ಚಿತ್ರ: ರಾಮಾಯಣ ಭಾಗ -1
ನಿರ್ದೇಶನ: ನಿತೇಶ್ ತಿವಾರಿ
ನಿರ್ಮಾಣ: ಯಶ್ ಮತ್ತು ನಮಿತ್ ಮಲ್ಹೋತ್ರ ಮೊದಲಾದವರು.
ತಾರಾಗಣ: ರಣ್ ಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು
ಯಶ್ ಮೊದಲಾದವರು…
ರೇಟಿಂಗ್: 4.5/5
ರಾಮಾಯಣ ಎನ್ನುವುದು ಎಲ್ಲ ಭಾರತೀಯರ ಮಧ್ಯೆ ಹಾಸು ಹೊಕ್ಕಾಗಿರುವ ಕಥೆ. ಅದರಲ್ಲೂ ಧಾರಾವಾಹಿಯಾಗಿ ದೃಶ್ಯಾತ್ಮಕವಾಗಿಯೂ ಬಂದು ಹೋಗಿರುವ ಕಥೆ. ಇನ್ನು ಪರದೆಯ ಮೇಲೆ ಹೊಸದಾಗಿ ತೋರಿಸುವುದಾದರೆ ಅದನ್ನು ವಿಶ್ಯುಯಲ್ ಎಫೆಕ್ಟ್ ನಲ್ಲಿ ಮಾತ್ರ ವಿಶೇಷವಾಗಿಸಲು ಸಾಧ್ಯ. ಅಂಥದೊಂದು ಸಾಧ್ಯತೆ ಸಾಕಾರಗೊಳಿಸಿರುವ ಚಿತ್ರವೇ ರಾಮಾಯಣ ಭಾಗ-1.
ರಾಮನಾಗಿ ರಣ್ಬೀರ್ ಕಪೂರ್ ನಟಿಸುತ್ತಾರೆ ಎಂದಾಗ ವಿರೋಧ ವ್ಯಕ್ತವಾಗಿದ್ದು ನೆನಪಿರಬಹುದು. ಆದರೆ ಹಾಗೆ ವಿರೋಧಿಸಿದವರು ಕುಳಿತು ಈ ಚಿತ್ರ ನೋಡಿದರೆ ರಣಬೀರ್ ಗೆ ಕೈಎತ್ತಿ ಮುಗಿಯುವುದು ಖಚಿತ. ಯಾಕೆಂದರೆ ಆ ಮಟ್ಟಿಗೆ ರಾಮನ ಪಾತ್ರಕ್ಕೆ ನ್ಯಾಯ ಒದಗಿಸಿರುವುದು ಸತ್ಯ.
ಕನ್ನಡಿಗರ ಪಾಲಿಗೆ ಈ ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ರಾವಣನಾಗಿ ನಟಿಸಿರುವ ರಾಕಿಂಗ್ ಸ್ಟಾರ್ ಯಶ್. ದಶಕಂಠನಾಗಿ ಯಶ್ ನಟನೆ ಚಿತ್ರಕ್ಕೊಂದು ವಿಶೇಷ ತೂಕ ತಂದುಕೊಟ್ಟಿದೆ. ಯಶ್ ಸಂಭಾಷಣೆ ಶೈಲಿ ಕೂಡ ಪೌರಾಣಿಕ ಮಾದರಿಯಲ್ಲಿ ಆಸ್ವಾದಿಸಲು ಆಕರ್ಷಕವಾಗಿದೆ.
ಸೀತೆಯಾಗಿ ನಟಿಸಿರುವ ಸಾಯಿ ಪಲ್ಲವಿ ಎಂದಿನಂತೆ ಸಹಜ ಸುಂದರಿ. ಅದರಲ್ಲಿ ಕೂಡ ನಾರುಮಡಿಯುಟ್ಟು ವನವಾಸಕ್ಕೆ ಹೋಗುವ ದೃಶ್ಯಗಳಲ್ಲಿ ನಿಜಕ್ಕೂ ರಾಜಮನೆತನದಿಂದ ಕಾಡು ಸೇರಿದ ಸುಂದರಿಯಾಗಿ ಕಾಣಿಸುತ್ತಾರೆ. ಲಕ್ಷ್ಮಣನಾಗಿ ರವಿ ದುಬೆಯವರದ್ದು ಲವಲವಿಕೆಯ ನಟನೆ. ದಶರಥನಾಗಿ ಅರುಣ್ ಗೋವಿಲ್ ನಟಿಸಿದ್ದಾರೆ. ರಾವಣನ ತಾಯಿಯಾಗಿ ಮಲಯಾಳಂ ನಟಿ ಶೋಭನಾ ಅಭಿನಯಿಸಿದ್ದಾರೆ.
