ರೇಷನ್ ಅಂಗಡಿಗಳಲ್ಲಿ ‘ನ್ಯಾಯಬೆಲೆ ಅಂಗಡಿ’ ಟಿಕೆಟ್ ಮಾರಾಟ!

ಕುಮಾರ್‌ ಬಂಗಾರಪ್ಪ ನಟನೆಯ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದ ಫ್ರೀಮಿಯರ್ ಶೋ ಟಿಕೆಟ್  ರಾಜ್ಯದ ರೇಷನ್‌ ಅಂಗಡಿಗಳಲ್ಲಿ ಮಾರಾಟವಾಗುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

ಒಂದೊಂದು ರೇಷನ್‌ ಅಂಗಡಿಗೆ 50 , 100 , 150 ಟಿಕೆಟ್​ಗಳನ್ನು ನೀಡಲಾಗಿದೆ.  20 ಸಾವಿರಕ್ಕೂ ಅಧಿಕ ಅಂಗಡಿಗಳಲ್ಲಿ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ, ಜೋಳದ ಜೊತೆಯಲ್ಲಿ ಸಿನಿಮಾ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. 150 ರೂ. ಕೊಟ್ಟು  ಟಿಕೆಟ್ ಖರೀದಿಸುವಂತೆ ಅಂಗಡಿ ಮಾಲೀಕರು ಒತ್ತಡ ಹಾಕುತ್ತಿದ್ದಾರೆ ಎಂದು ಪಡಿತರದಾರರು ಆರೋಪಿಸುತ್ತಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಬಡಜನರು ಮುಂದಿನ ತಿಂಗಳು ರೇಷನ್ ಕೊಡುತ್ತಾರೋ ಇಲ್ಲೋ ಅನ್ನೋ ಭಯದಲ್ಲಿ ಟಿಕೆಟ್ ತೆಗೆದುಕೊಳ್ಳುತ್ತಿದ್ದಾರೆ. ಕೆಲವು ಅಂಗಡಿಯ  ಗ್ರಾಹಕರು ಜಗಳ ಮಾಡುತ್ತಾರೆ ಅನ್ನೋ ಕಾರಣಕ್ಕಾಗಿ ಮಾಲೀಕರು ಟಿಕೆಟ್ ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಪಡಿತರ ಅಂಗಡಿಯಲ್ಲಿ ಸಿನಿಮಾ ಟಿಕೆಟ್ ಮಾರಾಟ ಮಾಡೋದು ಎಷ್ಟು ಸರಿ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಈ ಸಿನಿಮಾದ ಪೋಸ್ಟರ್ ನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆಹಾರ ಸಚಿವ ಕೆ. ಹೆಚ್​. ಮುನಿಯಪ್ಪ ಅವರು ಎರಡು ತಿಂಗಳ ಹಿಂದೆ ಬಿಡುಗಡೆ ಮಾಡಿದ್ದರು. ಆಯುಕ್ತರು  ರಾಜ್ಯದ ಎಲ್ಲಾ ಅಧಿಕಾರಿಗಳಿಗೆ ಟಿಕೆಟ್ ಮಾರಾಟ ಮಾಡಲು ಸೂಚನೆ ನೀಡಿದ್ದಾರೆ. ಸರ್ಕಾರಿ ನ್ಯಾಯ ಬೆಲೆ ಅಂಗಡಿ ಚಲನಚಿತ್ರದಲ್ಲಿ ಅನ್ನಭಾಗ್ಯ ಯೋಜನೆ ಜಾಗೃತಿ ಕುರಿತು ಮಾಹಿತಿ ಇದೆ.  ಯಾರಿಗೂ ಬಲವಂತವಾಗಿ ಟಿಕೆಟ್ ಮಾರಾಟ ಮಾಡುತ್ತಿಲ್ಲ. ನ್ಯಾಯಬೆಲೆ ಅಂಗಡಿಗಳ ಬಗ್ಗೆ ಜಾಗೃತಿ ಮೂಡಿಸುವ ವಿಷಯ ಸಿನಿಮಾದಲ್ಲಿ ಇರುವ ಕಾರಣಕ್ಕಾಗಿ ಪ್ರೀಮಿಯರ್ ಶೋ ಪ್ರದರ್ಶನಕ್ಕಾಗಿ ಈ ರೀತಿ ಮಾಡಲಾಗಿದೆ’ ಎಂದು ಆಹಾರ ಇಲಾಖೆಯ ಉಪನಿರ್ದೇಶಕ ಡಿ.ಜೆ. ಮಂಜುನಾಥ್ ತಿಳಿಸಿದ್ದಾರೆ.

ಜುಲೈ 31ಕ್ಕೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ ಬಿಡುಗಡೆ ಆಗುತ್ತಿದೆ. ರಾಗಿಣಿ ದ್ವಿವೇದಿ, ನಟರಾದ ಕುಮಾರ್ ಬಂಗಾರಪ್ಪ, ದೊಡ್ಡಣ್ಣ, ನವೀನ್ ಸಜ್ಜು, ಕೃಷ್ಣಪ್ಪ, ರುದ್ರೇಗೌಡ ಸೇರಿ ಮೊದಲಾದ ಕಲಾವಿದರು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಿತ್ರವನ್ನು ತೇಜು ಮೂರ್ತಿ ಮತ್ತು ಪದ್ಮಾವತಿ ಚಂದ್ರಶೇಖರ್‌ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಸಾತ್ವಿಕ್‌ ಪವನ್‌ ಕುಮಾರ್‌ ಛಾಯಾಗ್ರಹಣ ಮತ್ತು ನಿರ್ದೇಶನ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!