ರಾಮಾಯಣ

‘ರಾಮಾಯಣ’ ಟ್ರೇಲರ್ ಬಿಡುಗಡೆ ಮುಂದೂಡಿಕೆ

ರಾಕಿಂಗ್ ಸ್ಟಾರ್ ಯಶ್, ನಮಿತ್ ಮಲ್ಹೋತ್ರಾ ಜಂಟಿಯಾಗಿ ನಿರ್ಮಿಸಿರುವ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆ ಮುಂದೂಡಲಾಗಿದೆ.

ದೇಶಾದ್ಯಂತ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಚಿತ್ರತಂಡ ಈ ನಿರ್ಧಾರ ಕೈಗೊಂಡಿದೆ.  ಶುಕ್ರವಾರ ದೆಹಲಿಯ ಭಾರತ್ ಮಂಟಪದಲ್ಲಿ ಮಾಧ್ಯಮಗಳಿಗಾಗಿ ವಿಶೇಷ ಪ್ರೀಮಿಯರ್ ಪ್ರದರ್ಶನದ ಬಳಿಕ ಜಾಗತಿಕ ಮಟ್ಟದಲ್ಲಿ ಟ್ರೇಲರ್ ಬಿಡುಗಡೆಗೊಳ್ಳಬೇಕಾಗಿತ್ತು.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ಹಾಗೂ ಯುವಜನರು ನಡೆಸುತ್ತಿರುವ ಪ್ರತಿಭಟನೆಗೆ ಗೌರವ ಸೂಚಿಸುವ ಉದ್ದೇಶದಿಂದ ಟ್ರೇಲರ್ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಚಿತ್ರತಂಡ  ತಿಳಿಸಿದೆ.

“ನಮ್ಮ ದೇಶದ ಯುವಜನರೇ ನಮ್ಮ ಭವಿಷ್ಯ. ಆ ಭವಿಷ್ಯವನ್ನು ರಕ್ಷಿಸಲು ನಾವೆಲ್ಲರೂ ನಮ್ಮಿಂದಾದ ಅತ್ಯುತ್ತಮ ಪ್ರಯತ್ನ ಮಾಡೋಣ” ಎಂದು ಚಿತ್ರತಂಡ  ಹೇಳಿದೆ.

ಭಾರತೀಯ ಚಿತ್ರರಂಗದ   ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರಗಳಲ್ಲಿ ಒಂದೆಂದು ಹೇಳಲಾಗುತ್ತಿರುವ  ‘ರಾಮಾಯಣ’ ವನ್ನು ಭಾರತೀಯ ಸಂಸ್ಕೃತಿ ಮತ್ತು ರಾಮಾಯಣ ಮಹಾಕಾವ್ಯವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ಅಮೆರಿಕದ ಪ್ರತಿಷ್ಠಿತ CinemaCon ವೇದಿಕೆಯಲ್ಲೂ  ಭರ್ಜರಿ ಪ್ರಚಾರ ನಡೆಸಲಾಗಿದೆ.

ಚಿತ್ರವು ಈ ವರ್ಷದ ದೀಪಾವಳಿಗೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆಗೆ ಹೊಸ ದಿನಾಂಕವನ್ನು ಚಿತ್ರತಂಡ ಇನ್ನೂ ಘೋಷಿಸಿಲ್ಲ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!