ಸಿನೆಮಾ ತ್ರಿಡಿಯಲ್ಲಿ ಕೂಡ ಬಿಡುಗಡೆಯಾಗಿದೆ. ಅದಕ್ಕೆ ತಕ್ಕಂಥ ದೃಶ್ಯ ವೈಭವಗಳನ್ನು ಪರದೆಯ ಮೇಲೆ ಸೃಷ್ಟಿಸಲಾಗಿದೆ. ಸೀತೆಯನ್ನು ಅಪಹರಣ ಮಾಡುವ ರಾವಣ ಜಟಾಯುವಿನೊಂದಿಗೆ ಬಾನಿನಲ್ಲಿ ನಡೆಸುವ ಹೋರಾಟವನ್ನು ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಉಸಿರು ಬಿಗಿ ಹಿಡಿದು ನೋಡುವಂತಿದೆ. ಅದೇ ರೀತಿ ಸೀತೆಯನ್ನು ಅಪಹರಣ ಮಾಡುವ ಮೊದಲು ಅದರ ಕುರಿತಾಗಿ ಯೋಚಿಸಲು ತನ್ನ ಹತ್ತು ತಲೆಗಳನ್ನು ಬಳಸುವ ದಶಕಂಠನ ದೃಶ್ಯಗಳಲ್ಲಿ ಯಶ್ ಅಭಿನಯ ಅಮೋಘ.
ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್ ನಟಿಸಿದ್ದಾರೆ. ಶೂರ್ಪನಖಿಯ ಪತಿಯಾಗಿ ವಿವೇಕ್ ಒಬೆರಾಯ್ ವಿದ್ಯುತ್ ಜಿಹ್ವ ಎನ್ನುವ ಪಾತ್ರವನ್ನು ನಿಭಾಯಿಸಿದ್ದಾರೆ.
ಪ್ರತಿಯೊಂದು ಪಾತ್ರಗಳನ್ನು ಕೂಡ ಪರದೆಯ ಮೇಲೆ ಅಳೆದು ತೂಗಿದಂತೆ ತೋರಿಸಲಾಗಿದೆ. ಆದರೂ ಬೃಹತ್ ಕಾವ್ಯದ ಈ ಒಂದನೇ ಭಾಗಕ್ಕಾಗಿ ಮೂರು ಗಂಟೆಗೂ ಅಧಿಕ ಕಾಲಾವಧಿಯನ್ನು ಮೀಸಲಿಡಬೇಕಾಗಿದೆ.
ಎಆರ್ ರೆಹಮಾನ್ ಸಂಗೀತದಲ್ಲಿನ ಹಾಡುಗಳು ಆಕರ್ಷಕ. ರಿಚ್ ಫ್ರೇಮ್ಸ್ ಮತ್ತು ಪ್ರೊಡಕ್ಷನ್ ವ್ಯಾಲ್ಯು ತುಂಬಿರುವ ಈ ಚಿತ್ರ ಅದ್ಭುತವಾಗಿ ಕಾಣುತ್ತದೆ. ದರ ಅಂತ್ಯದಲ್ಲಿ ಮುಂದಿನ ಭಾಗದಲ್ಲಿ ಹನುಮಂತನಾಗಿ ನಟಿಸಲಿರುವ ಸನ್ನಿ ಡಿಯೋಲ್ ಗ್ಲಿಂಪ್ಸ್ ಪ್ರದರ್ಶಿಸಲಾಗುತ್ತಿದೆ. ಮುಂದಿನ ಭಾಗವೇ ಯುದ್ಧಕಾಂಡವಾಗಿರುವ ಕಾರಣ ಪ್ರೇಕ್ಷಕರು ಕುತೂಹಲದಿಂದ ಎದುರು ನೋಡುವಂತಾಗಿದೆ.





Be the first to comment