ನಟ ದಿಗಂತ್ ಮಂಚಾಲೆ ಅಭಿನಯದ ಹೊಸ ಚಿತ್ರದ ಘೋಷಣೆ ಆಗಿದೆ.ನಟಿ ಹೆಬಾ ಪಟೇಲ್ ಅವರು ಸುಮಾರು 12 ವರ್ಷಗಳ ಬಳಿಕ ‘ರುದ್ರ ಕಾಲ’ ಸಿನಿಮಾದ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ.
ಶರಣ್ ಜೊತೆ ಅಭಿನಯಿಸಿದ್ದ ಅಧ್ಯಕ್ಷ ಸಿನಿಮಾ ಅವರಿಗೆ ಉತ್ತಮ ಹೆಸರು ತಂದುಕೊಟ್ಟಿತ್ತು. ಬಳಿಕ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅವಕಾಶಗಳನ್ನು ಪಡೆದು ಬ್ಯುಸಿಯಾಗಿದ್ದ ಅವರು ಇದೀಗ ದಿಗಂತ್ ಜೊತೆ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇತ್ತೀಚೆಗೆ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಚಿತ್ರದ ಮೊದಲ ಸನ್ನಿವೇಶಕ್ಕೆ ಚಾಲನೆ ನೀಡಿದರು. ನಿರ್ದೇಶಕ ರಾಜ್ ಗುರು ಕ್ಯಾಮೆರಾ ಆರಂಭಿಸಿದರು.
ನಿರ್ದೇಶಕ ಗೋಪಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ರಮೇಶ್ ನಾಯ್ಕ್ ನಿರ್ಮಾಪಕರಾಗಿದ್ದಾರೆ. ಸಹ ನಿರ್ಮಾಪಕರಾಗಿ ರಂಜಿತಾ ನವೀನ್ ಇದ್ದಾರೆ.
ಛಾಯಾಗ್ರಹಣವನ್ನು ಕ್ರಿಸ್ಟೋಫರ್ ಜೋಸೆಫ್ ನಿರ್ವಹಿಸಲಿದ್ದು, ರುದ್ರ ಮಾಸ್ಟರ್ ನೃತ್ಯ ನಿರ್ದೇಶನ, ಚನ್ನಯ್ಯ ಸಾಹಸ ನಿರ್ದೇಶನ ಮಾಡಲಿದ್ದಾರೆ.
ಚಿತ್ರದ ಟೈಟಲ್ ಪೋಸ್ಟರ್ ನ್ನು ನಟಿ ಸಮಂತಾ ರುತ್ ಪ್ರಭು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿರುವುದು ವಿಶೇಷ ಆಗಿದೆ.
ದಿಗಂತ್ ಮಂಚಾಲೆ, “ಇದು ಕ್ರೈಮ್ ಥ್ರಿಲ್ಲರ್ ಜೊತೆಗೆ ಕುಟುಂಬದ ಅಂಶಗಳನ್ನೂ ಹೊಂದಿರುವ ಕಥೆ. ನಾನು ಈವರೆಗೂ ಮಾಡದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ಹೆಬಾ ಪಟೇಲ್ ಅವರು “ನನ್ನ ವೃತ್ತಿ ಜೀವನ ಕನ್ನಡದಿಂದ ಆರಂಭವಾಗಿದೆ. ಇಷ್ಟು ವರ್ಷಗಳ ಬಳಿಕ ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿರುವುದು ಮನೆಗೆ ವಾಪಸ್ ಬಂದ ಅನುಭವ ನೀಡುತ್ತಿದೆ. ‘ರುದ್ರ ಕಾಲ’ ಉತ್ತಮ ಕಥಾಹಂದರ ಹೊಂದಿದ ಸಿನಿಮಾ ಆಗಿದೆ. ನಿರ್ದೇಶಕ ಗೋಪಿ ನೀಡಿದ ಈ ಅವಕಾಶಕ್ಕೆ ನಾನು ಕೃತಜ್ಞಳಾಗಿದ್ದೇನೆ” ಎಂದು ಹೇಳಿದ್ದಾರೆ.





Be the first to comment