ಲಕ್ಷ್ಮೀಪುತ್ರ

ಎ.ಪಿ. ಅರ್ಜುನ್‌ ನಿರ್ಮಾಣದ ‘ಲಕ್ಷ್ಮೀಪುತ್ರ’ ಟ್ರೇಲರ್ ರಿಲೀಸ್

ಎ.ಪಿ. ಅರ್ಜುನ್ ಸಾರಥ್ಯದಲ್ಲಿ ಮೂಡಿಬಂದಿರುವ ‘ಲಕ್ಷ್ಮೀಪುತ್ರ’ ಚಿತ್ರವನ್ನು ಅನ್ನಪೂರ್ಣ ಎ.ಪಿ. ಅರ್ಜುನ್ ನಿರ್ಮಾಣ ಮಾಡಿದ್ದು, ರವಿಕುಮಾರ್ ಅವರು ಸಹ ನಿರ್ಮಾಪಕರಾಗಿದ್ದಾರೆ.

​ಎ.ಪಿ. ಅರ್ಜುನ್ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದಿದ್ದು, ಸಂಭಾಷಣೆಯಲ್ಲಿ ಪ್ರಶಾಂತ್ ರಾಜಪ್ಪ ಮತ್ತು ವಿಜಯ್ ಈಶ್ವರ್ ಕೈಜೋಡಿಸಿದ್ದಾರೆ. ಹಾಗೂ ವಿಜಯ್ ಎಸ್. ಸ್ವಾಮಿ ಅವರ ಚೊಚ್ಚಲ ನಿರ್ದೇಶನ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

‘ಉಪಾಧ್ಯಕ್ಷ’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ನಟ ಚಿಕ್ಕಣ್ಣ ನಾಯಕನಾಗಿ ನಟಿಸಿರುವ ಎರಡನೇ ಸಿನಿಮಾ ಈ ಚಿತ್ರದ ಟ್ರೇಲರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಹಾಸ್ಯದ ಜೊತೆಗೆ ಭರ್ಜರಿ ಆ್ಯಕ್ಷನ್ ಮತ್ತು ಭಾವನಾತ್ಮಕ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಅನ್ನು ‘ಕರುನಾಡ ಚಕ್ರವರ್ತಿ’ ಡಾ. ಶಿವರಾಜ್‌ಕುಮಾರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಹಳ್ಳಿ ಹುಡುಗನ ಗೆಟಪ್‌ನಲ್ಲಿ ಚಿಕ್ಕಣ್ಣ ಗಮನ ಸೆಳೆದಿದ್ದು, ಹಿರಿಯ ನಟಿ ತಾರಾ ಅವರು ಚಿಕ್ಕಣ್ಣನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎ.ಪಿ. ಅರ್ಜುನ್ ಅವರ ನಿರ್ಮಾಣ ಹಾಗೂ ಸಾರಥ್ಯದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದು, ಇದೇ 27ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಲಕ್ಷ್ಮೀಪುತ್ರ

