ಗುರುದೇಶಪಾಂಡೆ

ಪಾಪರಾಜಿಗಳು ಸಾಕು.. ಮಾಧ್ಯಮಗಳೊಡನೆ ರಾಜಿ ಇಲ್ಲ!

ನಿರ್ಮಾಪಕ ಗುರುದೇಶಪಾಂಡೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಚಿತ್ರರಂಗದಲ್ಲಿ ಮಾಡಿದಂಥ ಸಾಧನೆಯೇನಲ್ಲ. ಚಿತ್ರೋದ್ಯಮಕ್ಕೆ ತಾನೇ ದೊಡ್ಡವನು ಎಂದುಕೊಂಡು ನೀಡಿದಂಥ ಸಣ್ಣತನದ ಹೇಳಿಕೆಯಿಂದಲೇ ಸದ್ದು ಮಾಡಿದ್ದಾರೆ.

ಬುಧವಾರ ‘ರಾಮರಸ’ ಚಿತ್ರದ ಸುದ್ದಿಗೋಷ್ಠಿ ನಿಗದಿಯಾಗಿದ್ದು ಮಧ್ಯಾಹ್ನ 12 ಗಂಟೆಗೆ. ಆದರೆ ಶುರುವಾಗಿದ್ದು 1 ಗಂಟೆಯ ಬಳಿಕ. ಅರ್ಧ ಗಂಟೆ ಆಸುಪಾಸಿನ ವ್ಯತ್ಯಾಸಕ್ಕೆ ಸಿನೆಮಾ ಪತ್ರಕರ್ತರು ಒಗ್ಗಿಕೊಂಡಿರುತ್ತಾರೆ. ಆದರೆ ಒಂದು ಗಂಟೆ ದಾಟಿದ ಬಳಿಕ ಕೂಡ ವೇದಿಕೆ ಮೇಲೆ ಮಾತನಾಡುವ ರೀತಿ ಇದೆಯಲ್ಲ? ಅದನ್ನು ಕೇಳಿಸಿಕೊಂಡು ವೇದಿಕೆ ಮುಂದೆ ಕೂರುವ ಯಾವ ದರ್ದು ಕೂಡ ಮಾಧ್ಯಮದವರಿಗೆ ಇರುವುದಿಲ್ಲ. ತಡವಾಗಿ ಶುರುವಾದರೂ ತಮ್ಮ ಎಲ್ಲ ಪ್ರಲಾಪಗಳನ್ನು ಕೇಳುತ್ತಾ ಕೂರಬೇಕು ಎನ್ನುವುದು ಈ ಗುರುದೇಶ ಪಾಂಡೆ ನೀತಿ.

ಪತ್ರಕರ್ತರು ಎಲ್ಲವನ್ನು ಕೇಳುತ್ತಾ ಕೂರಲು ಬಂದಿರುವುದಿಲ್ಲ. ಪತ್ರಿಕೆ ಅಥವಾ ಟಿ.ವಿ ಯಾವುದನ್ನು ಪ್ರಸಾರ ಮಾಡುತ್ತದೆ ಎನ್ನುವುದನ್ನು ಅರಿತೇ ಬಂದಿರುತ್ತಾರೆ. ಮಾಧ್ಯಮಗಳಲ್ಲಿ ಪ್ರಸಾರವಾಗದೇ ಇರುವಂಥ ಕಥೆಯನ್ನು ವೈಯಕ್ತಿಕ ಆಸಕ್ತಿಯಿಂದ ಕೇಳಿಕೊಂಡು ಕೂರುವಷ್ಟು ಯಾವ ಮಾಧ್ಯಮ ಪ್ರತಿನಿಧಿಯೂ ಬಿಟ್ಟಿ ಬಿದ್ದಿಲ್ಲ. ಹಾಗಾಗಿ ಯಾವಾಗಲೂ ನೇರವಾಗಿ ಸಿನೆಮಾ ವಿಚಾರಕ್ಕೆ ಬರಲು ಆಗ್ರಹಿಸುತ್ತಾರೆ. ಅದಾಗಲೇ ಅಷ್ಟೊಂದು ತಡ ಮಾಡಿದ ಬಳಿಕ ಮಾಧ್ಯಮ ಪ್ರತಿನಿದಿಗಳು ತನ್ನ ಕಥೆಯನ್ನೆಲ್ಲ ಕೇಳುತ್ತಾ ಕೂರಬೇಕೆಂದು ಬಯಸುವುದು ಎಷ್ಟು ಸರಿ?

