ಹುಲಿಬೀರ

Movie Review: ಹುಲಿಬೀರ ವೀರನೇ ಹೌದು ಹುಲಿಯಾ..!

ಚಿತ್ರ: ಹುಲಿಬೀರ
ನಿರ್ದೇಶಕರು: ಮದರಂಗಿ ಮಲ್ಲಿಕಾರ್ಜುನ
ನಿರ್ಮಾಪಕರು: ದಾವಲ ಸಾಹೇಬ, ಅಶೋಕ ಎನ್, ಸುಜಾತ
ತಾರಾಗಣ: ಅಂಜನ್, ಚೈತ್ರಾ ತೋಟದ, ರಂಗಾಯಣ ರಘು ಮೊದಲಾದವರು…
ರೇಟಿಂಗ್ : 3/5

ಉತ್ತರ ಕರ್ನಾಟಕದ ಗ್ರಾಮೀಣ ಸೊಬಗನ್ನು ಛಾಯಾಗ್ರಹಣದಲ್ಲಿ ಮಾತ್ರವಲ್ಲ ಕಥೆ, ಚಿತ್ರಕಥೆ, ಸಂಭಾಷಣೆಯಲ್ಲಿಯೂ ತುಂಬಿರುವಂಥ ಚಿತ್ರ ಇದು. ಹುಲಿಗುಡ್ಡದ ತಪ್ಪಲಿನಲ್ಲಿ ವಾಸಿಸುವರ ಜೀವನ ಮೌಲ್ಯವನ್ನು ತೋರುವ ಚಿತ್ರವೇ ಹುಲಿಬೀರ.

ಬೀರನಿಗೆ ಶಾಲಾ ವಿದ್ಯಾಭ್ಯಾಸ ಅಂದರೆ ದೂರ. ಅದೇ ರೀತಿ ಹುಡುಗಿ ಸಹವಾಸಕ್ಕೆ ಬಿದ್ದು ಮನೆಯವರಿಂದಲೇ ಗೂಸ ತಿನ್ನುತ್ತಾನೆ. ಆದರೆ ಕುರಿ ಮೇಯಿಸಿದರೂ ಕೂಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷನ ಭ್ರಷ್ಟಾಚಾರವನ್ನು ಪ್ರಶ್ನಿಸುವಲ್ಲಿ ಹಿಂದೆ ಬೀಳುವುದಿಲ್ಲ.

ಚೈತ್ರಾ ತೋಟದ ಅವರು ಬೀರನ ಮಾವನ ಮಗಳಾಗಿ ಶೈಲು ಎನ್ನುವ ಪಾತ್ರ ಮಾಡಿದ್ದಾರೆ. ಇದರ ನಡುವೆ ಹುಲಿಬೀರನ ತಾತ ಬೀರಪ್ಪ ಮತ್ತು ಆತನ ತಂಗಿ ಮಗ ಬಸಪ್ಪನ ನಡುವಿನ ಜಗಳದ ಕಥೆಯಿದೆ. ಬೀರಪ್ಪನಾಗಿ ರಂಗಾಯಣ ರಘು ಮತ್ತು ಬಸಪ್ಪನಾಗಿ ರಾಜೇಂದ್ರ ಕಾರಂತ್ ನಟಿಸಿದ್ದಾರೆ. ಬಸಪ್ಪನಿಂದ ವಂಚನೆಗೊಳಗಾಗುವ ಹಿರಿಯ ಬೀರಪ್ಪನ ಪಾತ್ರಕ್ಕೆ ರಂಗಾಯಣ ರಘು ಜೀವ ತುಂಬಿದ್ದಾರೆ.

ಕ್ರೈಮ್ಯಾಕ್ಸ್ ಚಿತ್ರದ ಹೈಲೈಟ್ ಎಂದೇ ಹೇಳಬಹುದು. ಇಲ್ಲಿ ಬರುವ ದೈವಶಕ್ತಿಯ ಪಾತ್ರವನ್ನು ಅಂಜನ್ ಅದ್ಭುತವಾಗಿ ಅಭಿನಯಿಸಿದ್ದಾರೆ. ನಾಯಕನ ತಾಯಿಯ ಪಾತ್ರ ನಿಭಾಯಿಸಿರುವ ಕಲಾವಿದೆ ಕೂಡ ತಮ್ಮ ನಟನೆಯಿಂದ ಮನಸೆಳೆಯುತ್ತಾರೆ. ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಸಿನೆಮಾ ಮುಗಿದ ಬಳಿಕವೂ ಕಾಡುವಂತಿವೆ.

ಕನ್ನಡ ಸಿನೆಮಾಗಳು ಬೆಂಗಳೂರು, ಮೈಸೂರು ಕಥೆಗಳಿಗಷ್ಟೇ ಸೀಮಿತವಾಗಿರುತ್ತವೆ ಎನ್ನುವ ಆಪಾದನೆ ಬಹಳ ಹಿಂದಿನಿಂದಲೂ ಇದೆ. ಇತ್ತೀಚೆಗೆ ಮಂಗಳೂರಿನ ಕಥೆಗಳು ಕೂಡ ಜನಪ್ರಿಯವಾಗತೊಡಗಿವೆ. ಇಂಥ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಜನಜೀವನ, ಸಹಜ ಸೌಂದರ್ಯ ಎಲ್ಲವನ್ನು ಬಿಚ್ಚಿಟ್ಟಿರುವ ಚಿತ್ರ ಹುಲಿಬೀರ.

ಕಥೆಯಲ್ಲಿನ ಸಹಜತೆ, ಪಾತ್ರಗಳಲ್ಲಿನ ವೈವಿಧ್ಯತೆ, ಕಲಾವಿದರ ಅಭಿನಯ, ಛಾಯಾಗ್ರಹಣದ ಸೊಬಗು, ಹೊಸ ನಾಡಿನ ಅರಿವು ಇವೆಲ್ಲವನ್ನು ಅನುಭವಿಸಬೇಕಾದರೆ ಹುಲಿಬೀರ ನೋಡಬಹುದು. ಚಿತ್ರ ನೋಡಿದ ಪ್ರೇಕ್ಷಕರು ಹೌದು ಹುಲಿಯಾ ಎಂದೇ ಹೇಳುತ್ತಿದ್ದಾರೆ.

ಹುಲಿಬೀರ

Be the first to comment

Leave a Reply

Your email address will not be published. Required fields are marked *

Translate »
error: Content is protected !!