ಎಲ್ರ ಕಾಲೆಳಿಯತ್ತೆ ಕಾಲ

ಟ್ರೇಲರ್ ನಲ್ಲೇ ಗಮನ ಸೆಳೆದ ‘ಎಲ್ರ ಕಾಲೆಳಿಯತ್ತೆ ಕಾಲ’

ಸುಜಯ್ ಶಾಸ್ತ್ರಿ ನಿರ್ದೇಶನದ, ಗೋಕುಲ ಎಂಟರ್ಟೈನರ್ಸ್ ಲಾಂಛನದಲ್ಲಿ ಗೋವಿಂದರಾಜು ಅವರು ನಿರ್ಮಿಸಿರುವ ಹಾಗೂ ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ “ಎಲ್ರ ಕಾಲೆಳಿಯತ್ತೆ ಕಾಲ” ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. 90 ರ ಕಾಲಘಟ್ಟದ ರೆಟ್ರೊ ಶೈಲಿಯ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಗೆ ಚಂದನ್ ಶೆಟ್ಟಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಏಪ್ರಿಲ್ 17 ರಂದು ಚಿತ್ರ ಬಿಡುಗಡೆಯಾಗುತ್ತಿದ್ದು, ಚಿತ್ರ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ‌. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಚಿತ್ರದ ಬಗ್ಗೆ ಹೇಳಿದ್ದು ಹೀಗೆ.

ಮೊದಲಿಗೆ ಕೇಳಿದನ್ನೆಲ್ಲಾ ಕೊಟ್ಟು ಒಂದೊಳ್ಳೆ ಚಿತ್ರ ಮೂಡಿಬರಲು ಸಹಕಾರ ನೀಡಿದ ನಿರ್ಮಾಪಕರಿಗೆ ಧನ್ಯವಾದ ಎಂದು ಮಾತನಾಡಿದ ನಿರ್ದೇಶಕ ಸುಜಯ್ ಶಾಸ್ತ್ರಿ, ರಿಯಾಲಿಟಿ ಶೋ ವೊಂದರಲ್ಲಿ ಚಂದನ್ ಶೆಟ್ಟಿ ಅವರನ್ನು ನೋಡಿದ ನನಗೆ ನಮ್ಮ ಕಥೆಗೆ ಇವರು ಸೂಕ್ತ ನಾಯಕ ಎಂದೆನಿಸಿತು. ನಂತರ ಚಂದನ್ ಶೆಟ್ಟಿ ಅವರಿಗೆ ನನ್ನ ಗೆಳೆಯ ರಾಜಗುರು ಹೊಸಕೋಟೆ ಬರೆದಿರುವ ಈ ಚಿತ್ರದ ಕಥೆ ಹೇಳಿದ್ದೆವು. ಚಂದನ್ ಅಭಿನಯಿಸಲು ಒಪ್ಪಿದರು. ಚಿತ್ರೀಕರಣಕ್ಕೂ ಮುನ್ನ ಪೂರ್ವತಯಾರಿ ನೀಡಲಾಯಿತು. ಈ ಚಿತ್ರಕ್ಕಾಗಿ ಚಂದನ್ ಬಹಳ ಶ್ರಮ ಪಟ್ಟಿದ್ದಾರೆ. ನಾಯಕಿ ಅರ್ಚನಾ ಕೊಟ್ಟಿಗೆ ಸಹ ಉತ್ತಮವಾಗಿ ಅಭಿನಯಿಸಿದ್ದಾರೆ. ಎಲ್ಲರ ಮನಸ್ಸಿಗೂ ಹತ್ತಿರವಾಗುವಂತಹ ಕಥೆಯನ್ನು ರಾಜಗುರು ಹೊಸಕೋಟೆ ಬರೆದಿದ್ದಾರೆ. ಪ್ರವೀಣ್ – ಪ್ರದೀಪ್ ಸುಮಧುರ ಸಂಗೀತ ನೀಡಿದ್ದಾರೆ. ತಂತ್ರಜ್ಞರ ಕಾರ್ಯ ವೈಖರಿ ಹಾಗೂ ಸಹ ಕಲಾವಿದರ ನಟನೆ ಸೊಗಸಾಗಿದೆ. ಏಪ್ರಿಲ್ 17 ನಮ್ಮ ಚಿತ್ರ ತೆರೆಗೆ ಬರುತ್ತಿದೆ. ಎಲ್ಲರೂ ನೋಡಿ. ಪ್ರೋತ್ಸಾಹ ನೀಡಿ ಎಂದರು.

