‘ಪ್ರೇಮದ ಊರಲಿ’ ಯಶಸ್ವಿ ಪ್ರದರ್ಶನ

ಕೌಟುಂಬಿಕ ಕಥಾಹಂದರ ಹೊಂದಿರುವ ‘ಪ್ರೇಮದ ಊರಲಿ’ ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಬಿಡುಗಡೆಯಾದ ದಿನದಿಂದ  ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿದ್ದು  ಚಿತ್ರಕ್ಕೆ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆಯಿಂದಾಗಿ ಚಿತ್ರಮಂದಿರಗಳಲ್ಲಿ ಶೋಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಹಲವೆಡೆ ಹೌಸ್‌ಫುಲ್ ಪ್ರದರ್ಶನ ಕಾಣುವ ಮೂಲಕ  ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದೆ. ಇಂದಿನ ಅಬ್ಬರದ ಮತ್ತು ಆ್ಯಕ್ಷನ್ ಸಿನಿಮಾಗಳ ನಡುವೆ  ಪ್ರೇಕ್ಷಕರ ಮನಸ್ಸಿಗೆ ಆಪ್ತವಾಗುವ ಒಂದು ಪರಿಪೂರ್ಣ ‘ಫೀಲ್ ಗುಡ್’ ಚಿತ್ರವಾಗಿ ಇದು ಗಮನ ಸೆಳೆಯುತ್ತಿದೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್ ಕುಮಾರ್ ಸಾರಥ್ಯದಲ್ಲಿ ಮೂಡಿಬಂದಿರುವ ‘ಪ್ರೇಮದ ಊರಲಿ’ ಒಂದು ಸರಳ, ಸುಂದರ ಹಾಗೂ ಭಾವನಾತ್ಮಕ ಹಳ್ಳಿಯ ಕಥೆಯಾಗಿದೆ. ಹಚ್ಚಹಸಿರಿನ ಗ್ರಾಮೀಣ ಪರಿಸರದಲ್ಲಿ ಸಾಗುವ ಸಿನಿಮಾ, ಸಂಕೀರ್ಣ ಕೌಟುಂಬಿಕ ಸಂಬಂಧಗಳು, ಮನುಷ್ಯತ್ವ ಮತ್ತು ಮುಗ್ಧ ಪ್ರೀತಿಯ ಸೂಕ್ಷ್ಮ ಎಳೆಗಳನ್ನು ಅದ್ಭುತವಾಗಿ ತೆರೆದಿಟ್ಟಿದೆ.

ಚಿತ್ರದಲ್ಲಿ ನಾಯಕ ಶ್ರೀರಾಮ್, ನಾಯಕಿಯರಾದ ರಮಿಕಾ ಶಿವು ಮತ್ತು ತಪಸ್ವಿನಿ ಪೂಣಚ್ಚ ತಮ್ಮ ಸಹಜ ನಟನೆಯ ಮೂಲಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಹಿರಿಯ ನಟ ರಂಗಾಯಣ ರಘು ಅವರು ಕೌಟುಂಬಿಕ ಬಿಕ್ಕಟ್ಟಿನ ಭಾವನಾತ್ಮಕ ಸನ್ನಿವೇಶಗಳನ್ನು ಅತ್ಯಂತ ಪ್ರಬುದ್ಧವಾಗಿ ನಿಭಾಯಿಸಿ ಚಿತ್ರದ ತೂಕವನ್ನು ಹೆಚ್ಚಿಸಿದ್ದಾರೆ.

ಸುನಾದ್ ಗೌತಮ್ ಅವರ ಸುಮಧುರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಚಿತ್ರದ ಜೀವಾಳವಾಗಿದೆ. ರಾಜ್‌ಕಾಂತ್ ಅವರ ಕ್ಯಾಮೆರಾ ಕೈಚಳಕದಲ್ಲಿ ಹಳ್ಳಿಯ ತೇವದ ಅಂಗಳ ಮತ್ತು ಹಸಿರು ಗದ್ದೆಗಳ ಸೊಬಗು ಕಣ್ಮನ ಸೆಳೆಯುವಂತೆ ಸೆರೆಯಾಗಿದೆ.  ಕುಟುಂಬ ಸಮೇತರಾಗಿ ನೋಡಬಹುದಾದ ‘ಪ್ರೇಮದ ಊರಲಿ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸಿನತ್ತ ಮುನ್ನಡೆಯುತ್ತಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!