ಅನುರಾಧಾ ಭಟ್ ತಿರುಗೇಟು

ಖ್ಯಾತ ಗಾಯಕಿ ಅನುರಾಧಾ ಭಟ್,  ಗಾನಕೋಗಿಲೆ ಎಸ್. ಜಾನಕಿ ಅವರ ಪುಣ್ಯಸ್ಮರಣೆ ಅಂಗವಾಗಿ ಖಾಸಗಿ ವಾಹಿನಿ ಆಯೋಜಿಸಿದ್ದ ಸಂಗೀತ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿರುವ ಟೀಕೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

‘ಮೈಸೂರಿನಲ್ಲಿನಡೆದ 12ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮದ ಹೆಸರಿನಲ್ಲಿ ತಮ್ಮ ವ್ಯಕ್ತಿತ್ವವನ್ನು ಪ್ರಶ್ನಿಸುವುದು ಅತ್ಯಂತ ಬೇಜವಾಬ್ದಾರಿಯುತ ಮತ್ತು ವಿಷಾದನೀಯ’ ಎಂದು ಅವರು ಹೇಳಿದ್ದಾರೆ.

“ಮೆಟ್ಟಲ್ಲಿ ಹೊಡಿಬೇಕು”, “ವೇದಿಕೆ ಹತ್ತಲು ಬಿಡಬಾರದು” ಎಂಬ ಅವಹೇಳನಕಾರಿ ಕಾಮೆಂಟ್‌ಗಳನ್ನು ಉಲ್ಲೇಖಿಸಿರುವ ಅವರು, ‘ಕೆಲ ಅನಿವಾರ್ಯ ಕಾರಣಗಳಿಂದ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ.  ದುಃಖ, ಪ್ರೀತಿ ಮತ್ತು ಗೌರವವನ್ನು ಅಂತ್ಯಸಂಸ್ಕಾರದಲ್ಲಿ ಹಾಜರಾಗುವುದರಿಂದ ಅಥವಾ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಿಂದ ಅಳೆಯಲು ಸಾಧ್ಯವಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.

‘ಸಾಮಾನ್ಯವಾಗಿ ನಕಾರಾತ್ಮಕ ಪ್ರತಿಕ್ರಿಯೆಗಳಿಗೆ ಉತ್ತರಿಸುವುದಿಲ್ಲ. ಆದರೆ ತಮ್ಮ ಗುರುಸ್ಥಾನದಲ್ಲಿರುವ ಜಾನಕಿ ಅಮ್ಮನವರ ವಿಷಯ ಬಂದಿರುವುದರಿಂದ ಮೌನ ಮುರಿದಿದ್ದೇನೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಾವುದೇ ಗಾಯಕರು ಒಂದು ರೂಪಾಯಿಯ ಸಂಭಾವನೆಯನ್ನೂ ಪಡೆದಿಲ್ಲ, ಜಾನಕಿ ಅಮ್ಮನವರ ಮೇಲಿನ ಪ್ರೀತಿ ಮತ್ತು ಗೌರವದಿಂದ ಮಾತ್ರ ಸಂಗೀತ ಸೇವೆ ಸಲ್ಲಿಸಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಜಾನಕಿ ಅಮ್ಮನವರ ಅಭಿಮಾನಿಗಳೆಂದು ಹೇಳಿಕೊಳ್ಳುವವರು ಮೊದಲು ಅವರ ಸರಳತೆ, ವಿನಯ ಮತ್ತು ಮಾನವೀಯತೆಯನ್ನು ಅಳವಡಿಸಿಕೊಳ್ಳಬೇಕು. ತಮ್ಮ ಗುರುಗಳ ಹಾಡುಗಳನ್ನು ಮುಂದೆಯೂ ಹೆಮ್ಮೆಯಿಂದ ಹಾಡುವುದಾಗಿ ಮತ್ತು ಅದಕ್ಕಾಗಿ ಯಾರ ಮುಂದೆಯೂ ಕ್ಷಮೆ ಕೇಳುವುದಿಲ್ಲ’ ಎಂದು  ಹೇಳಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!