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ನಟ ಶಿವರಾಜ್‌ಕುಮಾರ್, ಚಿಕ್ಕಣ್ಣ ಅವರ ನಟನೆ ಮತ್ತು ನೃತ್ಯವನ್ನು ಮನಸಾರೆ ಕೊಂಡಾಡಿದರು. “ಚಿಕ್ಕಣ್ಣ ಹಿಂದಿನ ಸಿನಿಮಾಗಳಿಗಿಂತಲೂ ಈ ಚಿತ್ರದಲ್ಲಿ ತುಂಬಾ ಲೀಲಾಜಾಲವಾಗಿ ಡ್ಯಾನ್ಸ್ ಮಾಡಿದ್ದಾರೆ. ಅವರ ಡ್ಯಾನ್ಸ್ ನೋಡಿದರೆ ನನಗೆ ಪ್ರಭುದೇವ ಅವರ ನೆನಪಾಗುತ್ತದೆ. ಭೂಷಣ್ ಮತ್ತು ಹರ್ಷ ಮಾಸ್ಟರ್ ಅವರ ಕೊರಿಯೋಗ್ರಫಿ ಹಾಗೂ ಅರ್ಜುನ್ ಜನ್ಯ ಅವರ ಮೂರು ಹಾಡುಗಳು ಅದ್ಭುತವಾಗಿವೆ. ವಿಶೇಷವಾಗಿ ತಾಯಿ ಸೆಂಟಿಮೆಂಟ್ ಹಾಡಿನಲ್ಲಿ ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್, ಶಂಕರ್ ನಾಗ್ ಅವರ ತಾಯಂದಿರ ಫೋಟೋಗಳನ್ನು ಬಳಸಿರುವುದು ಮೈ ರೋಮಾಂಚನಗೊಳಿಸುತ್ತದೆ” ಎಂದು ಭಾವುಕರಾದರು. ತಾಯಿ ಪ್ರೀತಿಯ ಬಗ್ಗೆ ತಮ್ಮ ಬಾಲ್ಯದ ತುಂಟಾಟಗಳನ್ನು ನೆನೆದ ಶಿವಣ್ಣ, ಅಮ್ಮ ಹೊಡೆಯಲು ಬಂದಾಗ 20 ಅಡಿ ಮಹಡಿಯಿಂದ ಜಿಗಿದಿದ್ದ ಘಟನೆಯನ್ನೂ ಹಂಚಿಕೊಂಡರು. ಅಲ್ಲದೆ, “ಚಿಕ್ಕಣ್ಣ ಅವರ ಹಾಸ್ಯದಲ್ಲಿ ಆಡಂಬರವಿಲ್ಲ, ಬಹಳ ಸಟಲ್ ಆಗಿ ನಟಿಸುತ್ತಾರೆ. ಬರೆದಿಟ್ಟುಕೊಳ್ಳಿ, ಇನ್ನೆರಡು-ಮೂರು ವರ್ಷಗಳಲ್ಲಿ ಚಿಕ್ಕಣ್ಣ ದೊಡ್ಡ ಸೂಪರ್ ಸ್ಟಾರ್ ಆಗುತ್ತಾರೆ” ಎಂದು ಭವಿಷ್ಯ ನುಡಿದರು. ನಾಯಕಿ ವಂದಿತಾ ಹಾಗೂ ತಾರಾ ಅವರ ಅಭಿನಯಕ್ಕೂ ಶಿವಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿವರಾಜ್‌ಕುಮಾರ್ ಅವರ ಈ ಮಾತುಗಳಿಗೆ ಭಾವುಕರಾಗಿ ಪ್ರತಿಕ್ರಿಯಿಸಿದ ನಟ ಚಿಕ್ಕಣ್ಣ, “ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಎಲ್ಲದಕ್ಕಿಂತ ಹೆಚ್ಚಾಗಿ ಅಣ್ಣಾವ್ರ ಮಗನ ಬಾಯಲ್ಲಿ ಇಂತಹ ಮಾತು ಕೇಳಿರುವುದು ನಮ್ಮ ತಂದೆ-ತಾಯಿ ಮಾಡಿದ ಪುಣ್ಯ. ಈ ಮಾತು ಕೇಳಿದಾಗಲೇ ನಾನು ಸೂಪರ್ ಸ್ಟಾರ್ ಆದಷ್ಟೇ ಖುಷಿಯಾಯಿತು” ಎಂದು ಸಂತಸ ಹಂಚಿಕೊಂಡರು. ತಮ್ಮ ಪಾತ್ರ ಮತ್ತು ಚಿತ್ರದ ಬಗ್ಗೆ ಮಾತನಾಡಿದ ಅವರು, “ಇದು ಕೇವಲ ಕಾಮಿಡಿ ಅಥವಾ ಕಮರ್ಷಿಯಲ್ ಸಿನಿಮಾವಲ್ಲ, ಪ್ರತಿಯೊಬ್ಬ ಮಧ್ಯಮ ವರ್ಗದ ಹುಡುಗನ ಜೀವನದಲ್ಲಿ ನಡೆಯುವ ನೈಜ ಘಟನೆಗಳ ಕಥೆ. ಪ್ರೀತಿ, ಸ್ನೇಹ, ತಾಯಿ-ಮಗನ ಬಾಂಧವ್ಯ ಹೀಗೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ದೃಶ್ಯ ಕನೆಕ್ಟ್ ಆಗುತ್ತದೆ. ಇದೇ 27ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ಸಿನಿಮಾ ಇಷ್ಟವಾದರೆ ಮಾತ್ರ ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳಿ” ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿದರು.

