ಒಟಿಟಿಗೆ ಬರಲಿದೆ ಸೆನ್ಸಾರ್?

ಒಟಿಟಿ ದಿಕೆಗಳಲ್ಲಿ ನೇರವಾಗಿ ಬಿಡುಗಡೆಯಾಗುವ ಸಿನಿಮಾಗಳಿಗೆ ಸೆನ್ಸಾರ್ ಪ್ರಮಾಣಪತ್ರ ಕಡ್ಡಾಯವಾಗುವ ಸಾಧ್ಯತೆ ದಟ್ಟವಾಗಿದೆ.

ನಟ ದಿಲ್ಜಿತ್ ದೋಸಾಂಜ್ ಅಭಿನಯದ ‘ಸತ್ಲುಜ್’ ಚಿತ್ರದ ವಿವಾದದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಕುರಿತು ಗಂಭೀರವಾಗಿ ಚಿಂತನೆ ನಡೆಸಿದೆ. ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಅವರ ಜೀವನಾಧಾರಿತ ‘ಸತ್ಲುಜ್’ ಚಿತ್ರವನ್ನು ಯಾವುದೇ ಸೆನ್ಸಾರ್ ಪ್ರಮಾಣಪತ್ರವಿಲ್ಲದೆ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಇದನ್ನು ನಿಯಮ ಉಲ್ಲಂಘನೆ ಎಂದು ಪರಿಗಣಿಸಿರುವ ಕೇಂದ್ರ ಸರ್ಕಾರ 2021ರ ಐಟಿ ನಿಯಮಗಳಿಗೆ  ತಿದ್ದುಪಡಿ ತರಲು ಚಿಂತನೆ ನಡೆಸಿದೆ.

ಜುಲೈ 3ರಂದು ಜೀ5 ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದ್ದ ‘ಸತ್ಲುಜ್’ ಸಿನಿಮಾವನ್ನು ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ಕೇವಲ 48 ಗಂಟೆಗಳಲ್ಲೇ ತೆಗೆದು ಹಾಕಲಾಗಿತ್ತು. ಸಿಬಿಎಫ್‌ಸಿ ಈ ಚಿತ್ರಕ್ಕೆ 127 ಕಟ್‌ಗಳನ್ನು ಸೂಚಿಸಿದ್ದರೂ, ಯಾವುದೇ ಕಟ್ ಇಲ್ಲದ ಆವೃತ್ತಿಯನ್ನೇ ಪ್ರಸಾರ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಜೀ5 ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಒಟಿಟಿಯಿಂದ ಚಿತ್ರವನ್ನು ತೆಗೆದ ಬಳಿಕವೂ ಪಂಜಾಬ್‌ನ ಕೆಲವು ಗುರುದ್ವಾರಗಳು ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಅನಧಿಕೃತ ಪ್ರದರ್ಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಂತಹ ಪ್ರದರ್ಶನಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ ನೀಡಿದೆ.

ಭಾರತದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳಿಗೆ ಮಾತ್ರ ಸೆನ್ಸಾರ್ ಪ್ರಮಾಣಪತ್ರ ಕಡ್ಡಾಯವಾಗಿದೆ. ಆದರೆ ಒಟಿಟಿ ವೇದಿಕೆಗಳು ಈ ವ್ಯಾಪ್ತಿಯಿಂದ ಹೊರಗಿರುವ ಕಾರಣ ನಿರ್ಮಾಪಕರು ಸೆನ್ಸಾರ್ ಇಲ್ಲದೇ ಕಂಟೆಂಟ್ ಬಿಡುಗಡೆ ಮಾಡುವ ಅವಕಾಶ ಹೊಂದಿದ್ದಾರೆ.  ಆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!