ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾಗೌಡ ಮಧ್ಯರಾತ್ರಿವರೆಗೂ ನಿದ್ದೆ ಮಾಡಲು ಆಗುತ್ತಿಲ್ಲ ಎಂದು ಆರೋಪಿಸಿ ತಮ್ಮ ಬ್ಯಾರಕ್ ಬದಲಾವಣೆ ಮಾಡುವಂತೆ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಒಂದೇ ಬ್ಯಾರಕ್ನಲ್ಲಿ 30 ಮಂದಿ ವಿಚಾರಣಾಧೀನ ಕೈದಿಗಳಿದ್ದಾರೆ. ಇದರಿಂದ ರಾತ್ರಿ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ವಿದೇಶಿ ಪ್ರಜೆಗಳಿಂದ ಮಾನಸಿಕ ಕಿರಿಕಿರಿ ಉಂಟಾಗುತ್ತಿದೆ ಎಂದು ಪವಿತ್ರಾಗೌಡ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಜೈಲಿನ ಪರಿಸ್ಥಿತಿ ಹೇಗಿದೆ ಅನ್ನೋದನ್ನು ಖುದ್ದು ನ್ಯಾಯಾಧೀಶರೇ ಬಂದು ಪರಿಶೀಲಿಸಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಹಿಂದೆಯೂ ಹಲವು ಬಾರಿ ಬ್ಯಾರಕ್ ಬದಲಾವಣೆಗೆ ಮನವಿ ಮಾಡಲಾಗಿತ್ತು. ಆಗ ಜೈಲು ನಿಯಮಾವಳಿಯ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಅಧಿಕಾರಿಗಳಿಗೆ ಸೂಚಿಸಿತ್ತು.ಆದರೆ ನ್ಯಾಯಾಲಯದ ಸೂಚನೆಯ ಬಳಿಕವೂ ಬ್ಯಾರಕ್ ಬದಲಾವಣೆ ಮಾಡಿಲ್ಲ ಎಂದು ಪವಿತ್ರಾ ಗೌಡ ಅರ್ಜಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪವಿತ್ರಾಗೌಡ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿರುವ ನ್ಯಾಯಾಲಯ, ಬ್ಯಾರಕ್ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿದೆ. ಜೈಲು ಅಧಿಕಾರಿಗಳ ವರದಿ ಬಂದ ಬಳಿಕ ಪವಿತ್ರಾಗೌಡ ಅವರ ಮನವಿಗೆ ನ್ಯಾಯಾಲಯ ಯಾವ ರೀತಿಯ ಆದೇಶ ನೀಡಲಿದೆ ಎಂದು ನೋಡಬೇಕಿದೆ.
—–





Be the first to comment