ಚಿತ್ರ ನಿರ್ಮಾಣದ ಹಾದಿಯ ಬಗ್ಗೆ ಮಾತನಾಡಿದ ಎ.ಪಿ. ಅರ್ಜುನ್, ಈ ಸಿನಿಮಾ ಸೆಟ್ಟೇರಲು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಆಶೀರ್ವಾದವೇ ಕಾರಣ ಎಂದು ಸ್ಮರಿಸಿದರು. “ಚಿತ್ರವನ್ನು ಹೇಗೆ ಶುರು ಮಾಡುವುದೆಂದು ತೋಚದಿದ್ದಾಗ ಮಂತ್ರಾಲಯಕ್ಕೆ ಹೋಗಿ ದರ್ಶನ ಪಡೆದು ಬಂದ ತಕ್ಷಣವೇ ನೇರವಾಗಿ ಸಿನಿಮಾದ ಶೂಟಿಂಗ್ ಶುರು ಮಾಡಿದೆವು. ಅಷ್ಟೇ ಅಲ್ಲದೆ, ಚಿತ್ರೀಕರಣದ ಸಮಯದಲ್ಲಿ ಎಷ್ಟೇ ಕಷ್ಟ ಬಂದರೂ ಪ್ರತಿ ಗುರುವಾರ ಹಣದ ವ್ಯವಸ್ಥೆಯಾಗಿ ಎಲ್ಲರಿಗೂ ತಲುಪುತ್ತಿತ್ತು. ನನ್ನ ಬೆನ್ನೆಲುಬಾಗಿ ನಿಂತ ಆರ್.ಕೆ. ರವಿಕುಮಾರ್, ಸಚಿವ ಸಂತೋಷ್ ಲಾಡ್ ಸೇರಿದಂತೆ ಚಿತ್ರಕ್ಕೆ ಸಹಕರಿಸಿದ ಅನೇಕರ ಹೆಸರುಗಳು ‘ರಾ’ ಅಕ್ಷರದಿಂದಲೇ ಆರಂಭವಾಗಿರುವುದು ರಾಯರ ಪವಾಡ” ಎಂದರು.

ತಮ್ಮ ಸಿನಿಮಾ ಪ್ರೀತಿಯ ಬಗ್ಗೆ ಮಾತು ಮುಂದುವರಿಸಿದ ಅರ್ಜುನ್, “ನನಗೆ ಸಣ್ಣ ಸಿನಿಮಾ, ದೊಡ್ಡ ಸಿನಿಮಾ ಎಂಬ ಭೇದವಿಲ್ಲ. ಕ್ಯಾಮೆರಾ ಮುಂದೆ ನಿಲ್ಲುವ ಪ್ರತಿಯೊಬ್ಬರೂ ನನಗೆ ಸೂಪರ್ ಸ್ಟಾರ್‌ಗಳೇ. ಈ ಸಿನಿಮಾಗೆ ಚಿಕ್ಕಣ್ಣನೇ ದೊಡ್ಡ ಸ್ಟಾರ್. ತಾರಮ್ಮ, ವಂದಿತಾ, ಮಿತ್ರ, ಶಿವರಾಜ್ ಕೆ.ಆರ್. ಪೇಟೆ, ಧರ್ಮಣ್ಣ, ಕುರಿ ಪ್ರತಾಪ್ ಸೇರಿದಂತೆ ಇಡೀ ತಂಡ ಅದ್ಭುತವಾಗಿ ಕೆಲಸ ಮಾಡಿದೆ. ಗುಣಮಟ್ಟದಲ್ಲಿ ಎಲ್ಲಿಯೂ ರಾಜಿಯಾಗದೆ, ಅದ್ದೂರಿಯಾಗಿ ಈ ಚಿತ್ರವನ್ನು ತೆರೆಗೆ ತಂದಿದ್ದೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!