‘ಯಾರು ಯಾರಿಗೂ ಟಾಂಗ್ ಕೊಟ್ಟಿಲ್ಲ. ಕೊಡಲೂ ಬಾರದು’ ಎಂದು ಪ್ರೇಮದ ಊರಲಿ ಚಿತ್ರದ ನಟ ಶ್ರೀರಾಮ್ ಅವರು ಯಶ್ ಅಭಿಮಾನಿಗಳಿಗೆ ಹೇಳಿದ್ದಾರೆ.
ಬೆಂಗಳೂರಿನ ಬಿಎಚ್ ಇಎಲ್ ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶ್ರೀರಾಮ್, ‘ನಾವು ಯಾರೋ ಸಿನಿಮಾರಂಗವನ್ನೇ ಎತ್ತಿ ನಿಲ್ಲಿಸಿ ಬಿಟ್ಟಿದ್ದೀವಿ ಅಥವಾ ಏನೋ ಮಾಡಿಬಿಟ್ಟಿದ್ದೀವಿ ಅನ್ನೋದ್ ಅಲ್ಲ.. ಅಣ್ಣಾವ್ರ ಕಾಲದಿಂದಲೂ ಸಿನಿಮಾರಂಗ ಬಹಳ ಎತ್ತರದಲ್ಲೇ ಇದೆ. ಅಣ್ಣಾವ್ರು ಮತ್ತೆ ಇತರೆ ದೊಡ್ಡವರು ಎಲ್ಲ ಮಾಡಿ ಹೆಸರು ಮಾಡಿ ಹೋಗಿದ್ದಾರೆ. ನಾವು ಚಿಕ್ಕದಾಗಿ ಪುಟ್ಟದಾಗಿ ಅಳಿಲು ಸೇವೆ ಮಾಡುತ್ತಿದ್ದೇವೆ ಅಷ್ಟೇ. ಅದಕ್ಕೆ ನಿಮ್ಮ ಬೆಂಬಲ ಪ್ರೀತಿ ಯಾವಾಗಲೂ ಹೀಗೇ ಇರಬೇಕು’ ಎಂದು ಹೇಳಿದ್ದರು.
ಪ್ರೇಮದ ಊರಲಿ ಚಿತ್ರದ ಸಕ್ಸಸ್ ಕುರಿತು ಮಾತನಾಡಿ , ‘ಚಿತ್ರವನ್ನು ತಮ್ಮ ಭುಜದ ಮೇಲಿಟ್ಟುಕೊಂಡು ಮೆರವಣಿಗೆ ಮಾಡಿದ್ದೀರಿ. ಇದೇ ಕಾರಣಕ್ಕೆ ಸಿನಿಮಾ ಇಂದು ಈ ಮಟ್ಟಕ್ಕೆ ಖ್ಯಾತಿ ತಂದುಕೊಟ್ಟಿದೆ. ಈ ಗೆಲುವು ಕೇವಲ ನಮ್ಮದಲ್ಲ. ಇದು ಎಲ್ಲರ ಗೆಲುವು. ಇಂತಹ ಸಿನಿಮಾಗಳು ಹಲವಾರು ಬರಲಿ. ತಿಂಗಳಿಗೆ ಒಂದು ಸಿನಿಮಾ ಆದರೂ ಇದೇ ರೀತಿಯ ಗೆಲ್ಲಲಿ. ಆಗ ನಾವಷ್ಟೇ ಅಲ್ಲ. ಇಡೀ ಚಿತ್ರರಂಗ ಶ್ರೀಮಂತವಾಗುತ್ತದೆ’ ಎಂದು ಹೇಳಿದ್ದರು.
ಶ್ರೀರಾಮ್ ಅವರ ಹೇಳಿಕೆ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳ ವಿರೋಧಕ್ಕೂ ಕಾರಣವಾಗಿದೆ. ಹಿಂದೆ ನಟ ಯಶ್ ಕನ್ನಡ ಚಿತ್ರವನ್ನ ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಬಗ್ಗೆ ಮಾತನಾಡಿದ್ದರು. ಶ್ರೀರಾಮ್ ಅವರು ನಟ ಯಶ್ ಅವರನ್ನೇ ಗುರಿಯಾಗಿಸಿಕೊಂಡು ಈ ಮಾತು ಹೇಳಿದ್ದು ಎಂದು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
‘ಅದು ಕೇವಲ ನನ್ನ ಬಗ್ಗೆ ಹಾಗೂ ನಮ್ಮ ಚಿತ್ರದ ಬಗ್ಗೆ ಇದ್ದ ವಿಷಯ ಅಷ್ಟೇ. ಅದು ಪೂರ್ತಿ ವಿಡಿಯೋ ಅಲ್ಲ. ಅಣ್ಣಾವ್ರ ಬಗ್ಗೆ ಇರುವ ಒಂದು ಪುಟ್ಟ ಅಭಿಮಾನದ ಮಾತು ಬಿಟ್ಟರೆ ಬೇರೆ ಯಾವ ಅರ್ಥವೂ ಇಲ್ಲ. ಆದರೂ ಈ ವಿಡಿಯೋವಿನ ತುಣುಕು ತಪ್ಪಾಗಿ ಕಂಡಿದ್ದರೆ ಕ್ಷಮೆ ಇರಲಿ’ ಎಂದು ಶ್ರೀರಾಮ್ ಕಾರ್ಯಕ್ರಮದ ಸಂಪೂರ್ಣ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
—–





Be the first to comment