ಭಾರತ-ಪಾಕಿಸ್ತಾನ ಯುದ್ಧದ ‘ಪರಂ ವೀರ್’ ತೆರೆಗೆ

ಯುದ್ಧಭೂಮಿಯಲ್ಲಿ ದೇಶಕ್ಕಾಗಿ ಹೋರಾಡಿದ  1971ರ ಭಾರತ-ಪಾಕಿಸ್ತಾನ ಯುದ್ಧದ ಸೈನಿಕರ  ಕಥೆ ‘ಪರಂ ವೀರ್’ ಬೆಳ್ಳಿತೆರೆಯ ಮೇಲೆ ಮೂಡಿ ಬರಲಿದೆ.

ಈ ಸಿನಿಮಾ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ಸುಮಂತ್ ರಾತುರಿ ನಿರ್ದೇಶನ ಮಾಡುತ್ತಿದ್ದಾರೆ. ವರ್ಧನ್ ಪುರಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಮೈರಾಧಾ ಮೋಷನ್ ಪಿಕ್ಚರ್ಸ್ ಹಾಗೂ ಎಚ್‌ವಿಜೆ ಮೀಡಿಯಾ ಬ್ಯಾನರ್‌ಗಳ ಅಡಿಯಲ್ಲಿ ಕನ್ನಡಿಗ ಸಾಗರ್ ಗೌಡ, ನಿರ್ದೇಶಕ ಸುಮಂತ್ ರಾತುರಿ ಜಂಟಿಯಾಗಿ ಚಿತ್ರ ನಿರ್ಮಿಸುತ್ತಿದ್ದಾರೆ.

‘ಪರಂ ವೀರ್’ ಕೇವಲ ಮನರಂಜನೆಗಾಗಿ ನಿರ್ಮಿಸುತ್ತಿರುವ ಸಿನಿಮಾವಲ್ಲ. ದೇಶಕ್ಕಾಗಿ ಹೋರಾಡಿದ ಸೈನಿಕರ ಸಾಹಸಗಾಥೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪ್ರಯತ್ನ ಎಂದು ನಿರ್ಮಾಪಕ ಸಾಗರ್ ಗೌಡ ಹೇಳಿದ್ದಾರೆ.

ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾವನ್ನು ತಾಂತ್ರಿಕವಾಗಿ ಅದ್ಧೂರಿಯಾಗಿ ರೂಪಿಸಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಛಾಯಾಗ್ರಹಣ, ಸಂಕಲನ, ಸಂಗೀತ ಮತ್ತು ಧ್ವನಿ ವಿನ್ಯಾಸ ಸೇರಿದಂತೆ ಪ್ರಮುಖ ವಿಭಾಗಗಳಲ್ಲಿ ಅನುಭವಿ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ.

ದೇಶದ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಸೈನಿಕರ ಶೌರ್ಯ, ತ್ಯಾಗ ಮತ್ತು ಹೋರಾಟವನ್ನು ಪ್ರೇಕ್ಷಕರ ಮುಂದೆ ತೆರೆದಿಡುವುದು ಚಿತ್ರತಂಡದ ಉದ್ದೇಶ. ಭಾರತೀಯ ಸೇನೆಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿರುವ ಗಂಗಾಸಾಗರ ಕದನದ ಘಟನೆಗಳನ್ನು ಆಧರಿಸಿ ಚಿತ್ರಕಥೆ ರೂಪಿಸಲಾಗಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!