ಕೆ.ರಾಘವ್ ನಿರ್ದೇಶನದ ‘ಕಲೀಲಾ’ ಚಿತ್ರದ ಮುಹೂರ್ತ ಸಮಾರಂಭ ಶ್ರೀ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು.
ಮೊದಲ ದೃಶ್ಯಕ್ಕೆ ಸ್ಟಾರ್ ನಿರ್ದೇಶಕ ಸಿಂಪಲ್ ಸುನಿ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಕೆವಿಆರ್ ಪಿಕ್ಚರ್ಸ್ ನಿರ್ಮಾಣದ ‘ಕಲೀಲಾ’ ಚಿತ್ರಕ್ಕೆ ಕೆ.ರಾಘವ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
‘ಇದೊಂದು ಮಾಸ್ ಕಂಟೆಂಟ್ ಜತೆಗೆ ಅಣ್ಣ ತಂಗಿ ಬಾಂಧವ್ಯವನ್ನು ಹೇಳಲಾಗುತ್ತಿದೆ. ’ಒಂದು ನಿಮಿಷದ ಕೋಪ, ಜೀವನವೆಲ್ಲ ತಾಪ’ ಎಂಬ ಗಾದೆಯಂತೆ ಚಿತ್ರದಲ್ಲಿ ಏನೂ ತಿಳಿಯದ ಮುಗ್ದ ಹುಡುಗನೊಬ್ಬ ಕೋಪದಲ್ಲಿ ತಪ್ಪು ಮಾಡಿಕೊಂಡು, ಮುಂದೆ ಆಗುವಂತ ಅನಾಹುತ, ನೋವುಗಳನ್ನು ಹೇಗೆ ಎದುರಿಸುತ್ತಾನೆ? ಈಗಿನ ಜನರು ಇಷ್ಟಪಡುವಂತ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಕಾಲ್ಪನಿಕ ದೃಶ್ಯಗಳನ್ನು ಸೃಷ್ಟಿಸಲಾಗಿದೆ. ಮಿಕ್ಕಂತೆ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು’ ಎಂದು ಕೆ.ರಾಘವ್ ಹೇಳಿದರು.
ನಾಯಕ ರಾಕೇಶ್ ಅಡಿಗ ಬಡ ಕಾರ್ಮಿಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಳ್ಳಿ ಬಡ ಹುಡುಗಿಯಾಗಿ ನಾಯಕಿ ಖುಷಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಅಪೂರ್ವ, ಶಿಳ್ಳೆ ಮಂಜುನಾಥ್, ಜೋಗಿ ಉಮೇಶ್ಪುಂಗ, ಕಡ್ಡಿ ವಿಶ್ವ, ಬಲರಾಜವಾಡಿ, ಕಾಕ್ರೋಚ್ ಸುಧಿ, ವರ್ಧನ್, ಶೋಭಿತ, ಮಫ್ತಿ ಪ್ರದೀಪ್, ಪೂಜಾಶೆಟ್ಟಿ, ಶಿಲ್ಪ ಮುಂತಾದವರು ನಟಿಸುತ್ತಿದ್ದಾರೆ.
ನಾಲ್ಕು ಹಾಡುಗಳಿಗೆ ಸಂಗೀತ ಮನುರಾಜ್, ಛಾಯಾಗ್ರಹಣ ಎಸ್.ಹಾಲೇಶ್, ಸಂಕಲನ ಗಿರೀಶ್ಕುಮಾರ್, ನೃತ್ಯ ರಘು.ಆರ್.ಜೆ, ಸಾಹಸ ಜಾನಿ ಮಾಸ್ಟರ್-ಮರಿಸ್ವಾಮಿ ಅವರದಾಗಿದೆ. ಬೆಂಗಳೂರು, ಬಿಜಾಪುರ, ಮೈಸೂರು ಸುಂದರ ತಾಣಗಳಲ್ಲಿ 45 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲು ತಂಡ ಯೋಜನೆ ರೂಪಿಸಿದೆ.
—–





Be the first to comment