ನವಲಗುಂದದಲ್ಲಿ ನಡೆದ ರೈತ ಹುತಾತ್ಮ ದಿನಾಚರಣೆಯ ನೈಜ ದೃಶ್ಯಗಳು ಸಿ.ಪಿ. ಯೋಗೇಶ್ವರ್ ಅವರ ಪುತ್ರ ಧ್ಯಾನ್ ಯೋಗೇಶ್ವರ್ ಚಿತ್ರ ‘ಕರ್ಣಾಟಬಲಂ ಅಜೇಯಂ’ ಭಾಗವಾಗಲಿವೆ.
ನವಲಗುಂದದಲ್ಲಿ ನಡೆದ ರೈತ ಹುತಾತ್ಮ ದಿನಾಚರಣೆಯ ನೈಜ ದೃಶ್ಯಗಳನ್ನು ಚಿತ್ರತಂಡ ಸೆರೆ ಹಿಡಿದಿದೆ. ರೈತ ಹೋರಾಟಗಾರರಾಗಿ ಸಿ.ಪಿ. ಯೋಗೇಶ್ವರ್ ಹಾಗೂ ಶಾಸಕ ಎನ್.ಕೆ. ಕೋನರೆಡ್ಡಿ ಘೋಷಣೆ ಕೂಗಿದ ದೃಶ್ಯಗಳು ಸಿನಿಮಾದ ಭಾಗವಾಗಲಿವೆ.
ಎರಡು ಕಾಲಘಟ್ಟಗಳಲ್ಲಿ ಸಾಗುವ ‘ಕರ್ಣಾಟಬಲಂ ಅಜೇಯಂ’ ಸಿನಿಮಾದ ಮೂಲಕ ಉತ್ತರ ಕರ್ನಾಟಕದ ರೈತರ ಬದುಕು, ಹೋರಾಟ, ಆತ್ಮಾರ್ಪಣೆ ಹಾಗೂ ಮಹದಾಯಿ ಯೋಜನೆ ಸೇರಿದಂತೆ ಹಲವು ಸಾಮಾಜಿಕ ವಿಚಾರಗಳನ್ನು ತೆರೆಗೆ ತರುವ ಪ್ರಯತ್ನ ಮಾಡಲಾಗಿದೆ.
“ಉತ್ತರ ಕರ್ನಾಟಕದ ರೈತರ ಬದುಕೇ ಚಿತ್ರದ ಆತ್ಮ. ಚಾಲುಕ್ಯರ ವೈಭವದ ನೆಲದಲ್ಲಿ ಇಂದಿನ ರೈತರ ನೋವು ಹೇಗಿದೆ ಎಂಬುದನ್ನು ಪ್ರೇಕ್ಷಕರ ಮುಂದೆ ಇಡುತ್ತಿದ್ದೇವೆ. ಈಗಾಗಲೇ ಶೇ.30ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಸಂಕ್ರಾಂತಿ ವೇಳೆಗೆ ಚಿತ್ರ ಬಿಡುಗಡೆ ಮಾಡುವ ಗುರಿಯಿದೆ” ಎಂದು ಸಿ.ಪಿ. ಯೋಗೇಶ್ವರ್ ತಿಳಿಸಿದ್ದಾರೆ.
‘ಕರ್ಣಾಟಬಲಂ ಅಜೇಯಂ’ ಚಿತ್ರದಲ್ಲಿ ಮಾಜಿ ಮಿಸ್ ಯೂನಿವರ್ಸ್ ಇಂಡಿಯಾ ಮಣಿಕಾ ವಿಶ್ವಕರ್ಮ, ರೇಖಾ ಪಾಂಡೆ ನಾಯಕಿಯರಾಗಿದ್ದಾರೆ. ತೆಲುಗಿನ ನಟ ಜಗಪತಿ ಬಾಬು, ನಟಿ ಲಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವಿ. ಹರಿಕೃಷ್ಣ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ ಚಿತ್ರಕ್ಕಿದೆ.
—





Be the first to comment