ಎಲ್ರ ಕಾಲೆಳಿಯತ್ತೆ ಕಾಲ

ನಾನು ಈ ಚಿತ್ರದಲ್ಲಿ ನಟಿಸಲು ಮೊದಲ ಕಾರಣ ಕಥೆ. ಅಂತಹ ಅದ್ಭುತ ಕಥೆ ಇದು. ಇಂತಹ ಚಿತ್ರವನ್ನು ದಯವಿಟ್ಟು ಎಲ್ಲರೂ ನೋಡಿ ಗೆಲ್ಲಿಸಬೇಕು. ನಾಯಕನಾಗಿ ಇದು ನನ್ನ ಮೊದಲ ಚಿತ್ರ. ಸುಜಯ್ ಶಾಸ್ತ್ರಿ, ರಾಜಗುರು ಹೊಸಕೋಟೆ ಅವರೆಲ್ಲಾ ರಂಗಭೂಮಿ ಹಿನ್ನೆಲೆಯವರು. ಅವರು ಒಂದು ರೀತಿ ಶಾಲೆ ಇದ್ದ ಹಾಗೆ. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಟ್ರೇಲರ್ ಗೆ ನಿರೀಕ್ಷೆಗೂ ಮೀರಿ ಮೆಚ್ಚುಗೆ ಸಿಕ್ಕಿದೆ. ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡುವ ಒಂದೊಳ್ಳೆ ಚಿತ್ರ ಇದೇ ಹದಿನೇಳರಂದು ನಿಮ್ಮ ಮುಂದೆ ಬರಲಿದೆ. ಕನ್ನಡಿಗರಿಂದ ಕನ್ನಡಿಗರಿಗಾಗಿಯೇ ಮಾಡಿರುವ ಈ ಕನ್ನಡ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ ಎಂದರು ನಾಯಕ ಚಂದನ್ ಶೆಟ್ಟಿ.

ಸುಜಯ್ ಶಾಸ್ತ್ರಿ ಅವರ “ಗುಬ್ಬಿ ಮೇಲೆ ಬ್ರಹ್ಮಾಸ್ತ್ರ” ಚಿತ್ರ ನೋಡಿದ ಮೇಲೆ ಅವರ ನಿರ್ದೇಶನದಲ್ಲಿ ಚಿತ್ರವನ್ನು ನಿರ್ಮಿಸುವ ಆಸೆಯಾಯಿತು. ರಾಜಗುರು ಅವರು ಹೇಳಿದ ಕಥೆ ಇಷ್ಟವಾಯಿತು. ನಂತರ ಈ ಚಿತ್ರ ನಿರ್ಮಾಣವಾಯಿತು. ಇದೇ ಏಪ್ರಿಲ್ 17 ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಕೆ.ವಿ.ಎನ್ ಸಂಸ್ಥೆ ನಮ್ಮ ಚಿತ್ರವನ್ನು ವಿತರಣೆ ಮಾಡುತ್ತಿದೆ ಎಂದು ನಿರ್ಮಾಪಕ ಗೋವಿಂದರಾಜು ಹೇಳಿದರು.

ಕಾಲದ ಮಹತ್ವ ಸಾರುವ ಕಥೆಯಿದು ಎಂದು ಕಥೆಯ ಬಗ್ಗೆ ರಾಜಗುರು ಹೊಸಕೋಟೆ ಮಾಹಿತಿ ನೀಡಿದರು. ತಮ್ಮ ಪಾತ್ರ ಚೆನ್ನಾಗಿದೆ ಎಂದು ನಾಯಕಿ ಅರ್ಚನಾ ಕೊಟ್ಟಿಗೆ ಹೇಳಿದರು. ಚಿತ್ರದಲ್ಲಿ ನಟಿಸಿರುವ ಮಂಜು ಪಾವಗಡ, ಮಾಹಂತೇಶ್, ಅನಂತ ಪದ್ಮನಾಭ ಹಾಗೂ ಸಂಗೀತ ನಿರ್ದೇಶಕ ಪ್ರದೀಪ್ ಚಿತ್ರದ ಕುರಿತು ಮಾತನಾಡಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!