ರೇಣುಕಾಸ್ವಾಮಿ ಮೃತಪಟ್ಟ ವಿಚಾರ ಗೊತ್ತಾಗುತ್ತಿದ್ದಂತೆ ‘ಸರೆಂಡರ್ ಆಗಿ ತಲಾ ₹5 ಲಕ್ಷ ಕೊಡ್ತೀನಿ. ಇಲ್ಲ ನಾನು ಶೂಟ್ ಮಾಡಿಕೊಂಡು ಸಾಯ್ತೀನಿ’ ಎಂದು ದರ್ಶನ್ ಗಾಬರಿಯಿಂದ ಹೇಳಿದ್ದರು ಎಂದು ಪ್ರದೋಷ್ ಕೋರ್ಟ್ ಮುಂದೆ ಹೇಳಿಕೆ ನೀಡಿದ್ದಾನೆ.
ರೇಣುಕಾಸ್ವಾಮಿ ಮೃತಪಟ್ಟ ವಿಚಾರ ಗೊತ್ತಾಗುತ್ತಿದ್ದಂತೆ ಪ್ರದೋಷ್ ಮತ್ತು ಇತರರು ಆರ್.ಆರ್.ನಗರದಲ್ಲಿದ್ದ ದರ್ಶನ್ ಮನೆಗೆ ತೆರಳಿದ್ದರು. ಸಾವಿನ ಸುದ್ದಿ ಕೇಳುತ್ತಿದ್ದಂತೆ ದರ್ಶನ್ ತೀವ್ರ ಆತಂಕಗೊಂಡಿದ್ದರು. ಇಲ್ಲಿಂದ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿತ್ತು. ರೇಣುಕಾಸ್ವಾಮಿ ಕೊಲೆಯ ಹೊಣೆಯನ್ನು ಬೇರೆ ವ್ಯಕ್ತಿಗಳ ತಲೆಗೆ ಕಟ್ಟುವ ಪ್ಲಾನ್ ನಡೆದಿತ್ತು ಎಂಬ ಗಂಭೀರ ಆರೋಪವನ್ನು ಪ್ರದೋಷ್ ಮಾಡಿದ್ದಾನೆ.
ಇಬ್ಬರು ಯುವಕರು ಕೊಲೆ ಆರೋಪ ಹೊತ್ತು ಪೊಲೀಸರಿಗೆ ಶರಣಾಗಲು ಸಿದ್ಧರಾಗಿದ್ದಾರೆ ಎಂದು ವಿನಯ್ ತಿಳಿಸಿದ್ದ. ಇದಕ್ಕಾಗಿ ತಲಾ 5 ಲಕ್ಷ ರೂಪಾಯಿಯಂತೆ ಇಬ್ಬರಿಗೆ ಒಟ್ಟು 10 ಲಕ್ಷ ರೂಪಾಯಿ ನೀಡಲು ನಿರ್ಧರಿಸಲಾಗಿತ್ತು. ಈ ಹಣವನ್ನು ದರ್ಶನ್ ಖುದ್ದಾಗಿ ಬ್ಯಾಗ್ನಲ್ಲಿ ತಂದು ಕೊಟ್ಟಿದ್ದರು. ಜೊತೆಗೆ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆತಂದಿದ್ದ ರಾಘವೇಂದ್ರನಿಗೂ 5 ಲಕ್ಷ ರೂಪಾಯಿ ನೀಡಲಾಗಿತ್ತು ಎಂದು ಪ್ರದೋಷ್ ಹೇಳಿದ್ದಾನೆ.
