ರನ್ಯಾ ರಾವ್ ಬಂಧನ ಆದೇಶ ಎತ್ತಿಹಿಡಿದ ಸುಪ್ರೀಂ

ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಕನ್ನಡದ ನಟಿ ರನ್ಯಾ ರಾವ್ ಅವರ ಬಂಧನಕ್ಕೆ ಕೇಂದ್ರ ಆರ್ಥಿಕ ಗುಪ್ತಚರ ಬ್ಯೂರೋ ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

ಈ ಆದೇಶದಿಂದ ರನ್ಯಾ ರಾವ್ ಅವರಿಗೆ ಹಿನ್ನಡೆ ಆಗಿದೆ. ಬಂಧನ ಕ್ರಮ ಸರಿಯಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಸಂವಿಧಾನದ 22(3)(ಬಿ) ವಿಧಿಯಡಿ ಅಧಿಕಾರಿಗಳು ಕ್ರಮ ಕೈಗೊಂಡಿರುವುದರಿಂದ ಯಾವುದೇ ಸಂವಿಧಾನ ಉಲ್ಲಂಘನೆ ಆಗಿಲ್ಲ ಎಂದು ಪೀಠ ತಿಳಿಸಿದೆ.

ಈ ಹಿಂದೆ ಕರ್ನಾಟಕ ಹೈಕೋರ್ಟ್ ಬಂಧನ ಆದೇಶವನ್ನು ಸಮರ್ಥಿಸಿತ್ತು. ಇದನ್ನು ಪ್ರಶ್ನಿಸಿ ರನ್ಯಾ ರಾವ್ ಅವರ ತಾಯಿ ಹಾಗೂ ಸಹಆರೋಪಿ ಸಾಹಿಲ್ ಸರ್ಕಾರಿಯ ಜೈನ್ ಸಂಬಂಧಿಕರು ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರ ಪೀಠ ಪರಿಶೀಲಿಸಿ ವಜಾಗೊಳಿಸಿದೆ.

2025ರ ಮಾರ್ಚ್ 3ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ರನ್ಯಾ ರಾವ್ ಅವರನ್ನು ಅಕ್ರಮ ಚಿನ್ನ ಸಾಗಾಟ ಸಂಬಂಧ ವಶಕ್ಕೆ ಪಡೆದಿದ್ದರು. ದುಬೈಯಿಂದ ಬೆಂಗಳೂರಿಗೆ ಚಿನ್ನ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿತ್ತು.

ಪರಿಶೀಲನೆಯ ವೇಳೆ ಸುಮಾರು 14.2 ಕಿಲೋಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದರು. ಚಿನ್ನವನ್ನು ಬೆಲ್ಟ್ ಮತ್ತು ಜಾಕೆಟ್‌ನಲ್ಲಿ ಮರೆಮಾಡಿ ಸಾಗಿಸಲಾಗುತ್ತಿತ್ತು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಪ್ರಕರಣದ ತನಿಖೆ ಮುಂದುವರಿದಿದ್ದು, ಸಂಬಂಧಿತ ಇತರ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!