ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿಯರಾದ ಖುಷಿ ರವಿ, ರೋಷಿಣಿ ಪ್ರಕಾಶ್, ಸಂಗೀತಾ ಭಟ್ ಹಾಗೂ ಸಿಂಧು ಶ್ರೀನಿವಾಸ ಮೂರ್ತಿ ಇದೇ ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವ ‘ನಾಕು ತಂತಿ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಗೌತಮ್ ಅನ್ವಿತ್, ಮಹೇಶ್ ರಾಜ್, ಶಶಿಕುಮಾರ್ ವಿ ಮತ್ತು ಪ್ರೀತಮ್ ಶಿವಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಸುರಂ ಮೂವೀಸ್ ನಿರ್ಮಿಸುತ್ತಿದ್ದು, ಸುರಂ ಮೂವೀಸ್ ಜೊತೆಗೆ ಸಹ ನಿರ್ಮಾಣಕ್ಕೆ ಡಿಕೆಎಸ್ ಪ್ರೊಡಕ್ಷನ್ಸ್ ಹಾಗೂ ಸಾಯಿ ಬಿಂದು ಪ್ರೊಡಕ್ಷನ್ ಸಂಸ್ಥೆಗಳು ಕೈ ಜೋಡಿಸಿದೆ.
‘ನಾಕು ತಂತಿ’ ಚಿತ್ರದ ವಿಶೇಷತೆ ನಾಲ್ವರು ನಿರ್ದೇಶಕರು ಒಂದಾಗಿ ಸಿನಿಮಾ ಕಟ್ಟಿಕೊಡುತ್ತಿರುವುದು. ಗೌತಮ್ ಅನ್ವಿತ್, ಮಹೇಶ್ ರಾಜ್, ಶಶಿಕುಮಾರ್ ವಿ ಮತ್ತು ಪ್ರೀತಮ್ ಶಿವಕುಮಾರ್ ತಮ್ಮದೇ ಆದ ವಿಭಿನ್ನ ಸೃಜನಶೀಲ ದೃಷ್ಟಿಕೋನ ಹಾಗೂ ಕಥೆ ಹೇಳುವ ಶೈಲಿಯೊಂದಿಗೆ ಚಿತ್ರವನ್ನು ರೂಪಿಸಿದ್ದಾರೆ.
ಬಲಿಷ್ಠ ಪಾತ್ರಗಳು ಹಾಗೂ ವಿಭಿನ್ನ ಕಥನಶೈಲಿಯನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಚಿತ್ರದಲ್ಲಿ ನಾಲ್ಕು ನಿರ್ದೇಶಕರ ವೈಯಕ್ತಿಕ ಸೃಜನಶೀಲ ಧ್ವನಿಗಳು ಒಂದೇ ಕಥಾ ಪ್ರಪಂಚದಲ್ಲಿ ಬೆಸೆದುಕೊಂಡಿವೆ. ನಾಲ್ವರು ನಿರ್ದೇಶಕರು ಒಂದೇ ಚಿತ್ರಕ್ಕಾಗಿ ಕೈಜೋಡಿಸಿರುವುದು ಕನ್ನಡ ಚಿತ್ರರಂಗದಲ್ಲಿ ಕುತೂಹಲ ಮೂಡಿಸಿದೆ.
ಸುರಂ ಮೂವೀಸ್ ಜೊತೆಗೆ ಇದೇ ಮೊದಲ ಬಾರಿಗೆ ಡಿಕೆಎಸ್ ಪ್ರೊಡಕ್ಷನ್ಸ್ ಹಾಗೂ ಸಾಯಿ ಬಿಂದು ಪ್ರೊಡಕ್ಷನ್ ಸಂಸ್ಥೆಗಳು ಸಹ ನಿರ್ಮಾಣಕ್ಕೆ ಕೈಜೋಡಿಸಿವೆ . ಅನುಭವಿ ನಿರ್ಮಾಣ ಸಂಸ್ಥೆಯಾದ ಸುರಂ ಮೂವೀಸ್ ಜೊತೆಗೆ ಯೋಗೇಶ್ ಬಸವೇಗೌಡ ಹಾಗೂ ನಂಬೂರು ಸಾಯಿ ಅವರ ಮೊದಲ ನಿರ್ಮಾಣ ಪ್ರಯತ್ನವೂ ಈ ಚಿತ್ರದಲ್ಲಿ ಒಂದಾಗಿದೆ.