ಆ ರಾತ್ರಿ ಪ್ರಕರಣದಿಂದ ಹೊರಬರಲು ಸಹಾಯ ಮಾಡದಿದ್ದರೆ ತಾನು ನೇಣು ಹಾಕಿಕೊಂಡು ಪ್ರಾಣ ಕಳೆದುಕೊಳ್ಳುವುದಾಗಿಯೂ ದರ್ಶನ್ ಹೇಳಿದ್ದರು. ರೇಣುಕಾಸ್ವಾಮಿ ಮೃತದೇಹವನ್ನು ಎಲ್ಲಿ ಬಿಸಾಡಬೇಕು ಎಂಬ ಹುಡುಕಾಟ ನಡೆದಿತ್ತು. ಆರೋಪಿಗಳು ಕಾರಿನಲ್ಲಿ ಕೆಂಗೇರಿ, ನಾಯಂಡಹಳ್ಳಿ ಮತ್ತು ನಾಗರಬಾವಿ ಮಾರ್ಗವಾಗಿ ಮಾಳಗಾಳ ಪ್ರದೇಶಕ್ಕೆ ತೆರಳಿದ್ದರು. ಅಲ್ಲಿ ನಿರ್ಜನ ಪ್ರದೇಶದಲ್ಲಿದ್ದ ದೊಡ್ಡ ಮೋರಿಯೊಂದನ್ನು ಗುರುತಿಸಿ ಪಟ್ಟಣಗೆರೆ ಶೆಡ್ಗೆ ವಾಪಸ್ ಬಂದಿದ್ದರು ಎಂದು ಪ್ರದೋಷ್ ವಿವರಿಸಿದ್ದಾನೆ.
ಕಾರ್ತಿಕ್ ಮತ್ತು ನಿಖಿಲ್ ಎಂಬ ಇಬ್ಬರು ಯುವಕರು ಶೆಡ್ ಬಳಿ ಬಂದಿದ್ದರು. ಪೊಲೀಸರ ಮುಂದೆ ಶರಣಾದಾಗ ಯಾವ ಕಥೆ ಹೇಳಬೇಕು ಅನ್ನೋದನ್ನೂ ಮೊದಲೇ ಸಿದ್ಧಪಡಿಸಲಾಗಿತ್ತು. ರೇಣುಕಾಸ್ವಾಮಿ ಹಣವನ್ನು ಸಾಲವಾಗಿ ಪಡೆದು ವಾಪಸ್ ನೀಡಿರಲಿಲ್ಲ. ಇದೇ ವಿಚಾರಕ್ಕೆ ಗಲಾಟೆ ನಡೆದು ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರ ಮುಂದೆ ಹೇಳುವಂತೆ ಸೂಚಿಸಲಾಗಿತ್ತು. ಮಧ್ಯರಾತ್ರಿ ವೇಳೆ ರೇಣುಕಾಸ್ವಾಮಿ ಮೃತದೇಹವನ್ನು ಕಾರಿನಲ್ಲಿ ಸಾಗಿಸಿ ಮೊದಲೇ ಗುರುತಿಸಿದ್ದ ಮೋರಿಯಲ್ಲಿ ಎಸೆದು ಬರಲಾಗಿತ್ತು ಎಂದು ಪ್ರದೋಷ್ ನ್ಯಾಯಾಧೀಶರ ಮುಂದೆ ವಿವರಿಸಿದ್ದಾನೆ ಎನ್ನಲಾಗಿದೆ.
ಪ್ರದೋಷ್ ಕೊಲೆ ಬಳಿಕ ನಡೆದಿತ್ತು ಎನ್ನಲಾದ ಹಣದ ವ್ಯವಹಾರ, ಸರೆಂಡರ್ ಪ್ಲಾನ್, ಮೃತದೇಹ ವಿಲೇವಾರಿ ಬಗ್ಗೆ ವಿವರವನ್ನು ನ್ಯಾಯಾಲಯದ ಮುಂದೆ ಇಡುತ್ತಿದ್ದಾನೆ. ಈ ಹೇಳಿಕೆಗಳ ಸತ್ಯಾಸತ್ಯತೆ ಮತ್ತು ಸಾಕ್ಷ್ಯ ಮೌಲ್ಯವನ್ನು ನ್ಯಾಯಾಲಯ ಅಂತಿಮವಾಗಿ ನಿರ್ಧರಿಸಲಿದೆ.
—-





Be the first to comment