ಬಾಲಿವುಡ್ ನಟಿ, ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರ ಒಂದು ಆರ್ಡರ್‌ನಿಂದಾಗಿ ಸಾಲದ ಶೂಲದಲ್ಲಿ ಸಿಲುಕಿದ್ದ ಮುಂಬೈನ ಚೋಲೆ ಭಟೂರೆ ಅಂಗಡಿ ಇಂದು ತಿಂಗಳಿಗೆ ಬರೋಬ್ಬರಿ 2 ಕೋಟಿ ರೂ. ವಹಿವಾಟು ನಡೆಸುವ ಯಶಸ್ವಿ ಬ್ರ್ಯಾಂಡ್ ಆಗಿ ಬದಲಾಗಿದೆ.
ಜಸ್‌ಪಾಲ್ ಸಿಂಗ್ ಖಾಲ್ಸಾ ಮತ್ತು ಮಹಿಂದರ್ ಸಿಂಗ್ ಖಾಲ್ಸಾ ಹೆಸರಿನ ಸಹೋದರರಿಬ್ಬರು 2021ರಲ್ಲಿ ‘ದೆಹಲಿ ಸೆ’ ಎಂಬ ಸಣ್ಣ ಚೋಲೆ ಭಟೂರೆ ರೆಸ್ಟೋರೆಂಟ್ ನ್ನು ಮುಂಬೈನ ಚೆಂಬೂರ್‌ನಲ್ಲಿ ಆರಂಭಿಸಿದರು. 250 ಚದರ ಅಡಿ ವಿಸ್ತೀರ್ಣ, 3 ಟೇಬಲ್, 9 ಆಸನಗಳೊಂದಿಗೆ ಆರಂಭವಾದ ಈ ಸಣ್ಣ ಮಳಿಗೆ ಆರಂಭಿಕ ಯಶಸ್ಸಿನ ಬಳಿಕ ನಷ್ಟದ ಹಾದಿ ಹಿಡಿಯಿತು. ಅಂಗಡಿ 18 ಲಕ್ಷ ರೂ. ಸಾಲದ ಸುಳಿಗೆ ಸಿಲುಕಿ ಅಂಗಡಿಯನ್ನು ಶಾಶ್ವತವಾಗಿ ಮುಚ್ಚಿಬಿಡಲು ಸಹೋದರರು ನಿರ್ಧರಿಸಿದ್ದರು.
ಆದರೆ ಸೆ. 13ರಂದು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಅಭಿಷೇಕ್ ಉಪಮನ್ಯು ಈ ಅಂಗಡಿಗೆ ಭೇಟಿ ನೀಡಿ ಚೋಲೆ ಭಟೂರೆ ರುಚಿಯನ್ನು ಮೆಚ್ಚಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಉಪಮನ್ಯು ಅವರ ಪೋಸ್ಟ್ ಮುಂಬೈನಲ್ಲಿ ಅಚ್ಚರಿಯ ತಿನಿಸುಗಳನ್ನು ಹುಡುಕುತ್ತಿದ್ದಅನುಷ್ಕಾ ಶರ್ಮಾ ಅವರ ಕಣ್ಣಿಗೂ ಬಿತ್ತು.
ಅನುಷ್ಕಾ ಶರ್ಮಾ ಅವರ ಮನೆಯಿಂದ ಜಸ್‌ಪಾಲ್ ಅವರ ಫೋನ್‌ಗೆ ಕರೆ ಬಂದು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರಿಗಾಗಿ ಎರಡು ತಟ್ಟೆ ಚೋಲೆ ಭಟೂರೆ ಆರ್ಡರ್ ಮಾಡಲಾಯಿತು. ಅಕೌಂಟ್ ಹ್ಯಾಕ್ ಆಗಬಹುದು ಎಂಬ ಭಯದಿಂದ ಜಸ್‌ಪಾಲ್ ಆರಂಭದಲ್ಲಿ ಇದನ್ನು ತಮಾಷೆಯ ಕಾಲ್ ಎಂದುಕೊಂಡಿದ್ದರು. ಚೆಂಬೂರ್‌ನ ಒಂದು ಸಣ್ಣ ರೆಸ್ಟೋರೆಂಟ್‌ಗೆ ಕ್ರಿಕೆಟಿಗರ ಮನೆಯಿಂದ ಆರ್ಡರ್ ಬಂದಿದೆ ಎಂಬುದನ್ನು ನಂಬುವುದು ಕಷ್ಟಕರವಾಗಿತ್ತು.
ಆ ಸಹೋದರರು ತಮಗೆ ನೀಡಲಾದ ವಿಳಾಸಕ್ಕೆ ಆಹಾರವನ್ನು ತಲುಪಿಸಿದರು. ಅನುಷ್ಕಾ ಶರ್ಮಾ ಅವರು ದೆಹಲಿ ಶೈಲಿಯ ಚೋಲೆ ಭಟೂರೆ ಮುಂಬೈನಲ್ಲಿ ಸಿಕ್ಕ ಖುಷಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಕೂಡಲೇ ಆ ರೆಸ್ಟೋರೆಂಟ್‌ಗೆ ಜನಸಾಗರ ಹರಿದು ಬಂತು. ಕೇವಲ ಅರ್ಧ ಗಂಟೆಯಲ್ಲಿ ಅಂಗಡಿಯಲ್ಲಿದ್ದ ಸಾಮಗ್ರಿಗಳೆಲ್ಲ ಖಾಲಿಯಾದವು. ಜನರನ್ನು ನಿಯಂತ್ರಿಸಲು ಪೊಲೀಸರು ಸ್ಥಳಕ್ಕೆ ಬರಬೇಕಾಯಿತು.
ಅನಿರೀಕ್ಷಿತ ಯಶಸ್ಸಿನ ಬಳಿಕ ಹಿಂದೆ ತಿರುಗಿ ನೋಡದ ಈ ಉದ್ಯಮ ಇಂದು ಮುಂಬೈ ಮತ್ತು ನವಿ ಮುಂಬೈನಲ್ಲಿ ಒಟ್ಟು 4 ಬ್ರ್ಯಾಂಚ್‌ಗಳನ್ನು ಹೊಂದಿದೆ. ಹಿಂದೆ ಕೇವಲ 8 ಕೆ.ಜಿ ಚೋಲೆ ಬಳಸುತ್ತಿದ್ದಸಹೋದರರು ಇಂದು ಪ್ರತಿದಿನ 125 ಕೆ.ಜಿ ಕಡಲೆಕಾಳುಗಳನ್ನು ಬಳಸಿ 3 ಸಾವಿರಕ್ಕೂ ಅಧಿಕ ಪ್ಲೇಟ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಮಾಸಿಕ ವಹಿವಾಟು 2 ಕೋಟಿ ರೂ. ತಲುಪಿದೆ.
—–





Be the first to comment