ಆಯುಷ್’ ಸಿನಿಮಾದ ನಿರ್ದೇಶಕ ಪುರುಷೋತ್ತಮ್ ಹಾಗೂ ಪ್ರಿಯಾಂಕಾ ಉಪೇಂದ್ರ ನಡುವಣ ವಿವಾದ ಸೌಹಾರ್ದಯುತವಾಗಿ ಇತ್ಯರ್ಥವಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಧ್ಯಸ್ಥಿಕೆಯಲ್ಲಿ ಪುರುಷೋತ್ತಮ್ ಹಾಗೂ ಪ್ರಿಯಾಂಕಾ ಉಪೇಂದ್ರ ನಡುವಣ ವಾದ-ವಿವಾದಗಳು ತಣ್ಣಗಾಗಿವೆ. ಈ ಸಮಸ್ಯೆ ಸೌಹಾರ್ದಯುತವಾಗಿ ಇತ್ಯರ್ಥವಾಗಿದೆ ಎಂದು ಘೋಷಿಸಲಾಗಿದೆ.
ಸಿನಿಮಾದ ಕಥೆಯಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದ್ದು, ತಾವೇ ಹೊಸ ಕಥೆಯನ್ನು ಸಿದ್ಧಪಡಿಸಿರುವುದಾಗಿ ಪ್ರಿಯಾಂಕಾ ತಿಳಿಸಿದ್ದಾರೆ. ಉಪೇಂದ್ರ ಕೂಡ ಸಿನಿಮಾದ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಸೂಚಿಸಿದ್ದಾರೆ. ನಿರ್ದೇಶಕರಿಗೆ ನೀಡಬೇಕಾದ ಸಂಭಾವನೆಯನ್ನು ಸಂಪೂರ್ಣವಾಗಿ ಪಾವತಿಸಲಾಗುವುದು. ಕಾಶ್ಮೀರದಲ್ಲಿ ಚಿತ್ರೀಕರಿಸಿರುವ ದೃಶ್ಯಾವಳಿಗಳಲ್ಲಿ ಕೆಲವು ಮಾಂಟೇಜ್ ದೃಶ್ಯಗಳನ್ನು ಮಾತ್ರ ಬಳಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ನಿರ್ದೇಶಕರ ಕೆಲಸದಲ್ಲಿ ತಮ್ಮ ನಿರೀಕ್ಷೆಗೆ ತಕ್ಕಂತಹ ಫಲಿತಾಂಶ ಸಿಕ್ಕಿರಲಿಲ್ಲ. ಸಂವಹನದಲ್ಲಿಯೂ ಸಮಸ್ಯೆಗಳಿದ್ದವು. ಇದೇ ಕಾರಣಕ್ಕೆ ನಿರ್ದೇಶಕರನ್ನು ಬದಲಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ನಿರ್ದೇಶಕ ವೇಣು ಅವರನ್ನು ಕೈಬಿಟ್ಟ ವಿಚಾರದಲ್ಲಿ ತಮ್ಮದೇ ತಪ್ಪಿದೆ ಎಂದು ಒಪ್ಪಿಕೊಂಡಿದ್ದಾರೆ. ಮಗನ ಸಿನಿಮಾದಲ್ಲಿ ಇಂತಹ ಪರಿಸ್ಥಿತಿ ಎದುರಾಗಿದ್ದಕ್ಕೆ ಬೇಸರವಾಗಿದೆ. ಈ ಘಟನೆಯಿಂದ ಪಾಠ ಕಲಿತಿದ್ದು, ಮುಂದಿನ ಸಿನಿಮಾಗಳಲ್ಲಿ ಈ ರೀತಿಯ ಸಮಸ್ಯೆ ಆಗದಂತೆ ಮುಂಚಿತವಾಗಿ ಒಪ್ಪಂದ ಮಾಡಿಕೊಂಡು ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ನಿರ್ದೇಶಕ ಪುರುಷೋತ್ತಮ್ ಪ್ರಿಯಾಂಕಾ ಉಪೇಂದ್ರ ಅವರಲ್ಲಿ ಕ್ಷಮೆಯಾಚಿಸಿದ್ದಾರೆ. ‘ಪ್ರಿಯಾಂಕಾ ಮೇಡಂ ತಮಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಹೀಗಾಗಿ ಅವರಲ್ಲಿ ಕ್ಷಮೆ ಕೇಳುತ್ತೇನೆ. ಅವರ ಮಗನ ಸಿನಿಮಾವನ್ನು ಅವರ ಮಡಿಲಿಗೆ ಹಾಕುತ್ತಿದ್ದೇನೆ. ಅವರು ಅದನ್ನು ಮುಂದುವರಿಸಲಿ’ ಎಂದು ಪುರುಷೋತ್ತಮ್ ತಿಳಿಸಿದ್ದಾರೆ.
—-





Be the first to comment