ಜಯರಾಮ್ ದೇವಸಮುದ್ರ ಅವರ ನೇತೃತ್ವದ ಸುರಂ ಮೂವೀಸ್ ಸಂಸ್ಥೆ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಹಾಗೂ ವಿಷಯಾಧಾರಿತ ಕಥೆಗಳಿಗೆ ಬೆಂಬಲ ನೀಡುತ್ತಾ ಬಂದಿದೆ. ಹೊಸ ಪ್ರತಿಭಾವಂತ ನಿರ್ದೇಶಕರು ಹಾಗೂ ಬರಹಗಾರರನ್ನು ಗುರುತಿಸಿ, ಅವರ ವಿಭಿನ್ನ ಕಥೆಗಳಿಗೆ ವೇದಿಕೆ ಒದಗಿಸುವುದು ಸಂಸ್ಥೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.ಈ
‘ನಿದ್ರಾದೇವಿ ನೆಕ್ಸ್ಟ್ ಡೋರ್’, ಚೈತ್ರಾ ಆಚಾರ್ ಅಭಿನಯದ ‘ಎಲ್ಎಸ್ಡಿ’, ‘ನೀ ನಂಗೆ ಅಲ್ಲವಾ’ ಸೇರಿದಂತೆ ಹಲವು ವಿಭಿನ್ನ ಪ್ರಯತ್ನಗಳೊಂದಿಗೆ ಸುರಂ ಮೂವೀಸ್ ಗುರುತಿಸಿಕೊಂಡಿದೆ. ಶ್ರೀಮುರಳಿ ಅಭಿನಯದ ‘ಉಗ್ರಾಯುಧಂ’ ಕೂಡ ಸಂಸ್ಥೆಯ ಮುಂಬರುವ ಚಿತ್ರಗಳಲ್ಲೊಂದು.
‘ನಾಕು ತಂತಿ’ ಕೂಡ ವಿಭಿನ್ನ ಕಥೆ ಹಾಗೂ ಹೊಸ ತಲೆಮಾರಿನ ನಿರ್ದೇಶಕರ ಸೃಜನಶೀಲ ದೃಷ್ಟಿಕೋನಕ್ಕೆ ಬೆಂಬಲ ನೀಡುವ ಸುರಂ ಮೂವೀಸ್ನ ಪ್ರಯತ್ನದ ಮುಂದುವರಿಕೆಯಾಗಿದೆ.
‘ನಾಕು ತಂತಿ’ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ಖುಷಿ ರವಿ, ರೋಷಿಣಿ ಪ್ರಕಾಶ್, ಸಂಗೀತಾ ಭಟ್ ಹಾಗೂ ಸಿಂಧು ಶ್ರೀನಿವಾಸ ಮೂರ್ತಿ ಅವರಂತಹ ಪ್ರತಿಭಾವಂತ ನಟಿಯರು ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು.
ತಮ್ಮ ವಿಭಿನ್ನ ಹಾಗೂ ಮನಮುಟ್ಟುವ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಈ ನಾಲ್ವರು ನಟಿಯರು ಚಿತ್ರದಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪ್ರತಿಯೊಂದು ಪಾತ್ರವೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದ್ದು, ನಟಿಯರಿಗೆ ತಮ್ಮ ಅಭಿನಯದ ಮತ್ತೊಂದು ಆಯಾಮವನ್ನು ಅನಾವರಣಗೊಳಿಸಲು ಅವಕಾಶ ನೀಡಿದೆ.
ಭಾವನಾತ್ಮಕ ಆಳ, ಸಹಜ ಅಭಿನಯ ಹಾಗೂ ಪಾತ್ರಗಳಿಗೆ ಜೀವ ತುಂಬುವ ಸಾಮರ್ಥ್ಯದಿಂದ ಗಮನ ಸೆಳೆದಿರುವ ಈ ನಾಲ್ವರು ನಟಿಯರು ‘ನಾಕು ತಂತಿ’ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಚಿತ್ರದ ಸಂಗೀತವನ್ನು ಸಮಕಾಲೀನ ಕನ್ನಡ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಸುಮೇಧ್ ಕೆ ಸಂಯೋಜಿಸಿದ್ದಾರೆ.
ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ಜಾನಪದ ಸಂಗೀತದ ಅಂಶಗಳನ್ನು ಆಧುನಿಕ ಸಂಗೀತ ಸಂಯೋಜನೆ ಮತ್ತು ಸೌಂಡ್ ಡಿಸೈನ್ನೊಂದಿಗೆ ಬೆಸೆಯುವ ವಿಭಿನ್ನ ಶೈಲಿಗೆ ಸುಮೇಧ್ ಹೆಸರಾಗಿದ್ದಾರೆ.
ಸ್ವತಂತ್ರ ಸಂಗೀತ ಕ್ಷೇತ್ರದಲ್ಲಿನ ಗಮನಾರ್ಹ ಕೆಲಸಗಳ ನಂತರ ‘ಸು ಫ್ರಮ್ ಸೋ’ ಚಿತ್ರದ ಮೂಲಕ ಮುಖ್ಯವಾಹಿನಿಯ ಚಿತ್ರರಂಗಕ್ಕೆ ಸಂಗೀತ ನಿರ್ದೇಶಕರಾಗಿ ಪರಿಚಿತರಾದ ಸುಮೇಧ್ ಕೆ, ‘ನಾಕು ತಂತಿ’ ಚಿತ್ರದ ಭಾವನಾತ್ಮಕ ಪ್ರಪಂಚ ಹಾಗೂ ಬಲಿಷ್ಠ ಮಹಿಳಾ ಪಾತ್ರಗಳ ಪಯಣಕ್ಕೆ ಪೂರಕವಾಗುವಂತಹ ವಿಶಿಷ್ಟ ಸಂಗೀತವನ್ನು ರೂಪಿಸಿದ್ದಾರೆ.
ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗುತ್ತಿದೆ. ‘ನಾಕು ತಂತಿ’ ಚಿತ್ರ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ.





Be the first to comment