ನಟ ಉಪೇಂದ್ರ ಪುತ್ರ ಆಯುಷ್ ಅವರ ಮೊದಲ ಸಿನಿಮಾ ನಿರ್ದೇಶನದ ಹೊಣೆ ಹೊತ್ತಿದ್ದ ಪುರುಷೋತ್ತಮ್ ಅವರನ್ನು ಚಿತ್ರತಂಡದಿಂದ ಕೈಬಿಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಸಿನಿಮಾ ಈಗಾಗಲೇ ಶೇಕಡಾ 50ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದರೂ, ತಮ್ಮನ್ನು ಏಕಾಏಕಿ ಹೊರಹಾಕಲಾಗಿದೆ ಎಂದು ನಿರ್ದೇಶಕ ಪುರುಷೋತ್ತಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗ ತಮ್ಮನ್ನು ಮಾತ್ರವಲ್ಲದೆ ಸಿನಿಮಾದ ಛಾಯಾಗ್ರಾಹಕರಾಗಿದ್ದ ಕ್ಯಾಮೆರಾಮನ್ ವೇಣು ಅವರನ್ನೂ ಚಿತ್ರದಿಂದ ಕೈಬಿಡಲಾಗಿದೆ. ನವೆಂಬರ್ 2ರಿಂದ ಪ್ರಿಯಾಂಕಾ ಉಪೇಂದ್ರ ಅವರೇ ಸಿನಿಮಾದ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮೂರನೇ ಹಂತದ ಚಿತ್ರೀಕರಣ ಆರಂಭಿಸಿರುವ ವಿಷಯವನ್ನೂ ತನಗೆ ತಿಳಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆಯುಷ್ ಪಾತ್ರಕ್ಕೆ ಹೆಚ್ಚಿನ ಬಿಲ್ಡಪ್ ನೀಡಬೇಕು ಎಂಬ ನಿರೀಕ್ಷೆ ಚಿತ್ರತಂಡಕ್ಕೆ ಇತ್ತು. ಆದರೆ ತಾವು ಕಥೆಗೆ ಅಗತ್ಯವಿದ್ದ ರೀತಿ ಚಿತ್ರೀಕರಣ ಮುಂದುವರಿಸಿದ್ದರಿಂದ ಅಸಮಾಧಾನ ಉಂಟಾಗಿರಬಹುದು. ತಾವು ಮಾಡಿದ ಕೆಲಸಕ್ಕೆ ಸೂಕ್ತ ಸಂಭಾವನೆ ನೀಡಬೇಕು. ತಾವು ಸಿದ್ಧಪಡಿಸಿದ ಕಥೆಯನ್ನು ತಮ್ಮ ಅನುಮತಿಯಿಲ್ಲದೆ ಬಳಸಬಾರದು. ಉಪೇಂದ್ರ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಪುರುಷೋತ್ತಮ್ ಸುಮಾರು 12 ವರ್ಷಗಳ ಹಿಂದೆಯೇ ಈ ಸಿನಿಮಾದ ಕಥೆ ಸಿದ್ಧಪಡಿಸಿದ್ದರು. ಕಥೆ ಕೇಳಿದ್ದ ಉಪೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಳಿಕ ನಿರ್ಮಾಪಕರನ್ನು ಹುಡುಕಿ ಸಿನಿಮಾ ಚಿತ್ರೀಕರಣ ಆರಂಭಿಸಲಾಗಿತ್ತು. ಆಯುಷ್ ಅವರ ಮೊದಲ ಸಿನಿಮಾ ಆಗಿದ್ದರಿಂದ ಚಿತ್ರಕ್ಕೆ ‘ಆಯುಷ್’ ಎಂದೇ ಹೆಸರಿಡಲು ನಿರ್ಧರಿಸಲಾಗಿತ್ತು. ಕಾಶ್ಮೀರ ಸೇರಿದಂತೆ ಹಲವು ಸ್ಥಳಗಳಲ್ಲಿ ಚಿತ್ರೀಕರಣ ನಡೆದಿತ್ತು.
ಈ ಆರೋಪಗಳಿಗೆ ಉಪೇಂದ್ರ ಅಥವಾ ಪ್ರಿಯಾಂಕಾ ಉಪೇಂದ್ರ ಅವರ ಪ್ರತಿಕ್ರಿಯೆ ಇನ್ನಷ್ಟೇ ತಿಳಿದುಬರಬೇಕಿದೆ.





Be the first to comment