‘ರಣಬಾಲಿ’ ಚಿತ್ರದ ಸಾಂಗ್ ರಿಲೀಸ್

ವಿಜಯ್ ದೇವರಕೊಂಡ – ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ನ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ‘ರಣಬಾಲಿ’ಯ ಮೊದಲ ಲಿರಿಕಲ್ ಹಾಡು ‘ಎಂದಯ್ಯಾ ಸಾಮಿ’ ಲೋಕಾರ್ಪಣೆಗೊಂಡಿದೆ.

ಚಿತ್ರತಂಡ ಬಿಡುಗಡೆ ಮಾಡಿರುವ ರೊಮ್ಯಾಂಟಿಕ್ ಮೆಲೋಡಿ ಹಾಡು ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಿ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ  ಮದುವೆಯ ಸಂಭ್ರಮದ ಸನ್ನಿವೇಶದ  ಹಾಡನ್ನು ಅದ್ಧೂರಿಯಾಗಿ ಚಿತ್ರೀಕರಿಸಲಾಗಿದೆ.

ಖ್ಯಾತ ಸಂಗೀತ ಸಂಯೋಜಕ ಜೋಡಿ ಅಜಯ್-ಅತುಲ್ ಈ ಗೀತೆಗೆ ಮಧುರವಾದ ರಾಗ ಸಂಯೋಜನೆ ಮಾಡಿದ್ದಾರೆ. ರಾಮಜೋಗಯ್ಯ ಶಾಸ್ತ್ರಿ ಅವರ ಸಾಹಿತ್ಯ ಈ ಹಾಡಿನ ಆಕರ್ಷಣೆಯನ್ನು ಹೆಚ್ಚಿಸಿದೆ.  ಶ್ವೇತಾ ಮೋಹನ್ ಮತ್ತು ಅಜಯ್ ಗೊಗಾವಲೆ ತಮ್ಮ ಕಂಠದಿಂದ ಈ ಯುಗಳ ಗೀತೆಗೆ ಜೀವ ತುಂಬಿದ್ದಾರೆ. ಈ ಲಿರಿಕಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಬ್ರಿಟಿಷರ ಆಳ್ವಿಕೆಯ ಕಾಲಘಟ್ಟವಾದ 1854ರಿಂದ 1878ರ ನಡುವೆ ನಡೆದ ನೈಜ ಐತಿಹಾಸಿಕ ಘಟನೆಗಳನ್ನು ಆಧರಿಸಿ ಈ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ. ‘ಮೈತ್ರಿ ಮೂವಿ ಮೇಕರ್ಸ್’ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಹಾಗೂ ವೈ. ರವಿಶಂಕರ್ ಈ ಮೆಗಾ ಪ್ರಾಜೆಕ್ಟ್‌ಗೆ ಬಂಡವಾಳ ಹೂಡಿದ್ದು, ಟಿ-ಸೀರೀಸ್‌ನ ಗುಲ್ಶನ್ ಕುಮಾರ್ ಮತ್ತು ಭೂಷಣ್ ಕುಮಾರ್ ಚಿತ್ರವನ್ನು ಅರ್ಪಿಸುತ್ತಿದ್ದಾರೆ.

ರಾಹುಲ್ ಸಂಕೃತ್ಯನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಚಿತ್ರ  ವಿಜಯದಶಮಿ ಹಬ್ಬದ ಕೊಡುಗೆಯಾಗಿ ಅಕ್ಟೋಬರ್ 16ರಂದು ತೆರೆಕಾಣಲು ಸಜ್ಜಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!