ಗುರುದೇಶ ಪಾಂಡೆ ದಶಕದಿಂದ ಚಿತ್ರರಂಗದಲ್ಲಿದ್ದಾರೆ. ಆದರೆ ಮಾಧ್ಯಮಗಳಿಗೆ ಹೇಗೆ ಗೌರವ ನೀಡಬೇಕು ಎನ್ನುವ ಕನಿಷ್ಠ ಪ್ರಜ್ಞೆ ಕೂಡ ಇಲ್ಲ. ಬಹುಶಃ ಒಂದಷ್ಟು ಮಾಧ್ಯಮಗಳಿಗೆ ಜಾಹೀರಾತು ನೀಡಿದ್ದೇನೆ ಎನ್ನುವ ಕಾರಣಕ್ಕೆ ಈ ಅಹಂಕಾರ ಇದ್ದರೂ ಇರಬಹುದು. ಇವರೆಲ್ಲ ಒಂದನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಜಾಹೀರಾತು ಎನ್ನುವುದು ಸುದ್ದಿಯಲ್ಲ. ಅದಕ್ಕೂ ಪತ್ರಕರ್ತನಿಗೂ ಸಂಬಂಧವಿಲ್ಲ. ಬಹುಶಃ ಬದಲಾದ ಕಾಲದಲ್ಲಿ ಅದೇ ಮಾಧ್ಯಮದ ಪ್ರತಿನಿಧಿ ಎನ್ನುವ ಕಾರಣಕ್ಕಾಗಿ ಜಾಹೀರಾತಿನ ವ್ಯವಹಾರವನ್ನು ಪತ್ರಕರ್ತನೇ ಮಾತನಾಡಿರಬಹುದು. ಹಾಗಂತ ಜಾಹೀರಾತು ಕೊಳ್ಕೊಡನೆ ಆಯಾ ಮಾಧ್ಯಮಗಳನ್ನುಕೊಂಡುಕೊಂಡಂತೆ ಅಂದುಕೊಳ್ಳಬಾರದು. ಪತ್ರಕರ್ತರ ವೈಯಕ್ರಿಕ ಅಭಿಪ್ರಾಯಗಳ ಮೇಲೆ ಈ ಜಾಹಿರಾತು ಯಾವ ಪರಿಣಾಮ ಕೂಡ ಬೀರುವುದಿಲ್ಲ. ಜನ ಸಾಮಾನ್ಯರು, ಪತ್ರಿಕೆಯ ಓದುಗರು ಏನು ಅರಿಯಬೇಕಾಗಿದೆಯೋ ಅದನ್ನು ಮಾತ್ರವೇ ಇವರು ವರದಿ ಮಾಡಲು ಸಾಧ್ಯ. ಆದರೆ ಏನು ಮಾಡೋಣ? ಗುರುದೇಶಪಾಂಡೆಯವರಿಗೆ ಹೊಗಳು ಭಟರೇಬೇಕು! ಹಾಗಾಗಿಯೇ ಸುದ್ದಿಗೋಷ್ಠಿಗೆ ಎಂಟ್ರಿಯಾಗುವಲ್ಲಿಂದ ಕೊನೆಯ ತನಕ ಸುತ್ತಮುತ್ತ ಓಡಾಡಿ ಮೊಬೈಲ್ ನಲ್ಲಿ ಶೂಟ್ ಮಾಡುವ ಪಾಪರಾಜಿಗಳೇ ಪ್ರಿಯರಾಗಿದ್ದಾರೆ.

