‘ಬಾರ್ಡರ್‌ ಡೈರೀಸ್‌’ ಚಿತ್ರದ ಹಾಡು ರಿಲೀಸ್‌

ನೈಜ ಘಟನೆ ಹಾಗೂ ಜೀವಂತ ಪಾತ್ರಗಳ ಹಿನ್ನೆಲೆಯಲ್ಲಿ ರೂಪುಗೊಂಡಿರುವ ‘ಬಾರ್ಡರ್‌ ಡೈರೀಸ್‌’ ಚಿತ್ರದ ‘ಯಾರೋ ನೀನು ಯಾರೋ ನೀನು’  ಸುಮಧುರ ಹಾಡು ಬಿಡುಗಡೆಯಾಗಿದೆ.

ಹೊಯ್ಸಳ ಫಿಲಂಸ್ ಬ್ಯಾನರ್‌ನಡಿಯಲ್ಲಿ ಹೊಯ್ಸಳ ಕೊಣನೂರು ಈ ಚಿತ್ರವನ್ನು ನಿರ್ಮಿಸಿದ್ದು,   ಎಎಸ್‌ಜಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿರುವ, ಎಎಸ್‌ಜಿ ಸಾಹಿತ್ಯವಿರುವ ಈ ಹಾಡಿಗೆ ಸಿದ್ಧಾರ್ಥ ಬೆಳ್ಮಣ್ಣು ಮತ್ತು ಶ್ರೀಲಕ್ಷ್ಮಿ ಬೆಳ್ಮಣ್ಣು ಧ್ವನಿಯಾಗಿದ್ದಾರೆ.

ಚಿತ್ರದ  ನಿರ್ದೇಶಕ ಎಎಸ್‌ಜಿ, “ನನ್ನ ನಿಜವಾದ ಹೆಸರು ಶಶಿಕುಮಾರ್. ಸಿನಿಮಾ ಪಯಣದಲ್ಲಿ ‘ಎಎಸ್‌ಜಿ’ ಎಂಬ ಪೆನ್ ನೇಮ್ ಇಟ್ಟುಕೊಂಡಿದ್ದೇನೆ. ಇದು ಕೇವಲ ಕರ್ನಾಟಕದ ಹುಡುಗ ಮತ್ತು ತಮಿಳುನಾಡಿನ ಹುಡುಗಿಯ ಪ್ರೇಮಕಥೆ ಮಾತ್ರವಲ್ಲ. ಅತ್ತಿಬೆಲೆಯ ಆಚೆಗಿನ ಗಡಿ ಭಾಗದ ಪ್ರದೇಶಗಳಲ್ಲಿ ಕಂಡುಬರುವ ವಿಶಿಷ್ಟ ಜೀವನಶೈಲಿ ಮತ್ತು ಅಲ್ಲಿ  ಕಂಡ ನೈಜ ಪಾತ್ರಗಳನ್ನು ಆಧರಿಸಿ ಈ ಕಥೆ ಹೆಣೆದಿದ್ದೇನೆ. ಹತ್ತು ವರ್ಷಗಳ ಹಿಂದೆ ನಾನು ಓಡಾಡುತ್ತಿದ್ದ ಜಾಗದ ನೆನಪುಗಳು ಈ ಕಥೆಯನ್ನು ಬರೆಯಲು ಪ್ರೇರಣೆ ನೀಡಿತು. ಕಥಾನಾಯಕಿ ಆ ಜಾಗಕ್ಕೆ ಬಂದ ನಂತರ ಅಲ್ಲಿನ ಪ್ರಪಂಚ ಹೇಗೆ ತೆರೆದುಕೊಳ್ಳುತ್ತದೆ ಎಂಬುದೇ ಚಿತ್ರದ ಮೂಲ ತಿರುಳು. ಮೇಲ್ನೋಟಕ್ಕೆ ಇದೊಂದು ಪ್ರೇಮಕಥೆಯಂತೆ ಕಂಡರೂ, ಒಳಗೆ ತೀವ್ರವಾದ ಡ್ರಾಮಾ, ಕ್ರೈಮ್ ಮತ್ತು ಸಾಮಾಜಿಕ ವಾಸ್ತವತೆಗಳ ಸಂಕೀರ್ಣತೆಯಿದೆ” ಎಂದು ತಿಳಿಸಿದ್ದಾರೆ.

“ಸಿನಿಮಾದ ಬಹುತೇಕ ಭಾಗ ಹೊಸೂರು ಮತ್ತು ತಮಿಳುನಾಡಿನ ಗಡಿ ಭಾಗಗಳಲ್ಲಿ ಚಿತ್ರೀಕರಣಗೊಂಡಿದೆ. ಉಳಿದ ಭಾಗಗಳನ್ನು ಚನ್ನಪಟ್ಟಣ, ಮಾಗಡಿ ಹಾಗೂ ಬೆಂಗಳೂರಿನಲ್ಲಿ ಶೂಟ್ ಮಾಡಲಾಗಿದೆ. ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಮತ್ತು ಸೆನ್ಸಾರ್ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ” ಎಂದು ತಿಳಿಸಿದ್ದಾರೆ.

ಚಿತ್ರದಲ್ಲಿ ಅಂಜನ್ ನಾಗೇಂದ್ರ, ಅಶ್ವಿತಾ ಹೆಗ್ಡೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಚ್ಯುತ್ ಬಿ.ಎಸ್. ಛಾಯಾಗ್ರಹಣ ಮತ್ತು ಆಕಾಶ್ ಹಿರೇಮಠ ಅವರ ಸಂಕಲನ ಚಿತ್ರಕ್ಕಿದೆ.

ಗೀತರಚನೆಕಾರ ಕವಿರಾಜ್ ಹಾಡು ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!