ಸತೀಶ್ ನೀನಾಸಂ, ರಚಿತಾ ರಾಮ್ ಜೋಡಿಯ ‘ಅಯೋಗ್ಯ 2’ ಚಿತ್ರದ ಶೂಟಿಂಗ್ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರ ಆರಂಭದಿಂದಲೂ ಸಖತ್ ಸದ್ದು ಮಾಡುತ್ತಲೇ ಬಂದಿದೆ. ಈಗಾಗಲೇ ‘ಅಯೋಗ್ಯ’ ಭಾಗ ೧ ಯಶಸ್ಸು ದಾಖಲಿಸಿದ್ದು, ಅದರ ಖುಷಿಯಲ್ಲೇ ಎರಡನೇ ಭಾಗವನ್ನು ಶುರು ಮಾಡಿತ್ತು ಚಿತ್ರತಂಡ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಟೀಂ ‘ಅಯೋಗ್ಯ’, ಹೊಸದೊಂದು ಸುದ್ದಿ ಹರಿಬಿಟ್ಟಿದೆ.
ಅಯೋಗ್ಯ ಚಿತ್ರದ ‘ಏನಮ್ಮಿ ಏನಮ್ಮಿ’ ಹಾಡು ಕನ್ನಡದ ಮೊದಲ 100 ಮಿಲಿಯನ್ ಗಡಿ ದಾಟಿದ ದಾಖಲೆ ಹೊಂದಿತ್ತು. ಇದೀಗ ಅದೇ ತಂಡದಿಂದ ಮತ್ತೊಂದು ಮ್ಯೂಸಿಕಲ್ ಮ್ಯಾಜಿಕ್ ಹೊಡಬರಲು ತಯಾರಿ ನಡೆಸಿದೆ ಚಿತ್ರತಂಡ. ಅದಕ್ಕೂ ಮುನ್ನ ‘ಅಯೋಗ್ಯ-2’ ಆಡಿಯೋ ರೈಟ್ಸ್ ವಿಷಯವಾಗಿ ಸೌಂಡು ಮಾಡುತ್ತಿದೆ. ಅಯೋಗ್ಯ ಚಿತ್ರದ ಆಡಿಯೋ ಹಕ್ಕು 9 ಲಕ್ಷಕ್ಕೆ ಬಿಕರಿಯಾಗಿತ್ತು. ಇದೀಗ ‘ಅಯೋಗ್ಯ-2’ ಅದಕ್ಕಿಂತಲೂ 20 ಪಟ್ಟು ಹೆಚ್ಚಿಗೆ ಮೊತ್ತಕ್ಕೆ ಬಿಕರಿಯಾಗಿದೆ. ಅರ್ಥಾತ್ ‘ಅಯೋಗ್ಯ 2’ ಆಡಿಯೋ ರೈಟ್ಸ್ ಬರೋಬ್ಬರಿ 2 ಕೋಟಿ ಕೊಟ್ಟು ಕೊಂಡುಕೊಂಡಿದೆ ಆನಂದ್ ಆಡಿಯೋ ಸಂಸ್ಥೆ.
ಈ ಬಗ್ಗೆ ಖುಷಿ ಹಂಚಿಕೊಂಡಿರುವ ನಿರ್ದೇಶಕ ಮಹೇಶ್, ‘ಅಯೋಗ್ಯ ಚಿತ್ರದ ಎಲ್ಲಾ ಹಾಡುಗಳೂ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದವು. ಅದರಲ್ಲೂ ‘ಏನಮ್ಮಿ ಏನಮ್ಮಿ’ ಹಾಡು 100 ಮಿಲಿಯನ್ ಆಗಿತ್ತು. ಅದು ಕನ್ನಡದಲ್ಲಿ ಮೊದಲ ಬಾರಿ 100 ಮಿಲಿಯನ್ ಕ್ರಾಸ್ ಮಾಡಿದ ದಾಖಲೆ ಹೊಂದಿದೆ ಎಂಬುದು ಖುಷಿಯ ವಿಷಯ. ಇದೀಗ ಅದೇ ತಂಡದಿಂದ ‘ಅಯೋಗ್ಯ 2’ ಸಿದ್ಧವಾಗಿದೆ. ಇದರಲ್ಲೂ ಹಾಡುಗಳು ಒಂದಕ್ಕಿಂತ ಒಂದು ಅದ್ಭುತವಾಗಿವೆ. ಅರ್ಜುನ್ ಜನ್ಯ ಅವರು ಎಷ್ಟೇ ಬ್ಯುಸಿಯಾಗಿದ್ದರೂ ಹಾಡುಗಳನ್ನು ನೀಟಾಗಿ ಮಾಡಿಕೊಟ್ಟಿದ್ದಾರೆ. ಚೇತನ್ ಕುಮಾರ್ ಸಾಹಿತ್ಯವಿದೆ. ಎಲ್ಲಾ ವಿಷಯಗಳಲ್ಲೂ ‘ಅಯೋಗ್ಯ 2’ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ’ ಎಂಬುದು ಅವರ ಭರವಸೆ.
‘ಅಯೋಗ್ಯ ಮೊದಲ ಭಾಗ ಎಲ್ಲಿಗೆ ಮುಗಿದಿತ್ತೋ, ಅದರ ಮರು ದಿನದಿಂದ ಚಿತ್ರ ಶುರುವಾಗುತ್ತದೆ. ಎರಡ್ಮೂರು ಹೊಸ ಪಾತ್ರಗಳು ಬರುತ್ತವೆ ಎನ್ನುವುದು ಬಿಟ್ಟರೆ, ಮಿಕ್ಕಂತೆ ಎಲ್ಲಾ ಪಾತ್ರಗಳು ಮುಂದುವರಿಯುತ್ತವೆ. ‘ಅಯೋಗ್ಯ’ ಕೊನೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯನಾಗುವ ಸಿದ್ಧೇಗೌಡ ಮುಂದೆ ಏನೆಲ್ಲಾ ಸವಾಲುಗಳನ್ನು ಎದುರಿಸುತ್ತಾನೆ ಎನ್ನುವುದು ಚಿತ್ರದ ಕಥೆ’ ಅಂತಾರೆ ನಿರ್ದೇಶಕ ಮಹೇಶ್ ಕುಮಾರ್.
ಬಿಡುಗಡೆಗೆ ಅಣಿಯಾಗುತ್ತಿರುವ ಈ ಚಿತ್ರಕ್ಕೆ ಎಂ.ಮುನೇಗೌಡ ಬಂಡವಾಳ ಹೂಡಿದ್ದಾರೆ. ಸುಂದರ್ ರಾಜ್, ಶಿವರಾಜ್ ಕೆ.ಆರ್.ಪೇಟೆ, ಅರುಣಾ ಬಾಲರಾಜ್, ಮಂಜು ಪಾವಗಡ ತಾರಾಗಣದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಮಾಸ್ತಿ ಉಪ್ಪಾರಳ್ಳಿ ಸಂಭಾಷಣೆ, ‘ಶಾಖಾಹಾರಿ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ವಿಶ್ವಜಿತ್ ರಾವ್ ಈ ಚಿತ್ರದ ಕ್ಯಾಮೆರಾಮನ್.





Be the first to comment