ಪಾಪರಾಜಿಗಳನ್ನು ಪತ್ರಕರ್ತರೊಂದಿಗೆ ಹೋಲಿಸುವುದೇ ತಪ್ಪು. ಅವರು ಸೆಲೆಬ್ರಿಟಿಗಳಿಗೆ ಬಿಲ್ಡಪ್ ನೀಡಲೆಂದೇ ಇರುವವರು. ಅವರಲ್ಲಿ ಬಹಳಷ್ಟು ಮಂದಿ ನೇರವಾಗಿ ಸೆಲೆಬ್ರಿಟಿಗಳಿಂದಲೇ ಹಣ ಪಡೆಯುವವರು. ಅವರು ತಮ್ಮ ಪ್ರಚಾರದ ಉದ್ಯೋಗವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಆದರೆ ಪತ್ರಕರ್ತರು ಪ್ರಚಾರಕರ್ತರಷ್ಟೇ ಅಲ್ಲ. ಅನ್ಯಾಯ, ಅನೀತಿ, ಅಸಂಬದ್ಧ ಕಂಡರೆ ಪ್ರಶ್ನಿಸುವವರು ಕೂಡ ಹೌದು. ಆದರೆ ಗುರುದೇಶಪಾಂಡೆಗೆ ಇಂಥದ್ದು ಇಷ್ಟವಾಗುತ್ತಿಲ್ಲ.

ರಾಮರಸ ಚಿತ್ರವನ್ನು ಬಿ.ಎಂ ಗಿರಿರಾಜ್‌ ನಿರ್ದೇಶಿಸಿದ್ದಾರೆ. ಅವರಂತೂ ಕಳೆದ ಎರಡು ಸುದ್ದಿಗೋಷ್ಠಿಗಳಿಗೂ ಹಾಜರಾಗಿಲ್ಲ. ಸ್ವತಃ ನಿರ್ದೇಶಕರನ್ನು ಚಿತ್ರದ ಸುದ್ದಿಗೋಷ್ಠಿಗೆ ಕರೆಸಲಾಗದ ನಿರ್ಮಾಪಕ ಮಾಧ್ಯಮದ ಮಂದಿಗೆ ಪಾಠ ಹೇಳಲು ಹೊರಟಿರುವುದು ವಿಚಿತ್ರ. ‘ಗುರು’ ಎನ್ನುವುವುದು ‘ಹೆಸರು ಮಾತ್ರ’ ಎನ್ನುವ ಸತ್ಯ ಬಹುಶಃ ದೇಶಪಾಂಡೆಗೆ ಇನ್ನೂ ಅರ್ಥವಾದಂತಿಲ್ಲ, ಗಿರಿರಾಜ್ ಅವರಂತೂ ಏನೇ ಸಮಸ್ಯೆ ಇದ್ದರೂ ಚಿತ್ರಕ್ಕೆ ಯಾವುದೇ ಮೋಸ ಮಾಡುವವರಲ್ಲ. ಅದು ಅವರನ್ನು ಬಲ್ಲ ಎಲ್ಲರಿಗೂ ಗೊತ್ತು. ಹಾಗಾದರೆ ಒಂದೊಳ್ಳೆಯ ಚಿತ್ರವನ್ನು ಈ ರೀತಿ ನೆಗೆಟಿವ್ ಆಗಿ ಸುದ್ದಿ ಮಾಡುತ್ತಿರುವ ಗುರುದೇಶಪಾಂಡೆ ಖುದ್ದಾಗಿ ರಾಮರಸ ಕುಡಿದು ಬಿಟ್ಟಿದ್ದಾರ ಎನ್ನುವುದು ಸದ್ಯದ ಪ್ರಶ್ನೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!