ಚಿತ್ರ : ಗ್ರಾಮಾಯಣ
ನಿರ್ದೇಶನ : ದೇವನೂರು ಚಂದ್ರು
ನಿರ್ಮಾಪಕರು : ಲಹರಿ ವೇಲು, ಜಿ.ಮನೋಹರನ್, ನವೀನ್ ಮನೋಹರನ್
ತಾರಾಗಣ : ವಿನಯ್ ರಾಜ್ ಕುಮಾರ್, ಮೇಘಾ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ ಮೊದಲಾದವರು…
ರೇಟಿಂಗ್ : 4/5
ಗ್ರಾಮದೊಳಗಿನ ಪ್ರೀತಿ, ಪ್ರೇಮದೊಂದಿಗಿನ ಬದುಕು ನೈಜವಾಗಿರುತ್ತವೆ. ಆದರೆ ಅಲ್ಲಿಗೆ ರಾಜಕಾರಣದ ವಂಚನೆಗಳು ಕಾಲಿಟ್ಟಾಗ, ಅದು ಜನ ಜೀವನವನ್ನು ಹೇಗೆಲ್ಲ ಬದಲಾಯಿಸಬಹುದು ಎಂದು ತೋರಿಸಿರುವ ಚಿತ್ರವೇ ಗ್ರಾಮಾಯಣ.
ವಿನಯ್ ರಾಜ್ ಕುಮಾರ್ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಗ್ರಾಮೀಣ ಯುವಕನಾಗಿದ್ದಾರೆ. ಇಲ್ಲಿ ಅವರ ಪಾತ್ರದ ಹೆಸರು ಸೀನ. ಒಬ್ಬ ಹಳ್ಳಿ ಹೈದನಾಗಿ, ಪ್ರೇಮಿಯಾಗಿ, ಸ್ನೇಹಿತನಾಗಿ, ಹೊಡೆದಾಡುವ ಪಂಟನಾಗಿ ಹೀಗೆ ಬೇರೆ ಬೇರೆ ಆಯಾಮಗಳಲ್ಲಿ ಸೀನನನ್ನು ತೋರಿಸಿದ್ದಾರೆ ನಿರ್ದೇಶಕ ದೇವನೂರು ಚಂದ್ರು.
ಬೆಂಗಳೂರಿನಲ್ಲಿ ಕೆಲಸಕ್ಕೆ ಅವಕಾಶ ಇದ್ದರೂ ಅತ್ತ ಕಡೆಗೆ ಮುಖ ಮಾಡಲು ಬಯಸದವನು ಸೀನ. ಅದಕ್ಕೆ ಆತನಿಗೆ ಹಳ್ಳಿಯ ಮೇಲಿರುವ ಪ್ರೀತಿಯೂ ಕಾರಣ. ಆದರೆ ಹಳ್ಳಿಯಲ್ಲಿ ಸೀನನಿಗೆ ಸರಿಯಾದ ಉದ್ಯೋಗವಿಲ್ಲ. ಅದಕ್ಕೆ ಮತ್ತೆ ರಾಜಕಾರಣಿಗಳೇ ಕಾರಣ. ಅವರೊಂದಿಗಿನ ಸೀನನ ಹೋರಾಟ ಯಾವ ಮಟ್ಟಕ್ಕೆ ತಲುಪುತ್ತದೆ ಎನ್ನುವುದನ್ನು ಪರದೆಯ ಮೇಲೆ ನೋಡುವುದೇ ಉತ್ತಮ.
ಸೀನನ ಪಾತ್ರದಲ್ಲಿ ನಟಿಸಿರುವ ವಿನಯ್ ರಾಜ್ ಕುಮಾರ್ ನಟನೆಯಲ್ಲಿ ತುಂಬಾನೇ ಸಹಜತೆ ಎದ್ದು ಕಾಣುತ್ತದೆ. ಅದು ಲುಂಗಿ ಉಡುವುದರಲ್ಲಿ, ಕೂದಲು ಬಾಚುವುದರಲ್ಲಿ, ಗ್ರಾಮದ ಹಬ್ಬದಲ್ಲಿ ಕುಣಿಯುವುದರಲ್ಲಿ ಹೀಗೆ ಎಲ್ಲದರಲ್ಲೂ ವಿನಯ್ ಹಳ್ಳಿಯ ಸೊಗಡನ್ನು ಉಳಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವುದು ಮೇಘ ಶೆಟ್ಟಿ. ಕಿರುತೆರೆಯ ಪಾತ್ರಗಳಲ್ಲಿ ತಾಳ್ಮೆಯ ಪ್ರತಿರೂಪವಾಗಿ ಜನಪ್ರಿಯರಾಗಿದ್ದ ಮೇಘ ಶೆಟ್ಟಿಗೆ ಇಲ್ಲಿ ಮಾತು ಮಾತಿಗೆ ಸಿಡಿದೇಳುವಂಥ ಪಾತ್ರ. ಮೇಘ ಶೆಟ್ಟಿ ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹಾಡಿನಲ್ಲಿಯೂ ಈ ಜೋಡಿ ಅಭಿಮಾನಿಗಳ ಮನಸನ್ನು ಗೆಲ್ಲುತ್ತದೆ.
