‘ಮೌರ್ಯ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದ ನಟಿ ಮೈತ್ರಿಯಾ ಗೌಡ, ಸಮಾಜಸೇವೆ ಮತ್ತು ಸಿನಿಮಾ ನಿರ್ಮಾಣದ ಉದ್ದೇಶದಿಂದ ‘ಮೈತ್ರಿಯಾ ಗ್ಲೋಬಲ್ ಟ್ರಸ್ಟ್’ ಆರಂಭಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ಅಭಿನಯದ 2004ರ ‘ಮೌರ್ಯ’ ಸಿನಿಮಾದಲ್ಲಿ ತಂಗಿ ಪಾತ್ರದ ಮೂಲಕ ಮೈತ್ರಿಯಾ ಗೌಡ ಸಿನಿರಂಗಕ್ಕೆ ಪರಿಚಿತರಾಗಿದ್ದರು. ಬಳಿಕ ಕೆಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ಅವರು ಚಿತ್ರರಂಗದಿಂದ ದೂರ ಉಳಿದಿದ್ದರು. ಈಗ ಮೈತ್ರಿಯಾ ಗೌಡ ಸಿನಿಮಾ ನಿರ್ಮಾಣಕ್ಕೆ ಕಾಲಿಟ್ಟಿದ್ದಾರೆ.
ಮೈತ್ರಿಯಾ ಗೌಡ ಅವರ ‘ಮೈತ್ರಿಯಾ ಗ್ಲೋಬಲ್ ಟ್ರಸ್ಟ್’ ಉದ್ಘಾಟನಾ ಕಾರ್ಯಕ್ರಮವನ್ನು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ನಡೆಸಲಾಗಿದೆ. ಕಾರ್ಯಕ್ರಮದಲ್ಲಿ ನಟ ಅನಿರುದ್ಧ್ ಜತ್ಕರ್, ಯಶಸ್ ಸೂರ್ಯ, ರವಿಚೇತನ್ , ಹಿರಿಯ ನಿರ್ಮಾಪಕ ಉದಯ್ ಮೆಹ್ತಾ ಸೇರಿದಂತೆ ಹಲವರು ಭಾಗವಹಿಸಿ ಶುಭ ಹಾರೈಸಿದರು.
‘ಚಿಕ್ಕವಳಿದ್ದಾಗಲೇ ನಟಿಯಾಗಬೇಕು, ಸಮಾಜ ಸೇವೆ ಮಾಡಬೇಕು ಅನ್ನೋ ಆಸೆ ಇತ್ತು. ಅನಿರುದ್ಧ್ ಜತ್ಕರ್ ಅವರ ಸಮಾಜಮುಖಿ ಕೆಲಸಗಳು ಹಾಗೂ ಉದಯ್ ಮೆಹ್ತಾ ಅವರ ಕಾರ್ಯವೈಖರಿ ನನಗೆ ದೊಡ್ಡ ಪ್ರೇರಣೆ ನೀಡಿವೆ. ಅದಕ್ಕಾಗಿಯೇ ಈ ಟ್ರಸ್ಟ್ ಆರಂಭಿಸಿದ್ದೇನೆ. ಹುಟ್ಟುಹಬ್ಬದ ಸಂದರ್ಭದಲ್ಲೇ ಟ್ರಸ್ಟ್ ಆರಂಭಿಸಿರುವುದು ವಿಶೇಷ ಸಂತಸ ತಂದಿದೆ’ ಎಂದು ಮೈತ್ರಿಯಾ ಗೌಡ ಹೇಳಿದ್ದಾರೆ.
‘ಟ್ರಸ್ಟ್ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಜೊತೆಗೆ ಅನಾಥಾಶ್ರಮ, ವೃದ್ಧಾಶ್ರಮ, ಗೋಶಾಲೆ, ಬೀದಿ ನಾಯಿಗಳ ರಕ್ಷಣೆ ಸೇರಿದಂತೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ’ ಎಂದು ಮೈತ್ರಿಯಾ ಗೌಡ ಮಾಹಿತಿ ನೀಡಿದ್ದಾರೆ.
—–





Be the first to comment