ತಮ್ಮ ಅಭಿನಯದ ಮೂಲಕ ಜನಮನ ಗೆದ್ದಿರುವ ಆದಿತ್ಯ ನಾಯಕರಾಗಿ ನಟಿಸಿರುವ, ಸಿಲ್ಕ್ ಮಂಜು, ರವಿ ಹಾಗೂ ಸ್ಮಿತಾ ವಸಿಷ್ಠ ಅವರು ಉಪ್ಪಿ ಎಂಟರ್ ಟೈನರ್ಸ್ ಲಾಂಛನದಲ್ಲಿ ನಿರ್ಮಿಸಿರುವ ಹಾಗೂ ರಂಜನ್ ಶಿವರಾಮ್ ಗೌಡ ನಿರ್ದೇಶನದ “ಟೆರರ್” ಚಿತ್ರ ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದಿದೆ. ಪ್ರಸ್ತುತ ಈ ಚಿತ್ರಕ್ಕಾಗಿ ಡಾ||ವಿ.ನಾಗೇಂದ್ರಪ್ರಸಾದ್ ಅವರು ಬರೆದಿರುವ “ಬೊಂಬೆ ಬೊಂಬೆ” ಎಂಬ ಹಾಡು ಎಂ.ಆರ್.ಟಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.
ಹರ್ಷವರ್ಧನ್ ರಾಜ್ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಖ್ಯಾತ ಗಾಯಕಿ ಮಮತ ಶರ್ಮ ಹಾಡಿದ್ದಾರೆ. ಆದಿತ್ಯ, ಉತ್ತರ ಭಾರತದ ಬೆಡಗಿ ಶಿವಾಂಗಿ ವರ್ಮ, ಶರತ್ ಲೋಹಿತಾಶ್ವ ಮುಂತಾದವರು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬಿಡುಗಡೆಯಾದ ಕ್ಷಣದಿಂದಲೇ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಧಿಕ ಸಂಖ್ಯೆಯಲ್ಲಿ ವಿಕ್ಷಣೆಯಾಗುತ್ತಿದೆ. ಬಹು ನಿರೀಕ್ಷಿತ ಈ ಚಿತ್ರ ಏಪ್ರಿಲ್ 10ರಂದು ತೆರೆಗೆ ಬರಲಿದೆ.
ರಂಜನ್ ಶಿವರಾಮ ಗೌಡ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಕಥೆ, ಚಿತ್ರಕಥೆ ಕೂಡ ರಂಜನ್ ಅವರದೆ. ನವೀನ್ ಅಕ್ಷಿ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಅವರ ಸಂಕಲನವಿರುವ ಈ ಚಿತ್ರಕ್ಕೆ ಕನಲ್ ಕಣ್ಣನ್ ಸಾಹಸ ನಿರ್ದೇಶನ ಹಾಗೂ ಭಾನು ಅವರ ನೃತ್ಯ ನಿರ್ದೇಶನವಿದೆ.
ಆದಿತ್ಯ ಅವರು ಈ ಹಿಂದೆ ಅಭಿನಯಿಸಿರುವ ಪಾತ್ರಗಳಿಗಿಂತ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. “ಟೆರರ್” ನಲ್ಲಿ ಗ್ಯಾಂಗ್ ಸ್ಟರ್ ಆಗಿ ಆದಿತ್ಯ ಕಾಣಿಸಿಕೊಂಡಿದ್ದಾರೆ. ಶ್ರೀನಗರ ಕಿಟ್ಟಿ, ದೇವರಾಜ್, ಶಶಿಕುಮಾರ್, ಕುಮಾರ್ ಬಂಗಾರಪ್ಪ, ಶರತ್ ಲೋಹಿತಾಶ್ವ, ಧರ್ಮ, ಕೋಟೆ ಪ್ರಭಾಕರ್, ರವಿ ಭಟ್ ಮುಂತಾದವರು ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ “ಟೆರರ್” ಚಿತ್ರದಲ್ಲಿದೆ.






Be the first to comment