ಗ್ರಾಮಾಯಣದ ಸೊಗಸು ಏನೆಂದರೆ ಅದು ಪಾತ್ರಕ್ಕಾಗಿ ಆಯ್ಕೆ ಮಾಡಿರುವ ಕಲಾವಿದರ ದಂಡು. ಕನ್ನಡದ ಪ್ರಖ್ಯಾತ ಪೋಷಕ ಪಾತ್ರಧಾರಿಗಳೆಲ್ಲ ಇಲ್ಲಿದ್ದಾರೆ. ಮುಖ್ಯವಾಗಿ ಲೂಸ್ ಮಾದ ಯೋಗಿ ಕೂಡ ಇಲ್ಲೊಂದು ಖಳ ಪಾತ್ರದ ಮೂಲಕ ಬೆಚ್ಚಿ ಬೀಳಿಸುತ್ತಾರೆ. ಕರಿಬೆಕ್ಕು ಎನ್ನುವ ಕೇಬಲ್ ಆಪರೇಟರ್ ಪಾತ್ರ ಯೋಗಿಯದ್ದು. ಆದರೆ ಆತನ ವ್ಯಕ್ತಿತ್ವವನ್ನು ಆಪರೇಟ್ ಮಾಡುವಾತ ಸ್ವಾಮಿ ಎನ್ನುವ ರಾಜಕಾರಣಿ. ಈ ಸ್ವಾಮಿ ಕಾರ್ಯವನ್ನು ಸ್ವಕಾರ್ಯದಂತೆ ನಿರ್ವಹಿಸಿರುವವರು ಕಲಾವಿದ ಗೋಪಾಲಕೃಷ್ಣ ದೇಶಪಾಂಡೆ.
ಅಚ್ಯುತ್ ಕುಮಾರ್, ಬಲರಾಜ್ ವಾಡಿ, ಸೀತಾಕೋಟೆ ಮೊದಲಾದ ಕಲಾವಿದರು ಇತರ ಪಾತ್ರಗಳಲ್ಲಿದ್ದಾರೆ. ಅದರಲ್ಲೂ ನಾಯಕನ ತಾಯಿಯ ಪಾತ್ರವನ್ನು ಅಪರ್ಣಾ ವಸ್ತಾರೆ ಅಭಿನಯಿಸಿರುವ ರೀತಿಗೆ ಸಿನಿಪ್ರಿಯರು ಉಘೇ ಎನ್ನುತ್ತಿದ್ದಾರೆ.
ಚಿತ್ರದ ಸಂಗೀತ, ಛಾಯಾಗ್ರಹಣ, ಸಂಕಲನ ಎಲ್ಲವೂ ಒಂದಕ್ಕಿಂತ ಒಂದು ಆಕರ್ಷಕ. ಸಾಹಸ ಸನ್ನಿವೇಶಗಳಲ್ಲಿ ವಿನಯ್ ರಾಜ್ ಕುಮಾರ್ ಅದ್ಭುತವಾಗಿ ಕಾಣಿಸುತ್ತಾರೆ. ಹೊಡೆದಾಟ, ಭಾವನಾತ್ಮಕತೆ, ರಾಜಕೀಯ, ವಂಚನೆ ಹೀಗೆ ವೈವಿಧ್ಯಮಯ ಭಾವಗಳು ತುಂಬಿರುವ ಗ್ರಾಮಾಯಣ ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯಬಲ್ಲ ಸಂಗತಿಯನ್ನು ಹೊಂದಿದೆ.






Be the first to comment