭಾವನೆಗಳಿಲ್ಲದ ಸಾಮಾನ್ಯ ಮನುಷ್ಯನಂತೆ ಚಿತ್ರಿಸಲಾಗಿದೆ. ರಾಮನ ವ್ಯಕ್ತಿತ್ವದಲ್ಲಿ ಮರ್ಯಾದೆ ಮತ್ತು ವಚನಪಾಲನೆಗೆ ಮಹತ್ವವಿದೆ. ಅಯೋಧ್ಯೆ ತೊರೆಯುವಾಗ ರಾಮ ಅಳುವ ದೃಶ್ಯವೂ ಸರಿಯಲ್ಲ’ ಎಂದು ಅವರು ಟೀಕಿಸಿದ್ದಾರೆ.
‘ರಾವಣನ ನಕಾರಾತ್ಮಕ ಗುಣಗಳನ್ನು ಸರಿಯಾಗಿ ತೋರಿಸಿಲ್ಲ. ಆತ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ನಾಯಕನಂತೆ ಕಾಣುತ್ತಾನೆ. ರಾವಣನನ್ನು ಜ್ಞಾನಿ ಮತ್ತು ನ್ಯಾಯಪರ ರಾಜನಂತೆ ತೋರಿಸಿದರೆ, ವಿಷ್ಣುವಿನ ಅವತಾರದ ಅಗತ್ಯವೇನು?’ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.
ಯುವ ಪೀಳಿಗೆ ರಾವಣನನ್ನು ನಾಯಕನಂತೆ ಮೆಚ್ಚಿಕೊಳ್ಳುವ ರೀತಿಯಲ್ಲಿ ಚಿತ್ರಿಸಲಾಗಿದೆ. ಖಳನಾಯಕನನ್ನು ನಾಯಕನನ್ನಾಗಿ, ನಾಯಕನನ್ನು ಖಳನನ್ನಾಗಿ ಮಾಡಲಾಗುತ್ತಿದೆ. ಅರಣ್ಯಕಾಂಡ ಮತ್ತು ಯುದ್ಧಕಾಂಡದ ಹಲವು ಪ್ರಸಂಗಗಳನ್ನು ಕೈಬಿಟ್ಟಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಚಿತ್ರದ ಹಣಕಾಸಿನ ಮೂಲದ ಬಗ್ಗೆ ನಿತೀಶ್ ಭಾರಧ್ವಾಜ್ ಪ್ರಶ್ನೆ ಎತ್ತಿದ್ದಾರೆ. ‘ಲಕ್ಸೆಂಬರ್ಗ್, ಯುಎಇ ಮತ್ತು ಸಿಂಗಾಪುರದಿಂದ ನಿರ್ಮಾಣ ಸಂಸ್ಥೆಗೆ ಹಣ ಬಂದಿದೆ. ಭಾರತೀಯ ನಾಗರಿಕತೆಯನ್ನು ಕುಗ್ಗಿಸಲು ಸಿನಿಮಾ ಬಳಕೆಯಾಗುತ್ತಿದೆ. ಈ ವಿಚಾರವನ್ನು ಸರ್ಕಾರ ಪರಿಶೀಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.
—-





Be the first to comment